ಕಾರವಾರ: ಅಬ್ಬರದ ನೃತ್ಯ, ಬಣ್ಣದೋಕುಳಿ, ಬಗೆ ಬಗೆಯ ಮುಖವಾಡಗಳು, ಗಣಪತಿ ಬಪ್ಪಾ ಮೋರಯಾ ಎಂಬ ಹರ್ಷೋದ್ಗಾರಗಳ ನಡುವೆ ಕಾರವಾರದ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಮಂಗಳವಾರ ವಿಸರ್ಜಿಸಲಾಯಿತು. ಗಣಪತಿ ಮೂರ್ತಿಗಳ ಮೆರವಣಿಗೆಯನ್ನು ಸಹಸ್ರ ಸಹಸ್ರ ಜನರು ಕಣ್ತುಂಬಿಕೊಂಡರು. ಅದರಲ್ಲೂ ನಗರದ ಸವಿತಾ ವೃತ್ತದಿಂದ ಸುಭಾಷ ವೃತ್ತದ ತನಕ ಜನರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಆಟೋರಿಕ್ಷಾ ಚಾಲಕ, ಮಾಲೀಕರು ಪ್ರತಿಷ್ಠಾಪಿಸಿದ ಗಣೇಶ, ಮಾರುತಿ ದೇವಾಲಯದಲ್ಲಿ ಸ್ಥಾಪಿಸಿದ ಗಣಪ... ಹೀಗೆ ಒಂದೊಂದೇ ಗಣಪತಿ ಮೂರ್ತಿಗಳನ್ನು ತೆರೆದ ವಾಹನಗಳಲ್ಲಿ ಕರೆತಂದರು. ಒಂದೊಂದು ಗಣಪತಿ ಬಂದಾಗಲೂ ಆ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಕುಣಿತ, ವಾದ್ಯಮೇಳ, ಮುಖವಾಡಗಳನ್ನು ತೊಟ್ಟ ತಂಡಗಳು ನರ್ತಿಸುತ್ತ ಜನಮನ ರಂಜಿಸಿದರು. ಸಾರ್ವಜನಿಕ ಗಣಪನ ಮೂರ್ತಿಗಳು, ಆ ಮೂರ್ತಿಯ ಇಕ್ಕೆಲಗಳಲ್ಲಿ ಮಾಡಲಾದ ವಿವಿಧ ಪೌರಾಣಿಕ ದೃಶ್ಯಗಳ ಪ್ರತಿಕೃತಿಗಳು ಜನರನ್ನು ರಂಜಿಸಿದ್ದವು. ಸತ್ಯಗಣಪತಿ ಕಥೆ, ಅನ್ನ ಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಗಣೇಶೋತ್ಸವ ಸಮಿತಿಗಳು ಹಮ್ಮಿಕೊಂಡಿದ್ದವು. ಜತೆಗೆ ಭಜನೆ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿತ್ತು. 11 ದಿನಗಳ ಕಾಲ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಕಂಗೊಳಿಸುತ್ತಿದ್ದ ಮಂಟಪದಿಂದ ಗಣೇಶ ಮೂರ್ತಿಯನ್ನು ಸಾಲು ಸಾಲಾಗಿ ಕೊಂಡೊಯ್ದು ಸಂಜೆ ಕಡಲತೀರದಲ್ಲಿ ವಿಸರ್ಜಿಸಲಾಯಿತು.ಡಿಜೆ ವಿರುದ್ಧ ಪೊಲೀಸ್ ಕ್ರಮ ಸಮಂಜಸ: ಡಾ. ರವಿರಾಜ
