ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಸಂತ ಕ್ಷೇವಿಯರ್ ಚರ್ಚ್, ಸಿಎಸ್ಐ ಚರ್ಚ್ ಸೇರಿದಂತೆ ನಗರ ಮತ್ತು ಗ್ರಾಮಾಂತರದ ವಿವಿಧ ಕಡೆಗಳಲ್ಲಿ ಚರ್ಚ್ ಗಳಲ್ಲಿ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಚರ್ಚ್ ಗಳು ವೈವಿಧ್ಯಮಯ, ವರ್ಣಮಯ ವಿದ್ಯುತ್ ದೀಪಾಲಂಕಾರ ಹಾಗೂ ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು. ಗೋದಲಿಯಲ್ಲಿ ಬಾಲ ಏಸುಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತಾದಿಗಳು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಏಸು ಜನ್ಮ ದಿನವನ್ನು ಸ್ವಾಗತಿಸಿದರು. ಚರ್ಚ್ ಗಳಲ್ಲಿ ಮಂಗಳವಾರ ಮಧ್ಯರಾತ್ರಿ ಅಪಾರ ಪ್ರಮಾಣದಲ್ಲಿ ನೆರೆದಿದ್ದ ಭಕ್ತಾದಿಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಕ್ರಿಸ್‌ಮಸ್ ಹಬ್ಬವು ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದ್ದು, ಸೋಮವಾರ ಬೆಳಗ್ಗೆ ಜನರು ಚರ್ಚ್ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದರೊಂದಿಗೆ ಮನೆಯನ್ನು ಕ್ರಿಸ್ಮಸ್ ಟ್ರೀ ಹಾಗೂ ಹೂವುಗಳಿಂದ ಅಲಂಕರಿಸಿದ್ದರು. ಸಂಬಂಧಿಕರು, ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ವಿಶೇಷ ಆಹಾರಗಳನ್ನು ಮಾಡಿ ಸವಿದರು.ಕೆಲ ರಾಜಕಾರಣಿಗಳು ನಗರದ ಸಂತ ಕ್ಷೇವಿಯರ್ ಚರ್ಚ್,ಸಿಎಸ್ಐ ಚರ್ಚ್ ಗಳಿಗೆ ಭೇಟಿ ನೀಡಿ ಕ್ರೈಸ್ತ ಬಾಂಧವರಿಗೆ ಶುಭಾಷಯಗಳನ್ನು ಕೋರಿದರು.
ಸಿಎಸ್ಐ ಚರ್ಚ್ ನ ಫಾಧರ್ ಸ್ಯಾಮ್ ಸನ್ ಮಾತನಾಡಿ, ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಷಯಗಳು. ಈ ಹಬ್ಬವು ಸಾಮರಸ್ಯ, ಪ್ರೀತಿ ಮತ್ತು ಸಹಾನುಭೂತಿಯ ಸಂದೇಶವನ್ನು ಸಾರುತ್ತದೆ. ನಾವು ಏಸುಕ್ರಿಸ್ತನ ಬೋಧನೆಗಳನ್ನು ನೆನಪಿಸೋಣ. ಎಲ್ಲರ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವ ಸಂಕಲ್ಪ ಮಾಡೋಣ ಎಂದು ತಿಳಿಸಿದರು.
ಕ್ರೈಸ್ತ ಬಾಂಧವರಾದ ಜೆ.ಅಂತೋನಿ, ಹೆನ್ರಿ ಪ್ರಸನ್ನ, ಅರುಣ್, ದಾಸ್, ಜಯರಾಜ್,ಜೆಎಂಜೆ ರಾಜು, ಅರಳಪ್ಪ, ಮತ್ತಿತರರು ಇದ್ದರು.