250 ಕಿಮೀಯಿಂದ ಮಾಲೀಕನ ಹುಡುಕಿ ಬಂತು ಶ್ವಾನ..!

KannadaprabhaNewsNetwork | Published : Aug 1, 2024 1:46 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಮಹಾರಾಷ್ಟ್ರದ ಪಂಢರಪುರ ವಿಠ್ಠಲ ಮತ್ತು ರುಕ್ಮೀಣಿ ದರ್ಶನಕ್ಕೆ ಪಾದಯಾತ್ರೆ ಮೂಲಕ ಮನೆ ಮಾಲೀಕನ ಜೊತೆಗೆ ತೆರಳಿದ್ದ ಶ್ವಾನ ಮಾರ್ಗದಲ್ಲಿ ದಾರಿ ತಪ್ಪಿಸಿಕೊಂಡು ಸುಮಾರು 250 ಕಿಮೀವರೆಗೂ ನಡೆದುಕೊಂಡು ಮರಳಿ ಮಾಲೀಕನ ಮನೆಸೇರುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾರಾಷ್ಟ್ರದ ಪಂಢರಪುರ ವಿಠ್ಠಲ ಮತ್ತು ರುಕ್ಮೀಣಿ ದರ್ಶನಕ್ಕೆ ಪಾದಯಾತ್ರೆ ಮೂಲಕ ಮನೆ ಮಾಲೀಕನ ಜೊತೆಗೆ ತೆರಳಿದ್ದ ಶ್ವಾನ ಮಾರ್ಗದಲ್ಲಿ ದಾರಿ ತಪ್ಪಿಸಿಕೊಂಡು ಸುಮಾರು 250 ಕಿಮೀವರೆಗೂ ನಡೆದುಕೊಂಡು ಮರಳಿ ಮಾಲೀಕನ ಮನೆಸೇರುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಮದ ಕಮಲೇಶ್ ಕುಂಬಾರ ಎಂಬುವವರಿಗೆ ಸೇರಿದ ಕಪ್ಪು ಹಾಗೂ ಬಿಳಿ ಬಣ್ಣ ಮಿಶ್ರಿತ ಮಹಾರಾಜ್ ಎಂಬ ಹೆಸರಿನ ಸಾಕು ನಾಯಿ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ದಾರಿತಪ್ಪಿಸಿಕೊಂಡಿದ್ದ ನಾಯಿ ಎಲ್ಲಿಯೋ ತಪ್ಪಿಸಿಕೊಂಡಿರಬಹುದು ಎಂದು ಮನೆ ಮಂದಿ ತಿಳಿದುಕೊಂಡಿದ್ದರು. ಆದರೆ, ನಾಯಿ ಬರೋಬ್ಬರಿ 250 ಕಿಮೀ ದೂರದವರೆಗೆ ಕ್ರಮಿಸಿ, ತನ್ನ ಮಾಲೀಕನ ಮನೆಗೆ ಮರಳಿದ್ದು, ಇದರಿಂದ ಸಂತಸಗೊಂಡಿರುವ ಕುಟುಂಬದವರು ಸೇರಿ ಗ್ರಾಮಸ್ಥರು ನಾಯಿಗೆ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೇ, ಔತಣಕೂಟವನ್ನು ಹಮ್ಮಿಕೊಂಡು ಸಂಭ್ರಮಿಸಿದರು.

ಜೂನ್ ತಿಂಗಳ ಕೊನೆಯ ವಾರದಲ್ಲಿ, ತನ್ನ ವಾರ್ಷಿಕ ವಾರಿ ಪಾದಯಾತ್ರೆಯ ವೇಳೆ, ಮಹಾರಾಜ್ ತನ್ನ ಯಜಮಾನನೊಂದಿಗೆ ಪಂಡರಪುರಕ್ಕೆ ಹೋದಾಗ, ವೈಥೋಬಾ ದೇವಾಲಯದಲ್ಲಿ ದರ್ಶನ ಮಾಡಿ ವಾಪಸ್ ಬರುವ ವೇಳೆ ನಾಯಿ ಕಾಣೆಯಾಗಿತ್ತು. ಇದರಿಂದ ಕಮಲೇಶ್ ಕುಂಬಾರ್ ದೇವಸ್ಥಾನದ ಬೀದಿಯಲ್ಲಿ ಹುಡುಕಾಡಿದ್ದರು. ಆದರೆ,ನಾಯಿ ಮಾತ್ರ ಕಾಣಲಿಲ್ಲ. ಇದರಿಂದಾಗಿ ನಿರಾಶೆಯಿಂದಲೇ ಅವರು ತಮ್ಮೂರಿನತ್ತ ಮರಳಿ ಬಂದಿದ್ದರು.

ಜು.14ರಂದು ಮನೆಗೆ ಮರಳಿದ ಕಮಲೇಶ್ ನಾಯಿಯು ಕಾಣೆಯಾಗಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆದರೆ ಕೆಲವು ದಿನಗಳ ನಂತರ ಕಾಣೆಯಾಗಿದ್ದ ನಾಯಿ ಮನೆ ಮುಂದೆ ಬಂದು ಕೂಗಾಡಿದಾಗ ಕುಟುಂಬಸ್ಥರು ನೋಡಿದ ವೇಳೆ ತಮ್ಮನಾಯಿ ಮಹಾರಾಜ್ ಬಾಲವನ್ನು ಅಲುಗಾಡಿಸುತ್ತಾ ಕಾಣಿಸಿದೆ. ಇದರಿಂದ ಸಂತೋಷಗೊಂಡ ಮಾಲೀಕ ಹಾಗೂ ಗ್ರಾಮದ ಜನರು ಔತಣಕೂಟ ಏರ್ಪಡಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.

----------

ಕೋಟ್‌....

ಸುಮಾರು 250 ಕಿ.ಮೀ.ನಿಂದ ದಾರಿ ಹುಡುಕಿಕೊಂಡು ಮರಳಿ ತಾವು ಸಾಕಿದ ನಾಯಿ ಮರಳಿ ಮನೆಗೆ ಬಂದಿದೆ. ಇದು ಪಾಂಡುರಂಗನ ದಯೆ. ತಮ್ಮ ನಾಯಿಮರಳಿ ಮನೆಗೆ ಬಂದಿರುವುದು ತುಂಬಾ ಖುಷಿಯ ವಿಚಾರ.

- ಕಮಲೇಶ ಕುಂಬಾರ, ಶ್ವಾನ ಮಾಲೀಕ

Share this article