ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಘಟಿಕೋತ್ಸವ : ನಾಲ್ಕು ಚಿನ್ನದ ಪದಕ ಮುಡಿಗೇರಿಸಿಕೊಂಡ ರೈತನ ಮಗಳು

KannadaprabhaNewsNetwork |  
Published : Feb 09, 2025, 01:32 AM ISTUpdated : Feb 09, 2025, 12:03 PM IST
ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು | Kannada Prabha

ಸಾರಾಂಶ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವದಲ್ಲಿ ರೈತನ ಮಗಳು ನಾಲ್ಕು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

 ಬೆಳಗಾವಿ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ವಾರ್ಷಿಕ ಘಟಿಕೋತ್ಸವದಲ್ಲಿ ರೈತನ ಮಗಳು ನಾಲ್ಕು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಶನಿವಾರ ನಡೆದ ಘಟಿಕೋತ್ಸವದಲ್ಲಿ ವಿವಿಧ ಸ್ನಾತಕೋತ್ತರ ಪದವೀಧರರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪದವಿ ಪ್ರದಾನ ಮಾಡಿದರು. ಸ್ನಾತಕೋತ್ತರ ಪದವೀಧರಿಗೆ 7194 ಎಂಬಿಎ ಪದವಿ, 3784 ಎಂಸಿಎ, 1314 ಎಂಟೆಕ್, 83 ಎಂ.ಆರ್ಚ್, 23 ಎಂಪ್ಲ್ಯಾನ್ ಪದವಿ ಸೇರಿದಂತೆ 425 ಪಿಎಚ್‌ಡಿ ಪದವಿ, ಮೂರು ಎಂಎಸ್ಸಿ ಸಂಶೋಧನಾ ಪದವಿ ಹಾಗೂ 5 ಇಂಟಿಗ್ರೇಟೆಡ್ ಡುಯಲ್ ಪದವಿಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಚಿನ್ನದ ಪದಕ ವಿಜೇತರು:

ಎಂಬಿಎ ವಿಭಾಗದಲ್ಲಿ ಬೆಂಗಳೂರಿನ ಸಾಯಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಶ್ವೇತಾ ಎಚ್.ಯು ಅವರು ನಾಲ್ಕು ಚಿನ್ನದ ಪದಕ, ಎಂಸಿಎ ವಿಭಾಗದಲ್ಲಿ ಬೆಂಗಳೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ರಚನಾ ಆರ್. ಅವರು ಮೂರು ಚಿನ್ನದ ಪದಕ, ಎಂಇ ವಿಭಾಗದಲ್ಲಿ ಬೆಂಗಳೂರಿನ ಎಚ್‌ಜೆಬಿಐಟಿಯ ಅನ್ವಿತಾ ಎಂ. ಕುಮಾರ್ ಹಾಗೂ ಎಂಟೆಕ್ ವಿಭಾಗದಲ್ಲಿ ಚಿಕ್ಕಬಳ್ಳಾಪುರದ ಎಸ್‌ಜೆಸಿಐಟಿಯ ಯಶಸ್ ಎಲ್. ಹಾಗೂ ಹಳಿಯಾಳದ ಕೆಎಲ್‌ಎಸ್‌ಡಿಐಟಿ ಸುಪ್ರಿಯಾ ರಜಪೂತ್ ಅವರು ತಲಾ ಎರಡು ಚಿನ್ನದ ಪದಕ ಪಡೆದು ಸಾಧನೆ ಮೆರೆದರು.

ಹಳ್ಳಿ ಹುಡುಗಿ ಪ್ರತಿಭೆಗೆ 4 ಚಿನ್ನದ ಪದಕ:

