ರಾಮನಗರ: ತೀವ್ರ ಕುತೂಹಲ ಕೆರಳಿಸಿರುವ ಬೆಂಗಳೂರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟ್ಟು ಬಗೆಹರಿದಿದ್ದು, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಫೈನಲ್ ಆಗಿದೆ.
ನಾಮಪತ್ರ ಸಲ್ಲಿಕೆಗೆ ಆರು ದಿನಗಳಷ್ಟೇ ಬಾಕಿ ಉಳಿದಿದೆ. ಬಿಜೆಪಿಯ ಹಾಲಿ ಸದಸ್ಯ ಅ.ದೇವೇಗೌಡ ಹೆಸರನ್ನೇ ದೋಸ್ತಿ ಅಭ್ಯರ್ಥಿ ಎಂದು ಅಂತಿಮಗೊಳಿಸಿ ಮೇ 11ರಂದು ಶನಿವಾರ ಸಂಜೆ ಬಿಜೆಪಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದ್ದು, ಈಗಾಗಲೇ ಉಭಯ ಪಕ್ಷಗಳ ಕಾರ್ಯಕರ್ತರು ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯಲ್ಲಿಯೇ ಜೆಡಿಎಸ್ - ಬಿಜೆಪಿ ಮೈತ್ರಿ ಪ್ರಾರಂಭವಾಗಿತ್ತು. ಅದು ಲೋಕಸಭಾ ಚುನಾವಣೆ ಬಳಿಕ ಪ್ರಸ್ತುತ ಬೆಂಗಳೂರು ಪದವೀಧರ ಕ್ಷೇತ್ರ ಸೇರಿದಂತೆ ವಿಧಾನ ಪರಿಷತ್ ನ 6 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿಯೂ ಮುಂದುವರೆದಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ ನ ಎ.ಪಿ.ರಂಗನಾಥ್ ಅವರಿಗೆ ಬಿಜೆಪಿ ಬಿಟ್ಟುಕೊಟ್ಟಿತ್ತು. ಈಗ ಬೆಂಗಳೂರು ಪದವೀಧರ ಕ್ಷೇತ್ರ ಬಿಜೆಪಿಗೆ ದಕ್ಕುವ ಸಾಧ್ಯತೆಗಳು ನಿಚ್ಚಳವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮೋಜಿಗೌಡ ಕಣಕ್ಕಿಳಿಯುತ್ತಿದ್ದು, ಮೇ 13ರಂದು ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ. ನಾಮಪತ್ರ ಸಲ್ಲಿಸಲು ಮೇ 16 ಕೊನೆಯ ದಿನವಾಗಿದ್ದು, ರಜೆ ದಿನಗಳನ್ನು ಹೊರತು ಪಡಿಸಿದರೆ ನಾಲ್ಕು ದಿನಗಳಷ್ಟೇ ಉಳಿದಿವೆ. ಆದರೂ ಬಿಜೆಪಿ - ಜೆಡಿಎಸ್ ಮೈತ್ರಿಕೂಟದಲ್ಲಿ ಅಭ್ಯರ್ಥಿ ಆಯ್ಕೆ ಗೊಂದಲ ಮಾತ್ರ ಬಗೆ ಹರಿದಿಲ್ಲ.
ವಿಧಾನ ಪರಿಷತ್ ಹಾಲಿ ಬಿಜೆಪಿ ಸದಸ್ಯ ಅ.ದೇವೇಗೌಡ ಮತ್ತೊಮ್ಮೆ ಟಿಕೆಟ್ ಬಯಸಿದ್ದಾರೆ. ಇವರ ಜೊತೆಗೆ ಹಿರಿಯ ವಕೀಲ ಆರ್.ಎಸ್.ಉದಯಸಿಂಗ್, ತೆರಿಗೆ ಸಲಹೆಗಾರ ಎಸ್.ನಂಜುಂಡ ಸ್ವಾಮಿ, ಬಿಜೆಪಿ ರಾಜ್ಯ ಸಂಚಾಲಕರಾಗಿದ್ದ ಅಡಿಗನಹಳ್ಳಿ ಆನಂದ್ , ಮುಖಂಡ ವಿನೋದ್ ಕೃಷ್ಣಮೂರ್ತಿ ಸೇರಿ ಕೆಲವರು ಆಕಾಂಕ್ಷಿತರು. ಇವರೆಲ್ಲರು ಟಿಕೆಟ್ ಗಾಗಿ ತಮ್ಮ ನಾಯಕರ ಮೂಲಕ ವರಿಷ್ಠರ ಮಟ್ಟದಲ್ಲಿ ಲಾಭಿ ನಡೆಸುತ್ತಿದ್ದಾರೆ. ಆದರೆ, ಬಿಜೆಪಿ ಪಕ್ಷದ ಕೇಂದ್ರಿಯ ಚುನಾವಣಾ ಸಮಿತಿ ಲೋಕಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದೆ. ಹೀಗಾಗಿ ವಿಧಾನ ಪರಿಷತ್ ನ ಆರು ಸ್ಥಾನಗಳ ಚುನಾವಣೆ ಬಗ್ಗೆ ಅಷ್ಟಾಗಿ ಗಮನ ಹರಿಸಿಲ್ಲ. ಹೀಗಾಗಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವ ಹೊಣೆಯನ್ನು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಹೆಗಲಿಗೆ ಬಿದ್ದಿದೆ.
