ಓರ್ವ ಪ್ರಯಾಣಿಕನಿಗೆ ಗಂಭೀರ ಗಾಯ । ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಪ್ರಯಾಣಿಕರು
ಕನ್ನಡಪ್ರಭ ವಾರ್ತೆ ಮದ್ದೂರುಪಾನಮತ್ತ ವ್ಯಕ್ತಿಯೊಬ್ಬ ಸಾರಿಗೆ ಸಂಸ್ಥೆ ಬಸ್‌ಗೆ ಕಲ್ಲು ತೂರಿದ ಪರಿಣಾಮ ಓರ್ವ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಮಳವಳ್ಳಿ ರಸ್ತೆಯ ಈದ್ಗಾ ಮೈದಾನದ ಬಳಿ ಶುಕ್ರವಾರ ಜರುಗಿದೆ.
ಕಲ್ಲು ತೂರಿದ ವ್ಯಕ್ತಿಯ ವರ್ತನೆಯಿಂದ ರೊಚ್ಚಿಗೆದ್ದ ಬಸ್ ಪ್ರಯಾಣಿಕರು ಆತನನ್ನು ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕು, ಜಾಲಿಹಳ್ಳಿಹುಂಡಿಯ ಜೈಕುಮಾರ್ (30) ಎಂಬ ಪ್ರಯಾಣಿಕ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದಾನೆ. ಈತನಿಗೆ ಮದ್ದೂರು, ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.
ಘಟನೆ ಸಂಬಂಧ ಕೊಳ್ಳೇಗಾಲ ಡಿಪೋ ಬಸ್ ಚಾಲಕ ರಂಗಸ್ವಾಮಿ ನೀಡಿರುವ ದೂರಿನನ್ವಯ ಮದ್ದೂರು ವಿ.ವಿ.ನಗರದ ನಾಗರಾಜ ಅಲಿಯಾಸ್ ಹಂದಿನಾಗ ಎಂಬುವವನ ವಿರುದ್ಧ ಪೊಲೀಸರು ಐಪಿಸಿ 307 ರನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಕೊಳ್ಳೇಗಾಲ ಡಿಪೋಗೆ ಸೇರಿದ ಸಾರಿಗೆ ಬಸ್ಸು (ಕೆ.ಎ. 10-ಎಫ್-369) ಬೆಂಗಳೂರಿನಿಂದ ಕೊಳ್ಳೇಗಾಲಕ್ಕೆ ತೆರಳುತ್ತಿತ್ತು. ರಾತ್ರಿ 9.30ರ ಸಮಯದಲ್ಲಿ ಮಳವಳ್ಳಿ ರಸ್ತೆಯ ಈದ್ಗಾ ಮೈದಾನದ ಬಳಿ ಪಾನಮತ್ತನಾಗಿ ಅರೆಬೆತ್ತಲೆಯಲ್ಲಿ ನಿಂತಿದ್ದ ಆರೋಪಿ ನಾಗರಾಜ ಅಲಿಯಾಸ್ ಸಂದಿನಾಗ, ಚಲಿಸುತ್ತಿದ್ದ ಬಸ್ಸಿನ ಎಡಭಾಗದ ಕಿಟಕಿಗೆ ಕಲ್ಲಿನಿಂದ ಒಡೆದಿದ್ದಾನೆ. ಕಲ್ಲು ಕಿಟಕಿ ಪಕ್ಕದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಜಯಕುಮಾರ್ ತಲೆಗೆ ಬಡಿದು ಆತ ತೀವ್ರವಾಗಿ ಗಾಯಗೊಂಡಿದ್ದಾನೆ.
ಚಾಲಕ ಬಸ್ ನಿಲ್ಲಿಸಿದ ನಂತರ ಆರೋಪಿ ಹಂದಿನಾಗ ಪ್ರಯಾಣಿಕರೆಡೆಗೆ ನುಗ್ಗಿ ಅವರನ್ನೂ ಸಾಯಿಸುತ್ತೇನೆಂದು ಹಲ್ಲೆಗೆ ಮುಂದಾಗಿದ್ದಾನೆ. ರೊಚ್ಚಿಗೆದ್ದ ಪ್ರಯಾಣಿಕರು ಆತನನ್ನು ಹಿಗ್ಗಾಮುಗ್ಗಾ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.ಘಟನೆಯ ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಮಹಿಳಾ ಪೊಲೀಸ್ ಪೇದೆ ವಿರುದ್ಧ ಆರೋಪಿ ಹಂದಿನಾಗ ಅಸಭ್ಯವಾಗಿ ವರ್ತಿಸಿದ್ದಾನೆ. ಆರೋಪಿ ನಾಗರಾಜ ಕೆಲ ವರ್ಷಗಳ ಹಿಂದೆ ಲೀಲಾವತಿ ಬಡಾವಣೆಯ ಮಾಜಿ ಸಚಿವ ಡಿ.ಸಿ. ತಮ್ಮ ಣ್ಣ ಅವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ ಆರೋಪದ ಮೇಲೆ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಸದ್ಯ ಆತ ಜಾಮೀನು ಪಡೆದುಕೊಂಡಿದ್ದಾನೆ.
ಪ್ರಯಾಣಿಕರ ಹಲ್ಲೆಯಿಂದ ಗಾಯಗೊಂಡಿರುವ ಆರೋಪಿ ನಾಗರಾಜ, ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡ ನಂತರ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ತಿಳಿಸಿದ್ದಾರೆ.----------
23ಕೆಎಂಎನ್ ಡಿ30ಪಾನಮತ್ತ ವ್ಯಕ್ತಿ ಕಲ್ಲು ತೂರಿದ್ದರಿಂದ ಗಂಭೀರವಾಗಿ ಗಾಯಗೊಂಡಿರುವ ಜೈ ಕುಮಾರ್ .