ಶಿಗ್ಗಾಂವಿ: ಸಮಾಜದ ಸಾಂಸ್ಕೃತಿಕ ಲೋಕದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಯುವಕರಿಂದ ಮುನ್ನಡೆಯಬೇಕು ಎಂಬುದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು ಅದರಂತೆ ಮುಂದುವರೆಯುತ್ತಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.
ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಷ್ಟ್ರೀಯ ಸೇವಾ ಯೋಜನೆಗೆ ನೋಂದಣಿ ಮಾಡಿಸಿಕೊಂಡ ವಿದ್ಯಾರ್ಥಿಗಳು ಸಾಮರಸ್ಯ, ಸಹಬಾಳ್ವೆ ನಾಯಕತ್ವದ ಕುರಿತು ಎಂದೆಂದಿಗೂ ಜಾಗೃತರಾಗಿರಬೇಕು. ಎನ್.ಎಸ್.ಎಸ್ ಘಟಕಗಳಿಗೆ ವಿದ್ಯಾರ್ಥಿಗಳೇ ಮೂಲ ಆತ್ಮವಾಗಿದ್ದಾರೆ ಎಂದರು.
ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್ ಮಾತನಾಡಿ, ಉತ್ತಮ ರಾಷ್ಟ್ರ ನಿರ್ಮಾಣ, ಸಾಮಾಜಿಕ ಜವಾಬ್ದಾರಿ, ನಾಗರಿಕ ಪ್ರಜ್ಞೆ ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ ಸಾಮರಸ್ಯ ಸಾರಲು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟೀಯ ಸೇವಾ ಯೋಜನೆಯ ಘಟಕ ತೆರೆಯಲಾಗುತ್ತದೆ. ಇದರಿಂದ ಸಮಾಜದ ಸ್ವಾಸ್ತ್ಯ ಕಾಪಾಡಬಹುದಾಗಿದೆ ಎಂದರು.ಹಿರಿಯ ಸಂಶೋಧನಾಧಿಕಾರಿ ಡಾ. ಕೆ. ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಿ ಸಮಾಜದಲ್ಲಿ ತೊಡಗಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಾಕಷ್ಟು ಸಹಕರಿಯಾಗಿದ್ದು, ಇದು ಕೇವಲ ಶ್ರಮದಾನವಲ್ಲ ಇದರಿಂದ ಪ್ರೇರಣೆ ಪಡೆದು ಸಮಾಜ ಸುಧಾರಣೆಯಲ್ಲಿ ತೊಡಗಿಕೊಳ್ಳಿ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಂಯೋಜನಾಧಿಕಾರಿ ಡಾ. ಗಿರೇಗೌಡ ಅರಳಿಹಳ್ಳಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಜನಪದ ಕಲಾವಿದ ಶರೀಫ ಮಕಪ್ಪನವರ ಹಾಗೂ ಸಿಬ್ಬಂದಿಗಳು ಎನ್.ಎಸ್.ಎಸ್ ಗೀತೆ ಹಾಡಿದರು. ಸಹಾಯಕ ಪ್ರಾಧ್ಯಾಪಕ ಅಭಿನಯ ಎಚ್ ನಿರೂಪಿಸಿದರು. ಡಾ. ರಾಜಶೇಖರ್ ಡೊಂಬರಮತ್ತೂರ ವಂದಿಸಿದರು.ಈ ಸಂದರ್ಭದಲ್ಲಿ ಬೋಧಕ- ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಪಾಲ್ಗೊಂಡಿದ್ದರು. ನಂತರ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಂದ ಎನ್.ಎಸ್.ಎಸ್ ಘಟಕದಡಿ ಶ್ರಮದಾನ ನಡೆಯಿತು.