ವಿಧಾನ ಪರಿಷತ್ 6 ಸ್ಥಾನಗಳಲ್ಲಿ ಹಾಲಿ ಬಿಜೆಪಿ ಸದಸ್ಯರಿಗೆ ಟಿಕೆಟ್ ನೀಡುವ ತೀರ್ಮಾನಕ್ಕೆ ಬರಲಾಗಿದ್ದು, ಅದರಂತೆ ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಅ.ದೇವೇಗೌಡರ ಹೆಸರು ಅಂತಿಮಗೊಳ್ಳಲಿದೆ ಎಂದು ಪಕ್ಷದ ಮೂಲಗಳು ದೃಢಪಡಿಸಿವೆ.
ಈ ಮೊದಲು ಜೆಡಿಎಸ್ ನಲ್ಲಿದ್ದ ಅ.ದೇವೇಗೌಡರು 2018ರ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದ ಪರಿಣಾಮ ಬಿಜೆಪಿ ಸೇರಿ ಕಣಕ್ಕಿಳಿದಿದ್ದರು. ಆ ಚುನಾವಣೆಯಲ್ಲಿ 16702 ಮತ ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ ಪರವಾಗಿ ಚಲಾವಣೆಯಾದರೆ 12838 ಮತಗಳು ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಪರವಾಗಿ ಚಲಾವಣೆಯಾಗಿತ್ತು. 3864 ಮತಗಳ ಅಂತರದಿಂದ ಅ.ದೇವೇಗೌಡ ಗೆಲುವು ಸಾಧಿಸಿದ್ದರು.
ಅಂದಿನಿಂದಲೂ ಪಕ್ಷ ಸಂಘಟನೆಯಲ್ಲಿ ತೊಡಗಿರುವ ದೇವೇಗೌಡರು, ಪಕ್ಷದ ಪ್ರತಿಯೊಂದು ಕಾರ್ಯಚಟುವಟಿಕೆಯಲ್ಲಿಯೂ ಸಕ್ರಿಯರಾಗಿದ್ದಾರೆ. ಅಲ್ಲದೆ, ಪದವೀಧರರ ಪರವಾಗಿ ಸದನದ ಒಳಗೆ ಹೊರಗೆ ಸಾಕಷ್ಟು ಹೋರಾಟಗಳನ್ನು ನಡೆಸಿದ್ದಾರೆ. ಇದೆಲ್ಲವೂ ದೇವೇಗೌಡರಿಗೆ ಬಿಜೆಪಿ ಟಿಕೆಟ್ಟೆ ದಕ್ಕಲು ಪ್ಲಸ್ ಪಾಯಿಂಟ್ ಆಗಲಿವೆ.
ಲೋಕಸಭಾ ಚುನಾವಣೆ ಬೆನ್ನ ಹಿಂದೆಯೇ ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆಯನ್ನು ಬಿಜೆಪಿ - ಜೆಡಿಎಸ್ ಮೈತ್ರಿಕೂಟ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಮೈತ್ರಿ ಪಕ್ಷಗಳು ದೋಸ್ತಿ ಅಭ್ಯರ್ಥಿ ಅ.ದೇವೇಗೌಡರ ಮೂಲಕ ಟಕ್ಕರ್ ನೀಡಲು ಮುಂದಾಗಿದ್ದರೆ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವೂ ರಾಮೋಜಿಗೌಡ ಅವರನ್ನೇ ಕಣಕ್ಕಿಳಿಸಿ ರಣತಂತ್ರ ರೂಪಿಸಿದೆ.
ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆಗೆ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಾಲಿ ಸದಸ್ಯ ಅ.ದೇವೇಗೌಡ, ಮುಖಂಡ ಅಡಿಗನಹಳ್ಳಿ ಆನಂದ್ ಸೇರಿದಂತೆ ಹಲವರು ಆಕಾಂಕ್ಷಿತರು ಇದ್ದಾರೆ. ನಾಳೆ (ಮೇ11) ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರರವರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಅಭ್ಯರ್ಥಿ ಯಾರೆಂಬುದು ಫೈನಲ್ ಆಗಲಿದೆ.
-ಅಶ್ವತ್ಥ ನಾರಾಯಣಗೌಡ, ರಾಜ್ಯ ಮುಖ್ಯ ವಕ್ತಾರ, ಬಿಜೆಪಿ