ನಾಳೆಗೆ...........ಪಾಳುಬಿದ್ದ ವಿಶೇಷಚೇತನ ಮಕ್ಕಳ ಶಾಲಾ ಕಟ್ಟಡ

KannadaprabhaNewsNetwork |  
Published : Feb 28, 2024, 02:30 AM IST
4.ಕುದೂರು ಗ್ರಾಮದ ಶ್ರೀರಾಮಲೀಲಾ ಮೈದಾನದ ಬಳಿಯಿರುವ ಅರುಣೋದಯ ಅಂಗವಿಕಲ ಮಕ್ಕಳ ಶಾಲಾ ಕಟ್ಟಡದ ಮೇಲೆ ಮರ ಬೆಳೆದಿರುವುದು. | Kannada Prabha

ಸಾರಾಂಶ

ರಾಮನಗರ ಜಿಲ್ಲೆಯ ಕುದೂರಿನಲ್ಲಿರುವ ವಿಶೇಷಚೇತನ ಮಕ್ಕಳ ಶಾಲೆಗೆಂದು ನೀಡಿದ್ದ ಕಟ್ಟಡದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಮಕ್ಕಳು ಇಲ್ಲದೆ ಕಟ್ಟಡ ಯಾವುದೇ ಪ್ರಯೋಜನಕ್ಕೆ ಬಾರದೆ ಪಾಳು ಬಿದ್ದಿದೆ.

ಕಟ್ಟಡದ ಮೇಲೆ ಬೆಳೆದಿರುವ ಗಿಡಗಂಟಿಗಳು । ಕುಸಿದು ಬೀಳುವ ಹಂತದಲ್ಲಿ ಕಟ್ಟಡ । ಕಟ್ಟಡವನ್ನು ಪಂಚಾಯಿತಿ ಸುಪರ್ದಿಗೆ ಪಡೆದರೆ ಅನುಕೂಲಗಂ.ದಯಾನಂದ ಕುದೂರು

ಕನ್ನಡಪ್ರಭ ವಾರ್ತೆ ಕುದೂರು

ವಿಶೇಷಚೇತನ ಮಕ್ಕಳ ಶಾಲೆಗೆಂದು ನೀಡಿದ್ದ ಕಟ್ಟಡದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಮಕ್ಕಳು ಇಲ್ಲದೆ ಕಟ್ಟಡ ಯಾವುದೇ ಪ್ರಯೋಜನಕ್ಕೆ ಬಾರದೆ ಪಾಳು ಬಿದ್ದಿತ್ತು. ಈಗ ಅದರ ಮೇಲೆ ಮರಗಳು ಬೆಳೆಯುತ್ತಿರುವುದರಿಂದ ಕಟ್ಟಡ ಬಿರುಕು ಬಿಟ್ಟು ಈಗಲೋ ಆಗಲೋ ಕುಸಿದು ಬೀಳುವ ಸ್ಥಿತಿಯಲ್ಲಿದೆ.

ಗ್ರಾಮದ ಶ್ರೀರಾಮಲೀಲಾ ಮೈದಾನಕ್ಕೆ ಹೊಂದಿಕೊಂಡಂತೆ ಗ್ರಾಮ ಪಂಚಾಯಿತಿ ನೀಡಿದ ನಿವೇಶನದಲ್ಲಿ ಅರುಣೋದಯ ವಿಶೇಷಚೇತನ ಮಕ್ಕಳ ಶಾಲೆ ಎಂಬ ಹೆಸರಿನ ಶಾಲೆ ಆರಂಭಗೊಂಡಿತ್ತು. ಆದರೆ ಕಳೆದ ವಿಶೇಷಚೇತನ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇರುವ ಮಕ್ಕಳು ಎಲ್ಲರೂ ವಿದ್ಯಾಭ್ಯಾಸ ಮಾಡುವ ಶಾಲೆಯಲ್ಲಿಯೇ ಅಭ್ಯಾಸ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟ ಕಾರಣ ಈ ಶಾಲೆ ಮುಚ್ಚಲ್ಪಟ್ಟಿತು.

ಈ ಶಾಲೆಯನ್ನು ಖಾಸಗಿ ವ್ಯಕ್ತಿಗಳು ಟ್ರಸ್ಟ್‌ವೊಂದನ್ನು ಮಾಡಿಕೊಂಡು ವ್ಯವಸ್ಥಿತವಾಗಿ ಶಾಲೆಯನ್ನು ನಡೆಸಿ ಒಂದಷ್ಟು ಸಾಮಾಜಿಕ ಸೇವಾ ಕಾರ್ಯದಲ್ಲೂ ತೊಡಗಿದ್ದರು. ಆದರೆ ಈಗ ಶಾಲೆಯಲ್ಲಿ ಮಕ್ಕಳಿಲ್ಲದ ಕಾರಣ ಕಟ್ಟಡ ಪ್ರಯೋಜನಕ್ಕೆ ಬಾರದಂತಾದ ಮೇಲೆ ಕಾರ್ಯಕಾರಿ ಮಂಡಳಿ ಕೂಡಾ ನಿಷ್ಕ್ರಿಯರಾಗಿದ್ದಾರೆ.

ಗ್ರಾಮದಲ್ಲಿ ಅಂಗನವಾಡಿ ಕಟ್ಟಡವಿಲ್ಲದ ಕಾರಣ ಎರಡು ವರ್ಷಗಳ ಕಾಲ ಅಂಗನವಾಡಿ ಶಾಲೆ ಈ ಕಟ್ಟಡದಲ್ಲಿ ನಡೆಯಿತು. ಸ್ವಂತ ಕಟ್ಟಡಕ್ಕೆ ಅವರು ತೆರಳಿದ ನಂತರ ಕಟ್ಟಡ ಅನಾಥವಾದಂತಾಯಿತು. ಪೊಲೀಸ್ ಠಾಣೆಯ ಹಿಂದೆಯೇ ಕಟ್ಟಡ ಇದ್ದರೂ ವಿಶೇಷಚೇತನ ಶಾಲೆಯ ಕಟ್ಟಡದ ಮೇಲೆ ಕುಡುಕರು ರಾತ್ರಿ ವೇಳೆ ಮದ್ಯಪಾನ ಮಾಡಲು ಮತ್ತು ಗಾಂಜಾ ಸೇವನೆಯಂತಹ ಅನೈತಿಕ ಚಟುವಟಿಕೆಗಳಿಗೆ ಬಳಸುವಂತಾಗಿದೆ ಎಂದು ದೂರಲಾಗಿದೆ.

ಕುದೂರು ಗ್ರಾಮ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನಗರ ಪಂಚಾಯಿತಿಯಾಗಿ ಮಾರ್ಪಾಡಾಗುತ್ತಿದೆ. ಇತರೆ ತಾಲೂಕಿನ ಕಚೇರಿಗಳು ಗ್ರಾಮಕ್ಕೆ ಮಂಜೂರಾಗುವ ಕಾರಣ ಎಲ್ಲ ಕಚೇರಿಗಳು ಒಂದೇ ತಡೆಗೋಡೆ ಆವರಣದಲ್ಲಿ ಇರಲು ಅನುಕೂಲವಾಗಲು ಕೆಲಸ ನಿರ್ವಹಿಸದೆ ಇರುವ ವಿಶೇಷಚೇತನ ಶಾಲೆಯನ್ನು ಪಂಚಾಯಿತಿ ತನ್ನ ಸುಪರ್ದಿಗೆ ಪಡೆದರೆ ಉಪಯೋಗವಾಗುತ್ತದೆ ಎಂಬುದು ಸದಸ್ಯರ ಅಭಿಪ್ರಾಯವಾಗಿದೆ.

ಗ್ರಾಮದಲ್ಲಿ ಹಲವು ವರ್ಷಗಳ ಕಾಲ ವಿಶೇಷಚೇತನ ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಸಂಸ್ಥೆ ತುಂಬಾ ಸೇವೆ ಮಾಡಿದೆ. ಈಗ ವಿಶೇಷಚೇತನ ಮಕ್ಕಳು ಇಲ್ಲದ ಕಾರಣ ಕಟ್ಟಡ ಕೆಲಸಕ್ಕೆ ಬಾರದಂತಾಗಿದೆ. ಪಂಚಾಯಿತಿ ಕೊಟ್ಟ ನಿವೇಶನವನ್ನು ಮತ್ತೆ ಅವರಿಗೆ ವಾಪಸ್ ಕೊಡಲು ಯೋಚಿಸುತ್ತೇವೆ.

ಸೋಮಶೇಖರ್, ಅಧ್ಯಕ್ಷರು, ಅರುಣೋದಯ ವಿಶೇಷಚೇತನ ಶಾಲೆಕುದೂರು ಗ್ರಾಮದ ಶ್ರೀರಾಮಲೀಲಾ ಮೈದಾನದ ಬಳಿ ಅರುಣೋದಯ ಅಂಗವಿಕಲ ಮಕ್ಕಳ ಶಾಲಾ ಕಟ್ಟಡದ ಮೇಲೆ ಮರ ಬೆಳೆದಿರುವುದು.

ಬಿರುಕು ಬಿಟ್ಟಿರುವ ಕಟ್ಟಡದ ಗೋಡೆಗಳು.ಅರುಣೋದಯ ವಿಶೇಷಚೇತನ ಮಕ್ಕಳ ಶಾಲಾ ಕಟ್ಟಡ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...