ವಿಚ್ಛೇದನಕ್ಕೆ ಮುಂದಾಗಿದ್ದ ಜೋಡಿಗಳು ಮತ್ತೆ ಒಂದಾದ ವಿಶೇಷ ವಿದ್ಯಮಾನಕ್ಕೆ ಶನಿವಾರ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಬೈಠಕ್ ಸಾಕ್ಷಿಯಾಯಿತು.
ಮಂಗಳೂರು: ವಿಚ್ಛೇದನಕ್ಕೆ ಮುಂದಾಗಿದ್ದ ಜೋಡಿಗಳು ಮತ್ತೆ ಒಂದಾದ ವಿಶೇಷ ವಿದ್ಯಮಾನಕ್ಕೆ ಶನಿವಾರ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಬೈಠಕ್ ಸಾಕ್ಷಿಯಾಯಿತು.
ಈ ಎರಡು ಜೋಡಿಗಳ ದಾಂಪತ್ಯ ಜೀವನದಲ್ಲಿ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿದ್ದ ಕಾರಣ ದಂಪತಿಗಳು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ವಿಚಾರಣೆ ವೇಳೆ ಈ ಪ್ರಕರಣವನ್ನು ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದ ಮೂಲಕ ಸರಿಪಡಿಸಲು ಪ್ರಯತ್ನ ನಡೆಯಿತು. ಪತಿ ಮತ್ತು ಪತ್ನಿಯ ಮಧ್ಯೆ ಸಂಧಾನ ಏರ್ಪಡಿಸಿ ಮತ್ತೆ ಒಂದುಗೂಡಿ ದಾಂಪತ್ಯ ಜೀವನ ಮುಂದುವರಿಸುವ ಬಗ್ಗೆ ಉಭಯರಿಗೂ ಮನವರಿಕೆ ಮಾಡಲಾಯಿತು. ಸಂಧಾನದ ವೇಳೆ ದಂಪತಿಗಳು ಮತ್ತೆ ಒಂದುಗೂಡಿ ಜೀವನ ಮುಂದುವರಿಸಲು ಒಪ್ಪಿದರು. ಅದರಂತೆ ಶನಿವಾರ ಲೋಕ ಅದಾಲತ್ ಗೆ ಆಗಮಿಸಿದ್ದ ಎರಡೂ ಜೋಡಿಗಳು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಲಕ್ಷ್ಮೀ ನಾರಾಯಣ ಭಟ್ ಕೆ. ಅವರ ಸಮಕ್ಷಮದಲ್ಲಿ ಪರಸ್ಪರ ಹಾರ ಬದಲಾಯಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿತು. ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ, ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ವಕೀಲರು ಉಪಸ್ಥಿತರಿದ್ದು, ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಲೋಕ ಅದಾಲತ್ ಅಧಿವೇಶನದಲ್ಲಿ ಭಾಗವಹಿಸಿದ್ದ ಎರಡೂ ಜೋಡಿಗಳು ಮತ್ತೆ ಒಂದಾಗುವ ಮೂಲಕ ತಮ್ಮ ವಿಚ್ಛೇದನದ ಹೋರಾಟವನ್ನು ಕೊನೆಗೊಳಿಸಿದ ಈ ವಿದ್ಯಮಾನ ಮಾದರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.