70 ವರ್ಷಗಳಲ್ಲಿ ಆಗದ ಅಭಿವೃದ್ಧಿ 10 ವರ್ಷದಲ್ಲಿ ಆಗಿದೆ: ಡಾ. ಕ್ಯಾವಟರ್

KannadaprabhaNewsNetwork | Published : Apr 23, 2024 12:50 AM

ಸಾರಾಂಶ

ದೇಶದಲ್ಲಿ 70 ವರ್ಷಗಳು ಆಳ್ವಿಕೆ ನಡೆಸಿದವರು ಮಾಡಲು ಆಗದ ಅಭಿವೃದ್ಧಿಯನ್ನು ಕೇವಲ ಹತ್ತು ವರ್ಷಗಳಲ್ಲಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ದೇಶದಲ್ಲಿ 70 ವರ್ಷಗಳು ಆಳ್ವಿಕೆ ನಡೆಸಿದವರು ಮಾಡಲು ಆಗದ ಅಭಿವೃದ್ಧಿಯನ್ನು ಕೇವಲ ಹತ್ತು ವರ್ಷಗಳಲ್ಲಿ ಮಾಡಲಾಗಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಹೇಳಿದರು.

ಲೋಕಸಭಾ ಚುನಾವಣೆ ನಿಮಿತ್ತ ವಣಗೇರಿ ಹಾಗೂ ಮುಧೋಳ ಮಹಾಶಕ್ತಿ ಕೇಂದ್ರದಲ್ಲಿ ಕಲ್ಯಾಣ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡು ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ, ರೈಲು ನಿಲ್ದಾಣ, ಮಂಗಳಯಾನ ಮತ್ತು ರೈತಹಿತ ಸೇರಿ ಹಲವು ಜನಪರ ಯೋಜನೆಗಳನ್ನು ಜಾರಿ ಮಾಡುವುದರೊಂದಿಗೆ ಸರ್ವರನ್ನು ಹಿತ ಕಾಯುವ ರೀತಿಯಲ್ಲಿ ಪ್ರಧಾನಿ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದರು.

ಜಗತ್ತಿನ ಅತಿದೊಡ್ಡ ಆರ್ಥಿಕ ಕ್ಷೇತ್ರದಲ್ಲಿ ಭಾರತವು ಐದನೇ ಸ್ಥಾನಕ್ಕೇರಿದೆ. ಬರುವ ವರ್ಷಗಳಲ್ಲಿ 3 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಮೂಲಕ ಜಗತ್ತಿನ ಅತ್ಯಧಿಕ ದೊಡ್ಡ ಆರ್ಥಿಕತೆ ದೇಶ ಎಂದು ಹೊರಹೊಮ್ಮಲಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಕೊಲೆಗಾರನ ಮನೆಗೆ ಭದ್ರತೆ ನೀಡುವ ಮೂಲಕ ಮುಸ್ಲಿಂ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಮಾತನಾಡಿ, ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬಾರಿ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಂತ್ರಿಯನ್ನಾಗಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ, ಜೆಡಿಎಸ್ ಮುಖಂಡ ಮಲ್ಲನಗೌಡ ಕೋನಗೌಡ, ಬಸವರಾಜ ಗೌರಾ, ಶರಣಪ್ಪ ರಾವಣಕಿ, ಶಿವಶಂಕರ ದೇಸಾಯಿ, ಬಸಲಿಂಗಪ್ಪ, ಸೋಮಶೇಖರ್ ಗೌಡ್ರ, ಬಸವರಾಜ ಗುಳಗುಳಿ, ಶಿವಲೀಲಾ, ಅಮರೇಶ್ ಹುಬ್ಬಳ್ಳಿ, ಕೆಂಚಪ್ಪ ಹಳ್ಳಿ, ರಾಜಶೇಖರ್, ಶಿವಲೀಲಾ, ಕೊಟ್ರಪ್ಪ ಸೇರಿದಂತೆ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Share this article