ಗಣೇಶೋತ್ಸವಕ್ಕೆ ಕೆಲ ಪೊಲೀಸ್ ಅಧಿಕಾರಿಗಳೇ ವಿಘ್ನ

KannadaprabhaNewsNetwork |  
Published : Sep 07, 2024, 01:30 AM IST
6ಕೆಡಿವಿಜಿ1-ದಾವಣಗೆರೆಯಲ್ಲಿ ಶುಕ್ರವಾರ ಗಣಪತಿ ಮಹಾ ಮಂಡಳಿ ಒಕ್ಕೂಟದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ, ಗಣಪತಿ ಆರಾಧನೆಗೆ ಹಲವಾರು ನಿಯಮಗಳನ್ನು ಹೇರುವ ಮೂಲಕ ಆಯೋಜಕರಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಗಣಪತಿ ಮಹಾಮಂಡಳಿ ಒಕ್ಕೂಟ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ದಾವಣಗೆರೆಯಲ್ಲಿ ಆರೋಪಿಸಿದ್ದಾರೆ.

- ಮುರ್ತಿ ಪ್ರತಿಷ್ಠಾಪನೆಗೆ ಮುಹೂರ್ತ ಸಮೀಪಿಸುತ್ತಿದ್ದರೂ ಅನುಮತಿ ನೀಡದ ಇಲಾಖೆ: ರಾಜನಹಳ್ಳಿ ಶಿವಕುಮಾರ ಆರೋಪ - ಕಿರುಕುಳ ಮುಂದುವರಿದರೆ ಎಲ್ಲ ಆಯೋಜಕರಿಂದ ಎಸ್‌ಪಿ ಕಚೇರಿ ಎದುರು ಗಣೇಶ ಮೂರ್ತಿಗಳ ಸಮೇತ ಧರಣಿ; ಎಚ್ಚರಿಕೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ, ಗಣಪತಿ ಆರಾಧನೆಗೆ ಹಲವಾರು ನಿಯಮಗಳನ್ನು ಹೇರುವ ಮೂಲಕ ಆಯೋಜಕರಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಗಣಪತಿ ಮಹಾಮಂಡಳಿ ಒಕ್ಕೂಟ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಪ್ರತಿಷ್ಠಾಪನೆಗೆ ಪೊಲೀಸ್ ಅಧಿಕಾರಿಗಳು ಇದೇ ರೀತಿ ಕಿರುಕುಳ ಮುಂದುವರಿಸಿದರೆ ಎಲ್ಲ ಆಯೋಜಕರು ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿ ಮುಂಭಾಗದಲ್ಲಿ ಗಣೇಶ ಮೂರ್ತಿ ಸಮೇತ ಧರಣಿ ನಡೆಸಬೇಕಾದೀತು ಎಂದು ಎಚ್ಚರಿಸಿದರು.

ಅನುಮತಿ ನೆಪದಲ್ಲಿ ಕಿರುಕುಳ:

ಪ್ರತಿವರ್ಷ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅನುಮತಿ ಪಡೆಯಬೇಕಿತ್ತು. ಈಗ ಅನ್ನ ಸಂತರ್ಪಣೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅನುಮತಿ ಪಡೆಯಬೇಕೆಂಬ ನಿಯಮ ಜಾರಿಗೊಳಿಸಿದ್ದಾರೆ. ಇದರಿಂದ ಗಣಪತಿ ಆಯೋಜಕರಿಗೆ ಗೊಂದಲವಾಗುತ್ತಿದೆ. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಕೆಲವು ಪೊಲೀಸ್ ಅಧಿಕಾರಿಗಳು ತಗಾದೆ ಮಾಡುತ್ತಿದ್ದಾರೆ. ಅನುಮತಿ ನೆಪವೊಡ್ಡಿ ಕಿರುಕುಳ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

9 ದಿನ ಪ್ರತಿಷ್ಠಾಪನೆಗೆ ಅಸಹಕಾರ:

ಗಣೇಶ ಹಬ್ಬ ಸೆ.7ರಂದು ಶನಿವಾರ ಬೆಳಗ್ಗೆಯೇ ಇದ್ದು, ಈ ಕ್ಷಣದವರೆಗೂ ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಿಕೊಳ್ಳಲು ಅವಕಾಶ ನೀಡದಂತೆ ಆಯೋಜಕರಿಗೆ ಪೊಲೀಸ್ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಸುಮಾರು 400ಕ್ಕೂ ಹೆಚ್ಚು ಗಣಪತಿ ಮೂರ್ತಿಗಳು ಪ್ರತಿಷ್ಠಾಪಿಸಲಾಗುತ್ತದೆ. ಗಣೇಶ ಪ್ರತಿಷ್ಠಾಪಿಸಲು ಅನುಮತಿ ನೀಡಲು ಕೇಳಿದರೆ, 9 ದಿನ ಯಾಕೆ ಇಡುತ್ತೀರಿ, ಮರುದಿನಕ್ಕೆ ಮಾತ್ರವೇ ಅನುಮತಿ ನೀಡುತ್ತೇವೆಂದು ಹೇಳುತ್ತಿದ್ದಾರೆ. ಆ ಮೂಲಕ ಗಣೇಶ ಹಬ್ಬಕ್ಕೆ ಪೊಲೀಸ್ ಇಲಾಖೆಯೂ ಹತ್ತಾರು ವಿಘ್ನಗಳ ಸೃಷ್ಟಿಸುತ್ತಿದೆ ಎಂದು ಕಿಡಿಕಾರಿದರು.

ಹಿಂದು ವಿರೋಧಿ ನೀತಿ:

ಜಿಲ್ಲಾಡಳಿತ ಭವನದಲ್ಲಿ ಸೌಹಾರ್ದತಾ ಸಭೆ ಕರೆದಾಗ ಅಧಿಕಾರಿಗಳು ಹೇಳಿದಂತೆ ನಡೆದುಕೊಳ್ಳುತ್ತಿಲ್ಲ. ಪಾಲಿಕೆ, ಪೊಲೀಸ್ ಠಾಣೆ ಹೊಸದಾಗಿ ಆಹಾರ ಗುಣಮಟ್ಟ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅನುಮತಿ ಕೇವಲ ಹಿಂದುಗಳ ಹಬ್ಬ, ಆಚರಣೆಗೆ ಮಾತ್ರವೇ ಸೀಮಿತವೇ? ಹಿಂದುಗಳ ಹಬ್ಬಗಳಿಗೆ ಎಲ್ಲಿಲ್ಲದ ಕಾನೂನುಗಳು ಇವೆಯೇ? ಇಂತಹ ಹಿಂದು ವಿರೋಧಿ ನೀತಿ, ರೀತಿ ಹೇರಲು ಹೊರಟಿರುವ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳ ವರ್ತನೆ ಸರಿಯಲ್ಲ. ವರ್ಷ ವರ್ಷಕ್ಕೂ ಪರಿಸರ ಮಾಲಿನ್ಯ ಹೆಚ್ಚುತ್ತಲೇ ಇದೆ. ಆದರೆ, ಇಡೀ ವರ್ಷ ಸುಮ್ಮನಿರುವ ಪರಿಸರ ಅಧಿಕಾರಿ ಅವರಿಗೆ ಗಣೇಶ ಹಬ್ಬ ಬಂದಾಗ ಮಾತ್ರವೇ ಪರಿಸರ ಕಾಳಜಿ ಹೆಚ್ಚುತ್ತಿದೆ ಎಂದು ಟೀಕಿಸಿದರು.

ಅನ್ನ ಸಂತರ್ಪಣೆಗೆ ನಿರ್ಬಂಧ ಸರಿಯಲ್ಲ:

ಗಣೇಶ ಸಮಿತಿ ಅನ್ನ ಸಂತರ್ಪಣೆಗೆ ನಿರ್ಬಂಧ ಹೇರುವುದು ಸರಿಯಲ್ಲ. ನಿತ್ಯವೂ ಅಂಗನವಾಡಿ ಕೇಂದ್ರ, ಶಾಲೆಗಳಲ್ಲಿ ನೀಡುವ ಆಹಾರವನ್ನು ಪರೀಕ್ಷೆ ಮಾಡುತ್ತಾರಾ? ಡಾಬಾ, ಹೋಟೆಲ್‌, ರೆಸ್ಟೋರೆಂಟ್ ಗಳಲ್ಲಿ ಎಷ್ಟು ಸ್ವಚ್ಛತೆ ಇದೆ? ಎಷ್ಟು ಹೋಟೆಲ್, ಡಾಬಾ, ರೆಸ್ಟೋರೆಂಟ್‌ಗಳಿಗೆ ಇಂತಹ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ? ಪೊಲೀಸ್ ಇಲಾಖೆಯವರು ಪೆಂಡಾಲ್ ಹಾಕಿದವರಿಗೆ ಕಿರುಕುಳ ನೀಡುತ್ತಿದ್ದಾರೆ. ಇಲ್ಲಿವರೆಗೂ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುತ್ತಿಲ್ಲ. ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳೂ ಹಿಂದು ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಹಿಂದು ಸಮಾಜದ ಮುಖಂಡರಾದ ಬಿ.ರಮೇಶ ನಾಯ್ಕ, ಬೇತೂರು ಬಸವರಾಜ, ಹರೀಶ ಹೊನ್ನೂರು, ಎಚ್.ಬಿ.ನವೀನಕುಮಾರ, ಆರ್.ರವಿಕುಮಾರ, ಶಂಕರಗೌಡ ಬಿರಾದಾರ್‌, ಶಿವನಗೌಡ ಟಿ.ಪಾಟೀಲ, ಟಿಂಕರ್ ಮಂಜಣ್ಣ, ರಾಜುಗೌಡ ಇತರರು ಇದ್ದರು.

