ಕನ್ನಡಪ್ರಭ ವಾರ್ತೆ ಕೋಲಾರಗ್ರಾಹಕನಿಗೆ ಹಕ್ಕಿನ ಜೊತೆಗೆ ಜವಾಬ್ದಾರಿಯೂ ಇದೆ. ಗ್ರಾಹಕನ ಹಕ್ಕು ಮತ್ತು ಜವಾಬ್ದಾರಿಗಳು ಒಂದನ್ನೊಂದು ಬೆಸೆದುಕೊಂಡಿವೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ವೈ.ಎಸ್. ತಮ್ಮಣ್ಣ ತಿಳಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ೨೦೨೪-೨೫ನೇ ಸಾಲಿನ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹಕ್ಕಿನ ಜತೆ ಹೊಣೆ:
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಮಾತನಾಡಿ, ಪ್ರತಿಯೊಂದು ಶಾಲೆಯಲ್ಲಿಯೂ ಗ್ರಾಹಕರ ಕ್ಲಬ್ ರಚಿಸಬೇಕು. ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಈ ಕಾಯ್ದೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ಸೇವೆ, ಶಿಕ್ಷಣ ಸೇವೆ ,ಬ್ಯಾಂಕಿಂಗ್ ಸೇವೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಗ್ರಾಹಕರಿಗೆ ತಕ್ಕಂತೆ ಸೇವೆ ಸಿಗದೇ ಇರುವ ಸಂದರ್ಭದಲ್ಲಿ ತಾವು ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಬಹುದು ಎಂದು ತಿಳಿಸಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮುನೇಗೌಡ ಮಾತನಾಡಿ, ಗ್ರಾಹಕರು ಯಾವುದೇ ಒಂದು ವಸ್ತುವನ್ನು ಖರೀದಿ ಮಾಡುವ ಸಂದರ್ಭದಲ್ಲಿ ತಪ್ಪದೆ ತಾವು ಬಿಲ್ ಕೇಳಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು ನೀವು ಖರೀದಿ ಮಾಡಿದ ವಸ್ತುವು ಗುಣಮಟ್ಟ ಇಲ್ಲದೆ ಇದ್ದರೆ ತಾವು ಗ್ರಾಹಕರ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸಬೇಕಾದರೆ ವ್ಯವಹಾರ ಮಾಡಿದ ಬಿಲ್ ಬೇಕಾಗುತ್ತದೆ. ಆದ್ದರಿಂದ ಗ್ರಾಹಕರೇ ಕೇಳಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಕೆ.ಎಸ್. ರಾಜು, ವಕೀಲ ನಚಿಕೇತ, ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಪ್ರಭುದೇವ್ ಮಾತನಾಡಿ, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಉಪನಿರ್ದೇಶಕಿ ಲತಾ.ಎಸ್, ಗ್ರಾಹಕರ ವ್ಯವಹಾರಗಳ ಜಿಲ್ಲಾ ವ್ಯವಸ್ಥಾಪಕ ಎಸ್.ಪ್ರಸಾದ್, ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಕೇಶ್ ಇದ್ದರು.