ಹುಬ್ಬಳ್ಳಿ:
ಪ್ರಸ್ತುತ ದಿನಮಾನಗಳಲ್ಲಿ ಚರ್ಚೆ, ಸಂವಾದಗಳು ಅವನತಿಯಾಗುತ್ತಿವೆ. ಸಾಮಾಜಿಕ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ನಡೆಯುವುದೇ ಚರ್ಚೆ ಹಾಗೂ ಸಂವಾದ ಎಂಬ ಭಾವನೆ ಜನರಲ್ಲಿ ಮೂಡಿರುವುದು ಕಳವಳಕಾರಿ ಸಂಗತಿ ಎಂದು ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ. ಚಂದ್ರ ಪೂಜಾರಿ ಕಳವಳ ವ್ಯಕ್ತಪಡಿಸಿದರು.ನಗರದ ಎಸ್‌ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಹಾಗೂ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸಹಯೋಗದಲ್ಲಿ ಮಂಗಳವಾರ ರಾಜ್ಯಮಟ್ಟದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮಾದರಿ ಗ್ರಾಮ ಪ್ರಬಂಧ ಸ್ಪರ್ಧೆ ಹಾಗೂ ಐದು ಗ್ಯಾರಂಟಿಗಳು: ಕರ್ನಾಟಕ ಆರ್ಥಿಕತೆಗೆ ಸಾಧಕವೋ? ಮಾರಕವೋ? ಎಂಬ ಚರ್ಚಾಸ್ಪರ್ಧೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧಾರವಾಡದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಪ್ರಕಾಶ ಹೊಸಮನಿ, ಇಂದು ಈ ತರಹದ ಸ್ಪರ್ಧೆ ಆಯೋಜಿಸುವುದು ಸವಾಲಿನ ಕೆಲಸವಾಗಿದೆ ಎಂದರು.ನಂತರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಆರ್.ವಿ. ದಾಡಿಬಾವಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಹುಬ್ಬಳ್ಳಿಯ ರೋಟರಿ ಕ್ಲಬ್‌ನ ಅಧ್ಯಕ್ಷ ಅರವಿಂದ ಕುಬಸದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯದ ವಿವಿಧ ಪದವಿ ಕಾಲೇಜುಗಳಿಂದ ಒಟ್ಟು 155 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಎಸ್‌ಜೆಎಂವಿ ಸಂಘದ ಗೌರವ ಸದಸ್ಯ ಮಲ್ಲಿಕಾರ್ಜುನ ಕಳಸರಾಯ, ರೋಟರಿ ಕ್ಲಬ್ ಸದಸ್ಯ ಪ್ರೇಮಂಚದ, ಪ್ರಾಚಾರ್ಯ ಡಾ. ಸಿಸಿಲಿಯಾ ಡಿʼಕ್ರೂಜ್, ಡಾ. ತಾಯಣ್ಣ, ಪ್ರೊ. ಶಶಾಂಕ, ಪ್ರೊ. ಅಶ್ವಿನಿ ಇಂದರಗಿ ಸೇರಿದಂತೆ ಹಲವರಿದ್ದರು. ಪ್ರೊ. ಶಿವಕುಮಾರ ಪ್ರಭಯ್ಯನವರಮಠ ವಂದಿಸಿದರು. ಚಿನ್ನಿಧಿ ಮಟ್ಟಿ ನಿರೂಪಿಸಿದರು.ಚರ್ಚಾ, ಪ್ರಬಂಧ ಸ್ಪರ್ಧೆ ವಿಜೇತರು
ಚರ್ಚಾ ಸ್ಪರ್ಧೆಯಲ್ಲಿ ಗದಗನ ಎ.ಎಸ್.ಎಸ್. ಕಾಲೇಜಿನ ವೈಭವ ಹಳ್ಳಿಕೇರಿ ಪ್ರಥಮ, ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ವಿದ್ಯಾರ್ಥಿನಿ ಯೋಗಿತಾ ದಿಡ್ಡಿಮಠ ದ್ವಿತೀಯ ಹಾಗೂ ಹುಬ್ಬಳ್ಳಿಯ ಆಕ್ಸಫರ್ಡ್ ಕಾಲೇಜು ವಿದ್ಯಾರ್ಥಿನಿ ಸೌರಭ ಮುರಡಿ ತೃತೀಯ ಬಹುಮಾನ ಪಡೆದರು. ಪ್ರಬಂಧ ಸ್ಪರ್ಧೆಯಲ್ಲಿ ಧಾರವಾಡದ ಶ್ರೀ ಸತ್ಯಸಾಯಿ ಸಂಸ್ಥೆಯ ವಿದ್ಯಾರ್ಥಿನಿ ಸಂಜನಾ ಮೂಲಿಮನಿ ಪ್ರಥಮ, ಬೆಳಗಾವಿಯ ಕೆ.ಎಲ್.ಇ. ಲಿಂಗರಾಜ ಕಾಲೇಜಿನ ವಿದ್ಯಾರ್ಥಿನಿ ಸೃಷ್ಠಿ ಡಿ. ಹಾರೋಗೇರಿ ದ್ವಿತೀಯ ಹಾಗೂ ಹುಬ್ಬಳ್ಳಿಯ ಜೆ.ಜಿ. ಕಾಮರ್ಸ್ ಕಾಲೇಜಿನ ವಿದ್ಯಾರ್ಥಿನಿ ಪಲ್ಲವಿ ಮಳಿಮಠ ತೃತೀಯ ಬಹುಮಾನ ಪಡೆದರು.