ಹಾವೇರಿ: ವಯೋನಿವೃತ್ತಿ ಹೊಂದಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ವಾರ್ತಾಧಿಕಾರಿ ಡಾ. ಬಿ.ಆರ್.ರಂಗನಾಥ್ ಹಾಗೂ ಇಲಾಖೆ ಸಿಬ್ಬಂದಿ ರಾಮವ್ವ ಕೊರವರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.ನಗರದ ಜಿಲ್ಲಾ ವಾರ್ತಾ ಭವನದಲ್ಲಿ ಶುಕ್ರವಾರ ಪತ್ರಕರ್ತರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬೀಳ್ಕೊಡುಗೆ ಸಮಾರಂಭದಲ್ಲಿ, ಮಾಧ್ಯಮ ಪ್ರತಿನಿಧಿಗಳಾದ ನಾಗರಾಜ ಕುರುವತ್ತೇರ, ಬಸವರಾಜ ಮರಳಿಹಳ್ಳಿ, ಕೇಶವಮೂರ್ತಿ, ವಿರೇಶ ಬಾರ್ಕಿ, ಸಂಕನಗೌಡ, ನಾರಾಯಣ ಹೆಗಡೆ, ರಾಜು ನದಾಫ್, ಮಾಲತೇಶ ಅಂಗೂರ, ನಿಂಗಪ್ಪ ಚಾವಡಿ, ಫಕ್ಕೀರಯ್ಯ ಗಣಾಚಾರಿ, ಪರಶುರಾಮ ಡೂಗನವರ ಮೊದಲಾದವರು ಮಾತನಾಡಿ, ಕಳೆದ ಏಳು ವರ್ಷಗಳಿಂದ ಜಿಲ್ಲ್ಲಾ ವಾರ್ತಾಧಿಕಾರಿಗಳಾಗಿ ರಂಗನಾಥ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸರ್ಕಾರ ಮತ್ತು ಮಾಧ್ಯಮದವರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿದರು. ಸದಾ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುವ ಮೂಲಕ ಇತರರಿಗೆ ಮಾದರಿಯಾಗಿದೆ. ಮಾಧ್ಯಮದವರಿಗೆ ಕಾಲಕಾಲಕ್ಕೆ ಮಾಹಿತಿ ಒದಗಿಸುತ್ತಿದ್ದರು ಹಾಗೂ ಮಾಧ್ಯಮದವರೊಂದಿಗೆ ಸ್ನೇಹಪೂರ್ವಕವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖರವಾಗಿರಲಿ ಎಂದು ಶುಭ ಹಾರೈಸಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ, ಸರ್ಕಾರಿ ನೌಕರರ ಜಿಲ್ಲಾ ನೌಕರ ಸಂಘದ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ, ಸಾಹಿತಿ ಸತೀಶ ಕುಲರ್ಣಿ ಮಾತನಾಡಿ, ಬಿ.ಆರ್.ರಂಗನಾಥ್ ಅವರು ಒಬ್ಬ ಅಧಿಕಾರಿಯಾಗಿ ಕಾರ್ಯನಿರ್ವಹಿಸದೇ ಒಬ್ಬ ಮಾರ್ಗದರ್ಶಕ, ಸಾಹಿತಿ ಸೇರಿದಂತೆ ಅನೇಕ ಕ್ಷೇತ್ರಗಳನ್ನು ತಮ್ಮ ತೊಡಸಿಕೊಂಡಿದ್ದಾರೆ. ಅವರ ಪಾಂಡಿತ್ಯ ಅಘಾದವಾದದ್ದು ಎಂದು ಬಣ್ಣಿಸಿದರು. ವಯೋನಿವೃತ್ತಿ ಹೊಂದಿದ ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ವಾರ್ತಾಧಿಕಾರಿಗಳು ಸಮಾಜದ ಪರವಾಗಿ, ಜನರ ಧ್ವನಿಯಾಗಿ ಕೆಲಸ ಮಾಡಬೇಕು. ಸರ್ಕಾರ ಮತ್ತು ಮಾಧ್ಯಮ ಮತ್ತು ಜನರ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸಬೇಕು. ಮಾಧ್ಯಮ ಅತ್ಯದ್ಭುತ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸಮಾಡಬೇಕು. ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಿಳಿಸುವ ಕೆಲಸಮಾಡಬೇಕು. ೨೬ ವರ್ಷಗಳ ವೃತ್ತಿಜೀವನ ತೃಪ್ತಿ ನೀಡಿದೆ. ನಾನು ಕಾಯಕವೇ ಕೈಲಾಸ ಎಂದು ನಂಬಿದ್ದೇನೆ. ಈ ನನ್ನ ಪಯಣದಲ್ಲಿ ನನಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳು, ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರ.ದ.ಸ ರಾಘವೇಂದ್ರ ಕುರಣೆ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು.