ಸಾಲಬಾಧೆ ತಾಳಲಾರದೇ ಐದು ಪುಟಗಳ ಡೆತ್‌ನೋಟ್ ಬರೆದಿಟ್ಟು ಕೊಳ್ಳೇಗಾಲದಲ್ಲಿ ದಂಪತಿ ಆತ್ಮಹತ್ಯೆ

KannadaprabhaNewsNetwork | Updated : Aug 19 2024, 10:14 AM IST

ಸಾರಾಂಶ

ಸಾಲಬಾಧೆ ತಾಳಲಾರದೇ ದಂಪತಿ ಐದು ಪುಟಗಳ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ಕೊಳ್ಳೇಗಾಲದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ ಪಟ್ಟಣದ ನಾರಾಯಣಸ್ವಾಮಿ ಗುಡಿ ಬೀದಿಯ ವಾಸಿ ಪಿ.ಆರ್.ನಾಗೇಶ್(56) ಮತ್ತು ಪತ್ನಿ ಸತ್ಯಲಕ್ಷ್ಮಿ(46) ಮೃತ ದಂಪತಿ.

  ಕೊಳ್ಳೇಗಾಲ :  ಸಾಲಬಾಧೆ ತಾಳಲಾರದೇ ದಂಪತಿ ಐದು ಪುಟಗಳ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ ಪಟ್ಟಣದ ನಾರಾಯಣಸ್ವಾಮಿ ಗುಡಿ ಬೀದಿಯ ವಾಸಿ ಪಿ.ಆರ್.ನಾಗೇಶ್(56) ಮತ್ತು ಪತ್ನಿ ಸತ್ಯಲಕ್ಷ್ಮಿ(46) ಮೃತ ದಂಪತಿ. ಇವರ ಸಾವಿಗೆ ಸಾಲಗಾರರ ಕಿರುಕುಳ, ನಿಂದನೆ ಮತ್ತು ಲಘುವಾಗಿ ಬಳಸುತ್ತಿದ್ದ ಪದಗಳು, ಮಾನಸಿಕ ಹಿಂಸೆ ಕಾರಣ ಎಂದು ದಂಪತಿ 16 ಮಂದಿಯ ಹೆಸರನ್ನು ಮರಣಪತ್ರದಲ್ಲಿ ಉಲ್ಲೇಖಿಸಿ ನೇಣಿಗೆ ಶರಣಾಗಿದ್ದಾರೆ.

ಡೆಟ್‌ನೋಟ್‌ನಲ್ಲಿ ಏನಿದೆ?

ಮೖತ ನಾಗೇಶ್ ಅವರು ಹಲವು ವರುಷಗಳ ಕಾಲ ಹಲವು ಏಜೆನ್ಸಿ (ಕುರ್ ಕುರೆ ಸೇರಿದಂತೆ ಹಲವು ಕಂಪನಿ ಪದಾರ್ಥ) ಪಡೆಯುವ ಮೂಲಕ ವ್ಯಾಪಾರ , ವಹಿವಾಟು ನಡೆಸುತ್ತಿದ್ದರು. ಹೋಲ್‌ಸೇಲ್ ವ್ಯಾಪಾರಕ್ಕಾಗಿ ಹಲವರಿಂದ ಹಣ ಪಡೆದಿದ್ದರು. ಸುಮಾರು 30 ಲಕ್ಷ ರು.ಗೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ವ್ಯಾಪಾರದಲ್ಲಿ ನಷ್ಟವಾದ ಹಿನ್ನೆಲೆ ಪಡೆದ ಹಣ ಸಕಾಲದಲ್ಲಿ ಹಿಂತಿರುಗಿಸಲು ಸಾಧ್ಯವಾಗಿಲ್ಲ ಎನ್ನಲಾಗಿದ್ದು ಈ ವೇಳೆ ಸಾಲ ನೀಡಿದವರು ಆಗಿಂದಾಗ್ಗೆ ಕಿರುಕುಳ ನೀಡುತ್ತಿದ್ದರು, ಲಘುಪದ ಬಳಸಿ ನಿಂದಿಸುತ್ತಿದ್ದ ಹಿನ್ನೆಲೆ ದಂಪತಿ ಇಬ್ಬರೂ ಮಾನಕ್ಕಂಜಿ, ಸಾಲಗಾರರು ನೀಡುತ್ತಿದ್ದ ತೊಂದರೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಬರೆಯಲಾಗಿದೆ.

ಕೆಲವು ದಿನಗಳಿಂದ ದಂಪತಿಯು ಮೈಸೂರಿನ ಸಂಬಂಧಿ ಮನೆಯಲ್ಲಿದ್ದರು ಎನ್ನಲಾಗಿದೆ. ಆ.17ರಂದು ನಾರಾಯಣಸ್ವಾಮಿ ಗುಡಿ ಬೀದಿಯ ತಮ್ಮ ನಿವಾಸಕ್ಕೆ ಬಂದಿದ್ದ ದಂಪತಿ 5 ಪುಟಗಳ ಡೆತ್‌ನೋಟ್, ಪುತ್ರನಿಗೆ ವಾಯ್ಸ್ ಮೆಸೇಜ್ ಅನ್ನುಆ.18ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಳುಹಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿ ಹೇಳಿರುವುದಾಗಿ ಪುತ್ರ ಗಣೇಶ್ ನಾಗ್ ಪಟ್ಟಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ

16 ಮಂದಿ ಹೆಸರು ಉಲ್ಲೇಖ:

ಇಕ್ವೀಟಾಸ್ ಸ್ಮಾಲ್ ಪೈನಾನ್ಸ್ ಮ್ಯಾನೇಜರ್ ಆನಂದ್, ಎಲ್‌ಐಸಿಯ ಬಸವಲಿಂಗಪ್ಪ, ದೊರೆಸ್ವಾಮಿ, ಎಂ.ಆರ್.ಎಸ್.ಮಹದೇವಸ್ವಾಮಿ ಕಾರಣ ಎಂದು ನಾಗೇಶ್ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅದೇ ರೀತಿಯಲ್ಲಿ ಸತ್ಯಲಕ್ಷ್ಮಿಅವರು ನನ್ನ ಸಾವಿಗೆ ಪೂಜಾ, ಉಮಾ, ರಾಜಮ್ಮ, ದಾಕ್ಷಾಯಿಣಿ, ವಿಜಯಲಕ್ಷ್ಮಿ, ಮಾಸ್ಟರ್ ಕುಮಾರ, ಪ್ರಭಾ, ಮಧು, ಮಂಜುಳಾ, ಸುಂದ್ರಮ್ಮ, ಸುಶೀಲ ಕಾರಣ ಎಂದು ಉಲ್ಲೇಖಿಸಿದ್ದು 16 ಮಂದಿಯೂ ಆಗಿಂದಾಗ್ಗೆ ನಮಗೆ ಸಾಲ ಹಿಂತಿರುಗಿಸುವಂತೆ ನೀಡುತ್ತಿದ್ದ ಕಿರುಕುಳದಿಂದಾಗಿ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಮರಣಪತ್ರದಲ್ಲಿ ಬರೆದಿದ್ದಾರೆ.

ಈ ಹಿನ್ನೆಲೆ 16 ಮಂದಿ ವಿರುದ್ದ ತಂದೆ, ತಾಯಿ ಬರೆದಿಟ್ಟ ಡೆತ್‌ನೋಟ್ ಆಧಾರವಾಗಿಟ್ಟುಕೊಂಡು ಪುತ್ರ ಗಣೇಶ್ ನಾಗ್ ಪಿಎಸೈ ವರ್ಷ ಅವರಿಗೆ ದೂರು ನೀಡಿದ ಹಿನ್ನೆಲೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article