ಡಂಬಳ-ಗದಗ ಮುಖ್ಯ ರಸ್ತೆಯಲ್ಲೇ ಹಾಳಾದ ಕಬ್ಬಿಣದ ತಡೆಗೋಡೆ

KannadaprabhaNewsNetwork | Published : Apr 19, 2025 12:43 AM

ಸಾರಾಂಶ

ಡಂಬಳ ಮಾರ್ಗವಾಗಿ ಗದಗ, ಮುಂಡರಗಿ ಪಟ್ಟಣಕ್ಕೆ ತೆರಳುವ ಚೆಳ್ಳಿಕೇರಿ ಮುಖ್ಯ ರಸ್ತೆಯಲ್ಲಿ ಬರುವ ತಿರುವುಗಳಿಗೆ ಅಳವಡಿಸಿರುವ ಕಬ್ಬಿಣದ ತಡೆಗೋಡೆಗಳು ಸಂಪೂರ್ಣವಾಗಿ ಹಾಳಾಗಿವೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಕನ್ನಡಪ್ರಭ ವಾರ್ತೆ ಡಂಬಳ

ಡಂಬಳ ಮಾರ್ಗವಾಗಿ ಗದಗ, ಮುಂಡರಗಿ ಪಟ್ಟಣಕ್ಕೆ ತೆರಳುವ ಚೆಳ್ಳಿಕೇರಿ ಮುಖ್ಯ ರಸ್ತೆಯಲ್ಲಿ ಬರುವ ತಿರುವುಗಳಿಗೆ ಅಳವಡಿಸಿರುವ ಕಬ್ಬಿಣದ ತಡೆಗೋಡೆಗಳು ಸಂಪೂರ್ಣವಾಗಿ ಹಾಳಾಗಿವೆ.

ರಸ್ತೆ ಮಾರ್ಗದಲ್ಲಿರುವ ಲೋಹದ ತಡೆಗೋಡೆಯು ರಸ್ತೆಯ ವಿವಿಧ ಪ್ರದೇಶಗಳನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ ಮತ್ತು ವಾಹನಗಳು ಅಪಾಯಕಾರಿ ವಲಯಗಳ ದಾರಿಯಲ್ಲಿ ಅಪಘಾತ ಸಂಭವಿಸುವುದನ್ನು ತಡೆಯುವ ಮೂಲಕ ಸುರಕ್ಷತೆಯನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಇವುಗಳನ್ನು ಉಕ್ಕಿನಿಂದ ತಯಾರಿಸಲಾಗುತ್ತದೆ ಮತ್ತು ಕಂಬಗಳೊಂದಿಗೆ ನೆಲಕ್ಕೆ ಲಂಗರು ಹಾಕಲಾಗುತ್ತದೆ. ವಿವಿಧ ಹವಾಮಾನ ಪರಿಸ್ಥಿತಿ ತಡೆದುಕೊಳ್ಳುವಂತೆ ಅವುಗಳನ್ನು ವಿನ್ಯಾಸಗೊಳಿಸಲಾಗಿದೆ.

ಡಂಬಳ ಮಾರ್ಗದಿಂದ ಗದಗ ನಗರಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ಅಳವಡಿಸಿರುವ ಲೋಹದ ತಡೆಗೋಡೆಗಳು ಈಗಾಗಲೇ ಸಂಪೂರ್ಣವಾಗಿ ಹಾಳಾಗಿದ್ದು ಅಲ್ಲದೆ ರಸ್ತೆಯುದ್ದಕ್ಕೂ ಸರಿಯಾದ ಅಪಘಾತದ ವಲಯ ಎನ್ನುವ ಫಲಕಗಳನ್ನು ಸರಿಯಾದ ಮಾರ್ಗಸೂಚಿಗಳ ಫಲಕಗಳನ್ನು ಹಾಕದೆ ಇರುವುದರಿಂದ ಈ ರಸ್ತೆಯ ಭಾಗದಲ್ಲಿ ಬಹುತೇಕ ಅಪಘಾತಗಳು ಸಂಭವಿಸಿ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಹಾಳಾದ ಲೋಹದ ತಡೆಗೋಡೆಗಳು

ಡಂಬಳ ಗ್ರಾಮದಿಂದ ತೆರಳುವಾಗ ಡೋಣಿ ಕ್ರಾಸ್ ಬಳಿ ಅಳವಡಿಸಿರುವ ಲೋಹದ ತಡೆಗೋಡೆ ಸಂಪೂರ್ಣ ಹಾಳಾಗಿದೆ ಮತ್ತು ಜಂಧಿಪೀರಾ ದರಗಾಕ್ಕೆ ಹೋಗುವ ರಸ್ತೆಯ ತಿರುವಿನಲ್ಲಿ ಹಾಳಾಗಿವೆ. ಈ ರಸ್ತೆಯಲ್ಲಿ ಸಂಚರಿಸುವ ಬೈಕ್, ಲಾರಿ, ಕಾರು, ಬಸ್‌, ಭಾರೀ ಫ್ಯಾನ್‌ಗಳ ಬಿಡಿಭಾಗಗಳನ್ನು ತೆಗೆದುಕೊಂಡು ಹೋಗುವ ಲಾರಿಗಳು, ಟ್ಯಾಕ್ಟರ್, ರಾತ್ರಿ ರಭಸವಾಗಿ ಮರಳು ತುಂಬಿಸಿಕೊಂಡು ಹೋಗುವ ಟಿಪ್ಪರ್‌ಗಳು, ರೈತರು ತಮ್ಮ ಜಮೀನುಗಳಿಗೆ ತೆರಳುವ ರೈತರ ಚಕ್ಕಡಿಗಳಿಗೆ ಸುರಕ್ಷತೆ ಇರದ ಕಾರಣ ಭಯದ ವಾತಾವರಣದಲ್ಲಿಯೆ ಜನಸಾಮಾನ್ಯರು ಅಕ್ಷರಶಃ ತಮ್ಮ ಪ್ರಾಣವನ್ನು ಅಂಗೈಯಲ್ಲಿ ಇಟ್ಟುಕೊಂಡು ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಇದಕ್ಕೆ ಸೂಕ್ತ‌ ಸುರಕ್ಷತಾ ಕ್ರಮಗಳನ್ನು ಇಲಾಖೆ ತೆಗೆದುಕೊಳ್ಳಲು ಮುಂದಾಗಬೇಕು ಎನ್ನುತ್ತಾರೆ ಈ ಭಾಗದ ಗ್ರಾಮಸ್ಥರು.

ಚೆಳ್ಳಿಕೇರಿ ಮುಖ್ಯರಸ್ತೆಯಲ್ಲಿ ಕೊರ್ಲಹಳ್ಳಿ ಮತ್ತು ಕದಾಂಪುರ ಗ್ರಾಮದ ನಡುವೆ ಎರಡು ಟೋಲ್ ಇದ್ದು ಇವೆರಡು 60 ಕಿ.ಮೀ ಅಂತರದ ಒಳಗಡೆ ಇವೆ ಎಂದು ಕದಾಂಪುರ ಟೋಲ್‌ ಗೇಟ್‌ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡಿದ್ದು ಇದೆ. ಆದರೆ ರಸ್ತೆ ಸುರಕ್ಷಾ ಪ್ರಾಧಿಕಾರದ ನಿಯಮಗಳನ್ನು ಈ ಟೋಲ್ ಅಳವಡಿಸದೆ ಇರುವುದನ್ನು ಇಲಾಖೆ ಕಂಡು ಕಾಣದೆ ಕಣ್ಣುಮುಚ್ಚಿಕೊಂಡು ಕುಳಿತಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.

ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ‌. ಪಾಟೀಲ್, ರೋಣ ಶಾಸಕ ಜಿ.ಎಸ್. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ನರಗುಂದ ಶಾಸಕ ಸಿ.ಸಿ. ಪಾಟೀಲ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎನ್ನುತ್ತಾರೆ ವಿವಿಧ ಸಂಘಟನೆಗಳು.

ಕಬ್ಬಿಣದ ತಡೆಗೋಡೆಗಳು ಕೆಲ ವರ್ಷಗಳಿಂದ ಹಾಳಾದರೂ ಕೂಡಾ ಸರಿಪಡಿಸದೆ ಇರುವ ಕಾರಣ ಡೋಣಿ ಕ್ರಾಸ್ ಕದಾಂಪುರ ಮತ್ತು ಜಿಂಧೇಶಾವಲಿ ದರಗಾದ ಹತ್ತಿರ ಇರುವ ತಿರುವುಗಳಲ್ಲಿ ಈಗಾಗಲೆ ಸಾಕಷ್ಟು ಜನರು ಅಪಾಘಾತದಲ್ಲಿ ಅಸುನೀಗಿದ್ದು ಕಬ್ಬಿಣದ ತಡೆಗೋಡೆಗಳನ್ನು ಶೀಘ್ರವಾಗಿ ಸರಿ ಪಡಿಸಬೇಕು ಎಂದು ಬೈಕ್‌ ಚಾಲಕ

ರಮೇಶ ಕೊಪ್ಪರ ಹೇಳಿದರು.

Share this article