ಹಾನಗಲ್ಲ: ಬರವೋ ಬರ, ಬರಿ ಬಿಸಿಲಿನ ಅಬ್ಬರ, ನೀರಿಲ್ಲ ಎಂಬ ಕೂಗು, ಊರೂರ ತುಂಬ ಬಾಯಾರಿಕೆ ಸುದ್ದಿ, ಆದರೆ ಪ್ರಾಣಿ ಪಕ್ಷಿಗಳ ಬಾಯಾರಿಕೆ ನೀಗಿಸಲು ಬಂದವರೇ ನಿಜವಾದ ಸಹೃದಯಿಗಳು, ಅಂತಹ ಸಹೃದಯಿ ಹಾನಗಲ್ಲ ತಾಲೂಕಿನ ಪಂಡಿತ ಪಂಚಾಕ್ಷರಿ ಗವಾಯಿಗಳವರ ಜನ್ಮ ಭೂಮಿ ಕಾಡಶೆಟ್ಟಿಹಳ್ಳಿಯ ರೈತ ಸಂಗಪ್ಪ ಸಣ್ಣಮನಿ ತಮ್ಮ ಹೊಲದ ಕೊಳವೆಬಾವಿಯ ನೀರನ್ನು ಪ್ರಾಣಿ ಪಕ್ಷಿಗಳಿಗಾಗಿ ಕೆರೆಗೆ ಹರಿಸಿ ಹರುಷಪಟ್ಟಿದ್ದಾರೆ.ಕೊಳವೆಬಾವಿಗಳು ಬತ್ತುತ್ತಿವೆ. ಬೆಳೆಗೆ ನೀರಿಲ್ಲ ಎಂದು, ಇರುವ ನೀರನ್ನೇ ಜೋಪಾನವಾಗಿ ಬೆಳೆಗೆ ಹಾಯಿಸಿ ಹಾಕಿದ ಪೈರು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಸಂಗಪ್ಪ ಸಣ್ಣಮನಿ ಅವರು ಪ್ರಾಣಿ ಪಕ್ಷಿಗಳ ಬಾಯಾರಿಕೆ ನೀಗಿಸುವ ಬಯಕೆ ಹೊತ್ತು ಇಂಥ ಪುಣ್ಯ ಕಾರ್ಯಕ್ಕೆ ಮುಂದಾಗಿದ್ದಾರೆ.ತಮ್ಮ ಜಮೀನಿನಲ್ಲಿ ಸೊಂಟಿ ಬೆಳೆ ಇದ್ದರೂ ಕೂಡ ಅದರಲ್ಲೇ ಕೆಲವು ಸಮಯ ಮಾಡಿಕೊಂಡು ತನ್ನ ಹೊಲದ ಪಕ್ಕದಲ್ಲಿರುವ ಜಾಲಿ ಕಟ್ಟಿ ಕೆರೆಗೆ ೨೦ ದಿನಗಳಿಂದ ನೀರು ಬಿಡುತ್ತಿದ್ದಾರೆ. ಜಾನುವಾರು, ಕುರಿ, ಪಕ್ಷಿಗಳಿಗೆ ನೀರಿಗೆ ಈ ಜಾಲಿಕಟ್ಟಿಯಲ್ಲಿರುವ ನೀರೇ ಈಗ ಆಸರೆಯಾಗಿದೆ. ಹತ್ತಾರು ವರ್ಷಗಳಿಂದ ಬೇಸಿಗೆಯಲ್ಲಿ ನೀರಿಲ್ಲದಿರುವಾಗ ಎಲ್ಲ ಹೊತ್ತಿನಲ್ಲಿ ನೀರು ಬಿಡುವುದು ಇವರ ಕಾಳಜಿಯಾಗಿದೆ. ಇದೇ ರೈತನ ಹೃದಯ. ಮಮತೆಯ ಮಡಿಲು.ದೇವರು ನೀರು ಕೊಟ್ಟಾನ, ದನ ಕರುಗಳಿಗೆ ಪಶು ಪಕ್ಷಿಗಳಿಗೆ ಕೊಟ್ಟೇನಿ, ದೇವರ ಕೊಡದಿದ್ದರ ನಾನೇನು ಕೊಡತಿದ್ದೆ. ಬಹಳಷ್ಟು ಕಡೆಗೆ ಕೊಳವೆಬಾವಿ ಬತ್ತಿ ಹೋಗ್ಯಾವ. ನನ್ನ ಕೊಳವೆಬಾವಿಯೊಳಗ ದೇವರು ನೀರು ಇಟ್ಟಾನ. ಅದಕ್ಕ ಕೊಡಾಕ ಆಗೇದ. ಇದನ್ನು ಹತ್ತಾರು ವರ್ಷಗಳಿಂದ ಮಾಡ್ತಾ ಇದ್ದೀನಿ. ನನಗ ನೀರಿನ ತೊಂದರಿ ಆಗಿಲ್ಲ. ಪ್ರಾಣಿಗಳು ಕೆರೆಗೆ ಬಂದು ಹೊಳ್ಳಿ ಹೋಗೋದನ್ನು ನೋಡಿದ್ಯಾ. ಹೀಂಗ ಮಾಡಬೇಕು ಅನಸ್ತು. ನೀರು ಕೆರೆಗೆ ಬಿಟ್ಟು ಆನಂದಪಟ್ಟೆ ಎಂದು ರೈತ ಸಂಗಪ್ಪ ಸಣ್ಣಮನಿ ಹೇಳಿದ್ದಾರೆ.