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹೊಳೆಕೊಪ್ಪ ಗ್ರಾಮದ ಶ್ವೇತಾ ಎಚ್.ಯು. ಬೆಂಗಳೂರಿನ ಸಾಯಿ ವಿದ್ಯಾ ಸಂಸ್ಥೆಯಲ್ಲಿ ಎಂಬಿಎ ಪೂರ್ಣಗೊಳಿಸಿದ್ದು, 4 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಶ್ವೇತಾ ತಂದೆ ಉಮೇಶ ನಾಯಿಕ, ತಾಯಿ ಗೀತಾ ರೈತರು. ಎರಡು ಎಕರೆ ಸ್ವಂತ ಜಮೀನಿನಲ್ಲಿ ಕೃಷಿ ಮಾಡುತ್ತಾ, ಕೂಲಿ ಕೆಲಸಕ್ಕೂ ಹೋಗಿ ತಮ್ಮ ಇಬ್ಬರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುತ್ತಿದ್ದಾರೆ. ಶ್ವೇತಾ ಸಹೋದರಿ ಸ್ವಾತಿ ನರ್ಸಿಂಗ್ ಕಲಿಯುತ್ತಿದ್ದಾರೆ. ನನಗೆ 4 ಚಿನ್ನದ ಪದಕ ಬಂದಿರುವುದಕ್ಕೆ ತುಂಬಾ ಖುಷಿ ಆಗುತ್ತಿದೆ. ಅಪ್ಪ-ಅವ್ವ, ಉಪನ್ಯಾಸಕರು ಮತ್ತು ದೇವರಿಗೆ ಅರ್ಪಿಸುತ್ತೇನೆ. ಪರೀಕ್ಷೆ ಹಿಂದಿನ ದಿನದವರೆಗೂ ಓದುತ್ತಿದ್ದೆ.‌ ಪರೀಕ್ಷೆ ಸಮೀಪಿಸಿದಾಗ ಮೊಬೈಲ್ ಬಹಳ ಕಮ್ಮಿ ಉಪಯೋಗಿಸುತ್ತಿದ್ದೆ. ಮುಂದೆ ಕೆಎಎಸ್ ಪರೀಕ್ಷೆ ಎದುರಿಸುವ ಗುರಿ‌ ಹೊಂದಿದ್ದೇನೆ. ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ತಂದೆ-ತಾಯಿ ಚನ್ನಾಗಿ ನೋಡಿಕೊಳ್ಳುವ ಆಶಯ ಇಟ್ಟುಕೊಂಡಿದ್ದೇನೆ ಎಂದು ಶ್ವೇತಾ ಹರ್ಷ ವ್ಯಕ್ತಪಡಿಸಿದರು.

ಕಾರ್ಮಿಕನ‌ ಮಗಳಿಗೆ ಎರಡು ಚಿನ್ನ:

ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ದಾಂಡೇಲಿಯ ಸುಪ್ರಿಯಾ ಪರಶುರಾಮ ಸಿಂಗರಜಪೂತ್‌ಗೆ 2 ಚಿನ್ನದ ಪದಕ ಒಲಿದಿದೆ.

ತಂದೆ ಪರಶುರಾಮ ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನಲ್ಲಿ ಕಾರ್ಮಿಕರಾಗಿದ್ದಾರೆ. ತಾಯಿ ಮನೆಗೆಲಸ ಮಾಡುತ್ತಾರೆ. ನಮ್ಮದು ಮಧ್ಯಮ ವರ್ಗದ ಕುಟುಂಬ, ತಂದೆ-ತಾಯಿ ಕಷ್ಟ ಪಟ್ಟು ಓದಿಸಿದ್ದರು. ಈಗ ಮೂರು ತಿಂಗಳ ಹಿಂದೆಯಷ್ಟೇ ಮದುವೆ ಆಗಿದೆ. ತಂದೆ ತಾಯಿ ಮುಂದೆ ಚಿನ್ನದ ಪದಕ ಪಡೆದಿರುವುದು ಬಹಳಷ್ಟು ಖುಷಿ ತಂದಿತು. ಈ ಪದಕಗಳನ್ನು ಅವರಿಗೆ ಅರ್ಪಿಸುತ್ತೇನೆ. ಸದ್ಯಕ್ಕೆ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಮುಂದೆ ಪಿಎಚ್‌ಡಿ ಮಾಡುವ ಗುರಿ ಇದೆ ಎಂದು ಪದಕ ಲಭಿಸಿರುವುದಕ್ಕೆ ಸುಪ್ರಿಯಾ ಸಂತಸ ವ್ಯಕ್ತ ಪಡಿಸಿದ್ದಾಳೆ.

2 ಚಿನ್ನದ ಪದಕ‌ ವಿಜೇತೆ ಅನ್ವಿತಾ ಎಂ. ಕುಮಾರ್ ಮಾತನಾಡಿ, ನನ್ನ ತಂದೆ-ತಾಯಿ, ಪ್ರಿನ್ಸಿಪಾಲ್, ಎಚ್ಒಡಿ, ಉಪನ್ಯಾಸಕರು ಹಾಗೂ ಸಿಬ್ಬಂದಿಗೆ ಧನ್ಯವಾದ ಸಲ್ಲಿಸುತ್ತೇನೆ. ಅವರೆಲ್ಲರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು.‌ ವಿಷಯ ಅರ್ಥ ಆಗೋವರೆಗೂ ಓದುತ್ತಿದ್ದೆ. ಮುಂದೆ ಕೆಎಎಸ್ ಅಧಿಕಾರಿಯಾಗಿ ಸಮಾಜಕ್ಕೆ ಒಳ್ಳೆಯ ಸೇವೆ ನೀಡುವ ಗುರಿ ಇಟ್ಟುಕೊಂಡಿದ್ದೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