ಕುಮಟಾ: ಇತ್ತೀಚೆಗೆ ನಮ್ಮ ದೇಶದ ಕಾನೂನಿಗೆ ವಿರುದ್ಧವಾಗಿ, ಧರ್ಮ ಪರಂಪರೆ ವಿರುದ್ಧವಾಗಿ ಧ್ವನಿವರ್ಧಕ ಹಾಗೂ ಡಿಜೆ ಜತೆಗೆ ಲೇಸರ್ ಲೈಟ್‌ಗಳನ್ನು ಬಳಸುವ ಅನಿಷ್ಟ ಸಂಪ್ರದಾಯ ಹೆಚ್ಚುತ್ತಿದ್ದು, ಸಾಮಾನ್ಯ ಜನರು ತಮ್ಮ ಇಷ್ಟದಂತೆ ಹಬ್ಬಆಚರಣೆ ಮತ್ತು ಶಾಂತಿಯುತ ಜೀವನ ನಡೆಸುವ ಸ್ವಾತಂತ್ರ್ಯವನ್ನೂ ಕಳೆದುಕೊಂಡಂತಾಗಿದೆ ಎಂದು ಡಾ. ರವಿರಾಜ ಕಡ್ಲೆ ಹೇಳಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕವಾಗಿ ಡಿಜೆ ಹಾಗೂ ಕಾನೂನುಬಾಹಿರ ಧ್ವನಿವರ್ಧಕಗಳ ಅತಿಬಳಕೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಜ್ಞಾವಂತ ಜನತೆ ಧ್ವನಿಮಾಲಿನ್ಯದ ಅಪಾಯಗಳನ್ನು ಅರಿತುಕೊಳ್ಳಬೇಕು. ಈಗಾಗಲೇ ಜಿಲ್ಲೆಯಲ್ಲಿ ಕೆಲವೆಡೆ ಈ ನಿಟ್ಟಿನಲ್ಲಿ ಪೊಲೀಸರು ಕೈಗೊಂಡ ಕ್ರಮಕ್ಕೆ ಸಂಪೂರ್ಣ ಬೆಂಬಲವಿದೆ ಎಂದರು.ಇದನ್ನೂ ತಪ್ಪು ಎಂದು ರಾಜಕಾರಣಿಗಳು ಹೇಳುವುದು ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಡಿಜೆ ಬಳಕೆಯನ್ನೇ ವೈಭವೀಕರಿಸಿ ಪೊಲೀಸ್ ಕ್ರಮವನ್ನು ವಿರೋಧಿಸುತ್ತಿರುವುದು ದುರಂತ. ಇದರಿಂದ ಅಧಿಕಾರಿಗಳ ಪ್ರಾಮಾಣಿಕ ಕಾರ್ಯಕ್ಕೂ ಅಡ್ಡಿಯಾಗುತ್ತದೆ ಎಂದರು.
ಜ್ಯೋತಿ ನಾಯ್ಕ, ಮಹೇಶ ಹೊನ್ನಾವರ ಮಾತನಾಡಿದರು. ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತಿಮ್ಮಪ್ಪ ಮುಕ್ರಿ ಸಂಘಟನೆಯ ನೇತೃತ್ವದಲ್ಲಿ ಸಾರ್ವಜನಿಕರಾದ ಶ್ರೀಧರ ಮುಕ್ರಿ, ಮಂಜುನಾಥ ಹಳ್ಳೇರ, ಲತಾ ನಾಯ್ಕ, ವಿದ್ಯಾ ಗೌಡ ಶಿಳ್ಳೆ, ನಾಗವೇಣಿ ಗೌಡ ಕೋಡ್ಕಣಿ, ಶ್ವೇತಾ ಗೌಡ, ಸೌಮ್ಯಾ ಪಟಗಾರ ಮಾಸೂರು, ಮಹೇಶ ಆಚಾರಿ, ಗಣಪತಿ ಪಟಗಾರ, ಮಹೇಂದ್ರ ಗೌಡ ಚಂದಾವರ, ವಿಘ್ನೇಶ್ವರ ಪಟಗಾರ, ಜೂಜೆ ಲೋಪಿಸ್, ರಾಜೇಶ್ ಫರ್ನಾಂಡಿಸ್, ಗಣೇಶ ನಾಯ್ಕ, ಮಹೇಂದ್ರ ಗೌಡ, ಮಾರುತಿ ಶೆಟ್ಟಿ, ಪ್ರತಿಭಾ ನಾಯ್ಕ ಕರ್ಕಿ, ವಿದ್ಯಾ ಗೌಡ, ಭಾರತಿ ನಾಯ್ಕ ಇತರರು ಇದ್ದರು.