ಸಮಕಾಲೀನ ಸಮಸ್ಯೆಗೆ ಕುವೆಂಪು ಚಿಂತನೆ ಪರಿಹಾರ

KannadaprabhaNewsNetwork |  
Published : Jan 01, 2024, 01:15 AM IST
೩೧ಎಚ್‌ವಿಆರ್೩ | Kannada Prabha

ಸಾರಾಂಶ

ಸಮಕಾಲೀನ ಸಮಾಜದಲ್ಲಿ ಜಾತಿ, ಧರ್ಮ, ಭಾಷೆ ಕಾರಣಗಳಿಗೆ ಜರುಗುತ್ತಿರುವ ಸಮಸ್ಯೆಗಳಿಗೆ ರಾಷ್ಟ್ರಕವಿ ಕುವೆಂಪು ಅವರ ಚಿಂತನೆಗಳು ಪರಿಹಾರ ಒದಗಿಸಬಲ್ಲವು

ಕನ್ನಡಪ್ರಭ ವಾರ್ತೆ ಹಾವೇರಿ

ಸಮಕಾಲೀನ ಸಮಾಜದಲ್ಲಿ ಜಾತಿ, ಧರ್ಮ, ಭಾಷೆ ಕಾರಣಗಳಿಗೆ ಜರುಗುತ್ತಿರುವ ಸಮಸ್ಯೆಗಳಿಗೆ ರಾಷ್ಟ್ರಕವಿ ಕುವೆಂಪು ಅವರ ಚಿಂತನೆಗಳು ಪರಿಹಾರ ಒದಗಿಸಬಲ್ಲವು ಎಂದು ಡಿಡಿಪಿಯು ಡಾ. ಉಮೇಶಪ್ಪ ಎಚ್. ಅಭಿಪ್ರಾಯಪಟ್ಟರು.

ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ವಿಶ್ವಗುರು ವಿದ್ಯಾವರ್ಧಕ ಸೇವಾ ಸಂಸ್ಥೆ ಹಾಗೂ ಭಾವ ಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಡಿ ಜರುಗಿದ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮನ್ನು ಅನ್ವೇಷಣೆಗೊಳಪಡಿಸುವ ಕುವೆಂಪು ಒಬ್ಬ ಚಿಂತಕನಾಗಿ, ಕವಿತೆ, ನಾಟಕ, ಕಾದಂಬರಿ ಬರವಣಿಗೆಯ ಸಾಹಿತ್ಯದ ಜೊತೆಗೆ ಸಮಾಜವನ್ನು ವಿಮರ್ಶೆಗೊಳಪಡಿಸಿದವರು. ಪಾರಂಪರಿಕ ಧಾರ್ಮಿಕ ಸಂಕೋಲೆಗಳಿಂದ ಕಳಚಿ ಮನುಷ್ಯ ಮನುಷ್ಯನಾಗಿ ಬದುಕಬೇಕು. ನಿಸರ್ಗದಲ್ಲಿರದ ತಾರತಮ್ಯ ಮನುಷ್ಯ ಜಗತ್ತಿನಲ್ಲಿರುವ ಬಗ್ಗೆ, ದಬ್ಬಾಳಿಕೆ ಹಿಂಸೆಯ ಪ್ರತಿರೋಧ ಕುರಿತು ಅವರ ಚಿಂತನೆಗಳು ಪ್ರಸ್ತುತ ದಿನಗಳಿಗೂ ಅನ್ವಯಿಸುತ್ತವೆ. ಅವರ ಸಂದೇಶಗಳಲ್ಲಿ ಸಾಂತ್ವನ ಮತ್ತು ಆದರ್ಶ ಮೌಲ್ಯಗಳಿವೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ ಮಾತನಾಡಿ, ಮನುಜ ಮತ ವಿಶ್ವ ಪಥ ಸಂದೇಶದ ಮೂಲಕ ಸಮಾಜ ಪರಿವರ್ತನೆಯ ಜೊತೆಗೆ ಯುಗ ಪರಿವರ್ತಕರಾಗಿ ಗುರುತಿಸಿಕೊಂಡ ಕುವೆಂಪು ವಿಶ್ವದ ದಾರ್ಶನಿಕರ ಸಾಲಿನಲ್ಲಿ ಗಮನ ಸೆಳೆದವರು ಎಂದರು.

ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾವಿದ ಕರಿಯಪ್ಪ ಹಂಚಿನಮನಿ ಮಾತನಾಡಿ, ಸೂಕ್ಷ್ಮ ಸಂವೇದನಾಶೀಲ ಸ್ವಭಾವದ ಕುವೆಂಪು ಅವರ ಚಿಂತನೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕಾರ್ಯವಾಗಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ, ನೈಸ್ ಅಕಾಡೆಮಿ ಮುಖ್ಯಸ್ಥ ನಿಂಗರಾಜು ಸುಳ್ಳಳ್ಳಿ, ಭಾವ ಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಶೇಖರ ಭಜಂತ್ರಿ ಮಾತನಾಡಿದರು.

ಈರಣ್ಣ ಬೆಳವಡಿ, ಸೋಮನಾಥ ಡಿ., ಹನುಮಂತಸಿಂಗ್ ರಜಪೂತ್, ನೇತ್ರಾವತಿ ಅಂಗಡಿ, ವಾಗೀಶ ಹೂಗಾರ, ಮಂಜುನಾಥ ವಾಲ್ಮೀಕಿ, ಅಶ್ವಿನಿ ಕುಸನೂರ, ದಾನೇಶ್ವರಿ ಶಿಗ್ಗಾವಿ, ಮುತ್ತರಾಜ ಗುತ್ತಲ, ಐಶ್ವರ್ಯ ಡೊಳ್ಳಿನ, ಭೂಮಿಕಾ ರಜಪೂತ, ಕವನಾ ಕಲ್ಲನಗೌಡ್ರ ಕುವೆಂಪು ವಿರಚಿತ ಕಾವ್ಯ ವಾಚಿಸಿದರು.

ಸಾಹಿತಿ ಸತೀಶ ಕುಲಕರ್ಣಿ, ಎಸ್.ಆರ್. ಹಿರೇಮಠ, ರಾಜೇಂದ್ರ ಹೆಗಡೆ ಉಪಸ್ಥಿತರಿದ್ದರು. ಗೂಳಪ್ಪ ಅರಳಿಕಟ್ಟಿ ನಿರೂಪಿಸಿ, ಸ್ವಾಗತಿಸಿದರು. ಸಿದ್ದೇಶ್ವರ ಹುಣಸಿಕಟ್ಟಿಮಠ ವಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