ಹಾವೇರಿ: ಇಲ್ಲಿಯ ಸುಭಾಷ್ ಸರ್ಕಲ್‌ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಾವೇರಿ ಕಾ ರಾಜಾ ಮಹಾ ಗಣಪತಿಯ ಬೃಹತ್ ಶೋಭಾಯಾತ್ರೆ ಸಹಸ್ರಾರು ಸಂಖ್ಯೆಯ ಭಕ್ತರ ಜಯಘೋಷ, ಡಿಜೆ ಅಬ್ಬರದ ನಡುವೆ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.ಗಣೇಶ ಚತುರ್ಥಿ ಅಂಗವಾಗಿ ಹಾವೇರಿ ಕಾ ರಾಜಾ ಗಜಾನನ ಉತ್ಸವ ಸಮಿತಿ ವತಿಯಿಂದ ನಗರದ ಸುಭಾಷ ಸರ್ಕಲ್‌ನಲ್ಲಿ ಸುಮಾರು 14 ಅಡಿ ಎತ್ತರದ ಬೃಹತ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಕಳೆದ ಇಪ್ಪತ್ತೊಂದು ದಿನಗಳಿಂದ ಹಾವೇರಿ ಕಾ ರಾಜಾ ಗಣೇಶನಿಗೆ ದಿನಂಪ್ರತಿ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದವು. ಇತ್ತೀಚೆಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಕೂಡ ಅದ್ಧೂರಿಯಾಗಿ ನಡೆಸಲಾಯಿತು. ಸೋಮವಾರ ಸಂಜೆ ಹಾವೇರಿ ಕಾ ರಾಜಾ ಗಣೇಶನ ಮೇಲಿದ್ದ ವಿವಿಧ ಬಗೆಯ ಆಭರಣಗಳನ್ನು ಹರಾಜು ಮಾಡಲಾಯಿತು. ಮಂಗಳವಾರ ಮಧ್ಯಾಹ್ನ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಶೃಂಗರಿಸಿದ ವಾಹನದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪಿಸಿ ನಗರದ ತುಂಬೆಲ್ಲಾ ಬೃಹತ್ ಶೋಭಾಯಾತ್ರೆ ನಡೆಸಲಾಯಿತು. ಮೆರವಣಿಗೆಯಲ್ಲಿ ಗಣೇಶ ಮೂರ್ತಿಗೆ ಸೇಬು, ಮೋತಿ ಚೂರು, ದವನ, ಪೇರಲ ಹಣ್ಣು ಸೇರಿದಂತೆ ಮತ್ತಿತರ ಹಣ್ಣುಗಳಿಂದ ತಯಾರಿಸಿದ ಸುಮಾರು 150 ಕೆಜಿಗೂ ಅಧಿಕ ಹಣ್ಣಿನ ಬೃಹತ್ ಗಾತ್ರದ ಹಾರವನ್ನು ಹಾಕಲಾಗಿತ್ತು. ಇದಕ್ಕೂ ಮೊದಲು ವೀರಭದ್ರೇಶ್ವರ ದೇವಸ್ಥಾನದಿಂದ ಸುಭಾಷ್ ವೃತ್ತದವರೆಗೆ ಹಣ್ಣಿನ ಹಾರದ ಮೆರವಣಿಗೆ ನಡೆಸಲಾಯಿತು. ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಯುವಕರು, ಯುವತಿಯರು, ಮಕ್ಕಳು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಸಂಜೆ ಆಗುತ್ತಿದ್ದಂತೆ ಕಿಲೋ ಮೀಟರ್‌ವರೆಗೆ ಕತ್ತಲೆಯನ್ನು ಸೀಳಿಕೊಂಡು ಹೋಗುವ ಪ್ರಖರ ವಿದ್ಯುತ್ ಲೈಟಿಂಗ್, ಕಿವಿಗಡಚಿಕ್ಕುವ ಡಿಜೆ ಸೌಂಡ್‌ಗೆ ಸಾವಿರಾರು ಜನರು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತ ಸಾಗಿದರು.