ಮಾ.1ರಂದು ಚುನಾವಣೆ; ಯುವಕ ವೃಂದ ಹಾಗೂ ಹಿರಿಯರ ತಂಡದ ನಡುವೆ ಸ್ಪರ್ಧೆ
ಲಿಂಗಾಯತ ಒಳ ಪಂಗಡಗಳ ನಡುವೆ ನಡೆದಿದೆ ಪೈಪೋಟಿಯಾರು ಅಧ್ಯಕ್ಷರಾದರೆ ಯಾರಿಗೆ ಲಾಭ ಎಂಬ ಲೆಕ್ಕಾಚಾರ ಶುರು
ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಕಣೇಕಲ್ ಡಾ.ಮಹಾಂತೇಶ್ ಯುವಕ ವೃಂದದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ
ಮಂಜುನಾಥ ಕೆ.ಎಂ.ಕನ್ನಡಪ್ರಭ ವಾರ್ತೆ ಬಳ್ಳಾರಿ
ಇಲ್ಲಿನ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಅವರು ಈಚೆಗೆ ದಿಢೀರ್ ರಾಜಿನಾಮೆ ನೀಡಿದ ಬೆನ್ನಲ್ಲೇ ಸಂಘದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ.ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಬಸವರಾಜ್, ವೀವಿ ಸಂಘದ ಮಾಜಿ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ ಹಾಗೂ ಯುವಕ ವೃಂದದ ಕಣೇಕಲ್ ಡಾ. ಮಹಾಂತೇಶ್ ಅಧ್ಯಕ್ಷ ಆಕಾಂಕ್ಷಿಯಾಗಿದ್ದು, ಮಾ.1ರಂದು ಚುನಾವಣೆ ನಡೆಯಲಿದ್ದು, ಅಖಾಡದಿಂದ ಯಾರು ಹಿಂದೆ ಸರಿಯಲಿದ್ದಾರೆ ಎಂಬ ಕುತೂಹಲವಿದೆ.
ನಗರದ ವೀರಶೈವ ಸಮಾಜದ ಹಿರಿಯ ಮುಖಂಡರೊಬ್ಬರ ಮನೆಯಲ್ಲಿ ಮಂಗಳವಾರ ಜರುಗಿದ ಹಿರಿಯರ ತಂಡದ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಕುರಿತು ಒಮ್ಮತದ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಹಿರಿಯರ ತಂಡದಿಂದ ಯಾರು ಸ್ಪರ್ಧಿಯಾಗಲಿದ್ದಾರೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಅಧ್ಯಕ್ಷ ಚುನಾವಣೆಯ ಅಭ್ಯರ್ಥಿ ಸ್ಪರ್ಧಿಯ ಸಾಧಕ-ಬಾಧಕಗಳನ್ನು ಚರ್ಚಿಸಿಯೇ ಹಿರಿಯರ ತಂಡ ತೀರ್ಮಾನಕ್ಕೆ ಬರುವ ಸಾಧ್ಯತೆಯಿದ್ದು, ಮತ್ತೊಂದು ಸುತ್ತಿನ ಸಭೆಯ ಬಳಿಕವೇ ಅಂತಿಮವಾಗಿ ಅಭ್ಯರ್ಥಿ ಘೋಷಣೆ ಸಾಧ್ಯತೆಯಿದೆ. ಏತನ್ಮಧ್ಯೆ ಯುವಕ ವೃಂದದ ತಂಡದಿಂದ ಕಣೇಕಲ್ ಡಾ. ಮಹಾಂತೇಶ್ ಅವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದ್ದು, ಚುನಾವಣೆ ಮುನ್ನದ ರಾಜಕೀಯ ತಂತ್ರಗಾರಿಕೆ ಶುರುವಾಗಿದೆ. ಸಂಘದ ಮೂಲಗಳ ಪ್ರಕಾರ ಹಿರಿಯರ ತಂಡದಿಂದ ಜಾನೆಕುಂಟೆ ಬಸವರಾಜ್ ಹಾಗೂ ಯುವಕ ವೃಂದದಿಂದ ಕಣೇಕಲ್ ಡಾ. ಮಹಾಂತೇಶ್ ಸ್ಪರ್ಧಿಗಿಳಿಯುವ ಸಾಧ್ಯತೆ ಹೆಚ್ಚಾಗಿವೆ. ಆದರೆ, ಈಗಾಗಲೇ ಉಪಾಧ್ಯಕ್ಷರಾಗಿರುವ ಜಾನೆಕುಂಟೆ ಬಸವರಾಜ್ ಸ್ಥಾನಕ್ಕೆ ರಾಜಿನಾಮೆ ನೀಡದೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬರುವುದಿಲ್ಲ ಎನ್ನಲಾಗುತ್ತಿದ್ದು, ಈ ಕುರಿತು ಕಾನೂನು ತೊಡಕುಗಳ ಕುರಿತು ಹಿರಿಯರ ತಂಡದ ಸದಸ್ಯರು ಚರ್ಚಿಸುತ್ತಿದ್ದಾರೆ. ಚುನಾವಣೆಯಲ್ಲಿ ಜಾನೆಕುಂಟೆ ಬಸವರಾಜ್ ಸೋತರೂ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನ ಉಳಿಯಲಿದೆ. ಚುನಾವಣೆಯಲ್ಲಿ ಸೋಲುಂಡರೆ ಉಪಾಧ್ಯಕ್ಷ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎನ್ನಲಾಗುತ್ತಿದೆ.ಕಳೆದ ಚುನಾವಣೆಯಲ್ಲಿ ಯುವಕ ವೃಂದದಿಂದ 15 ಜನ ಕಾರ್ಯಕಾರಿ ಸಮಿತಿ ಸದಸ್ಯರು ಗೆಲುವು ಪಡೆದಿದ್ದರು. ಹಿರಿಯರ ತಂಡದಿಂದ 14 ಜನರು ಗೆಲುವು ಸಾಧಿಸಿದ್ದರು. ಓರ್ವರು ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಪಡೆದಿದ್ದರು. ವೀವ ಸಂಘದ ಅಧಿಕಾರದ ಗದ್ದುಗೆ ಹಿಡಿಯಲು ಸ್ಪಷ್ಟ ಬಹುಮತವಿದ್ದಾಗ್ಯೂ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಡೆದ ಗೊಂದಲದಿಂದ ಯುವಕವೃಂದ ಅಧಿಕಾರ ಕಳೆದುಕೊಂಡಿತು.
ಯುವಕ ವೃಂದದ 16 ಜನರ ಪೈಕಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಡಾ. ಭಾಗ್ಯಲಕ್ಷ್ಮಿ ಮತದಾನದಿಂದ ದೂರ ಉಳಿದರು. ಉಳಿದ 15ಜನರಲ್ಲಿ ಇಬ್ಬರು ಹಿರಿಯ ತಂಡಕ್ಕೆ ಬೆಂಬಲ ನೀಡಿದ್ದರಿಂದ ಗುಪ್ತಮತದಾನದಿಂದಾಗಿ ಯುವಕ ವೃಂದ ಸೋಲುಂಡಿತು.ಮಾ.1ರಂದು ಜರುಗುವ ಚುನಾವಣೆಯಲ್ಲಿ ಈಚೆಗಷ್ಟೇ ರಾಜಿನಾಮೆ ನೀಡಿರುವ ಅಲ್ಲಂ ಗುರುಬಸವರಾಜ್ ಹಾಗೂ ಈ ಹಿಂದಿನ ಚುನಾವಣೆಯಲ್ಲಿ ಯುವಕ ವೃಂದದಿಂದ ಗೆಲುವು ಪಡೆದಿದ್ದ ಡಾ. ಭಾಗ್ಯಲಕ್ಷ್ಮಿ ಮತದಾನ ಮಾಡಲು ಬರುತ್ತಾರೆಯೇ? ಒಂದು ವೇಳೆ ಮತದಾನ ದಿನ ಬಂದರೆ ಯಾರ ಪರ ಮತದಾನ ಮಾಡಬಹುದು? ಎಂಬಿತ್ಯಾದಿ ಲೆಕ್ಕಾಚಾರ ನಡೆದಿವೆ. ಸಂಘದ ಅಧ್ಯಕ್ಷ ಚುನಾವಣೆಯನ್ನು ವೀರಶೈವ ಲಿಂಗಾಯತ ಸಮಾಜದ ಒಳ ಪಂಗಡಗಳ ನಡುವಿನ ಪೈಪೋಟಿ ಎಂದೇ ಬಿಂಬಿಸಲಾಗುತ್ತಿದೆ.