- - -

ಬಾಕ್ಸ್ ಇಫ್ತಿಯಾರ್ ಕೂಟಕ್ಕಿಲ್ಲದ ನಿಯಮ ಪ್ರಸಾದಕ್ಕೇಕೆ?! ಈದ್ ಮಿಲಾದ್ ಹಬ್ಬದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಗುಂಬಜ್ ಹಾಕಲು ಅನುಮತಿ ನೀಡುವ ಪೊಲೀಸ್ ಇಲಾಖೆಯು ಇಫ್ತಿಯಾರ್ ಕೂಟಕ್ಕೆ ಇಲ್ಲದ ಫುಡ್‌ ಸೇಫ್ಟಿ ಕಾಳಜಿ ಹಿಂದು ಹಬ್ಬಕ್ಕೆ, ಅದರಲ್ಲೂ ಸಾರ್ವಜನಿಕ ಗಣೇಶ ಹಬ್ಬಕ್ಕೆ ಯಾಕೆ ಹೇರುತ್ತಿದೆ ಎಂದು ಗಣಪತಿ ಮಹಾಮಂಡಳಿ ಒಕ್ಕೂಟ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಪ್ರಶ್ನಿಸಿದರು.

ಶಾಂತಿಯುತ ಹಬ್ಬ ಆಚರಿಸಲು ಅನುಮತಿ ನೀಡುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಲಿ. ಅದನ್ನು ಬಿಟ್ಟು ಕಿರುಕುಳ ನೀಡುವುದು ಸರಿಯಲ್ಲ. 1894ರಲ್ಲಿ ಬಾಲ ಗಂಗಾಧರ ತಿಲಕ್‌ ಮನೆ ಮನೆಗಳಲ್ಲಿ ಗಣಪತಿ ಹಬ್ಬ ಆಚರಿಸುವ ಜೊತೆಗೆ ಸಾರ್ವಜನಿಕ ಗಣೇಶೋತ್ಸವಕ್ಕೆ ಮುನ್ನುಡಿ ಬರೆದಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟದಲ್ಲೂ ಮಹತ್ವದ ಪಾತ್ರ ವಹಿಸಿತ್ತು. ನಮ್ಮ ಧರ್ಮ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಆಚರಣೆ ಮಹತ್ವದ ಪಾತ್ರ ವಹಿಸಿದೆ. ಇಂತಹ ದೇಶದಲ್ಲಿ ಗಣೇಶೋತ್ಸವಕ್ಕೆ ನಿಯಮ ಹೇರುವ ಮೂಲಕ ಆಚರಣೆ ಮಾಡದಂತೆ ತಡೆಯುವ ಹುನ್ನಾರ ನಡೆಸಲಾಗುತ್ತಿದೆ. ಗಣಪತಿ ಸಮಿತಿಯವರು ಯಾವುದೇ ಸಮಿತಿಯಲ್ಲಿ ತೊಂದರೆಯಾದಲ್ಲಿ ಅಥವಾ ಯಾರಾದರೂ ತೊಂದರೆ, ಕಿರುಕುಳ ನೀಡಿದರೆ ತಕ್ಷಣ ತಮ್ಮನ್ನು ಸಂಪರ್ಕಿಸುವಂತೆ ಶಿವಕುಮಾರ್‌ ತಿಳಿಸಿದರು.

- - - -6ಕೆಡಿವಿಜಿ1:

ದಾವಣಗೆರೆಯಲ್ಲಿ ಶುಕ್ರವಾರ ಗಣಪತಿ ಮಹಾಮಂಡಳಿ ಒಕ್ಕೂಟ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. -CHOUTI-2: ಗಣೇಶ ಮೂರ್ತಿ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