ಬಿಸಿಲ ಧಗೆಗೆ ಅಕ್ಷರಶಃ ತತ್ತರಿಸಿದ ಕೋಟೆ ನಾಡು

KannadaprabhaNewsNetwork | Published : May 3, 2024 1:01 AM

ಸಾರಾಂಶ

ಕೋಟೆಗಳ ಕಲ್ಲುಗಳ ಮೇಲಿಂದ ಹಾದು ಬರುವ ಬೆಂಕಿ ಗಾಳಿ ಜನರನ್ನು ನಿಸ್ತೇಜಗೊಳಿಸಿದೆ. ಪರಿಣಾಮ ದುರ್ಗದ ಬೀದಿಗಳೆಲ್ಲಾ ಖಾಲಿ ಹೊಡೆಯುವಂತಾಗಿವೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೋಟೆಗಳ ನಾಡು ಚಿತ್ರದುರ್ಗ ಅಕ್ಷರಶಃ ಈ ಬಿರು ಬಿಸಿಲಿಗೆ ತತ್ತರಿಸಿ ಹೋಗಿದೆ. ಎಂದೂ ಕಾಣದಂತಹ ಬೆಂಕಿಯುಂಡೆಯಂತಹ ಬಿಸಿಲಿಗೆ ಜನರು ಹೈರಾಣಾಗಿದ್ದಾರೆ. ಕೋಟೆಗಳ ಕಲ್ಲುಗಳ ಮೇಲಿಂದ ಹಾದು ಬರುವ ಬೆಂಕಿ ಗಾಳಿ ಜನರನ್ನು ನಿಸ್ತೇಜಗೊಳಿಸಿದೆ. ಪರಿಣಾಮ ದುರ್ಗದ ಬೀದಿಗಳೆಲ್ಲಾ ಖಾಲಿ ಹೊಡೆಯುವಂತಾಗಿವೆ.

ದುರ್ಗದ ಜನರು ಇಂತಹ ಬೆಂಕಿ ಬಿಸಿಲನ್ನು ಇದುವರೆಗೂ ಕಂಡವರಲ್ಲ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ತುಸು ಹೆಚ್ಚು ಬಿಸಿಲನ್ನು ಅನುಭವಿಸುತ್ತಿದ್ದ ಜನರು ಈ ಬಾರಿಯ ಬಿಸಿಲಿಗೆ ಸುಸ್ತಾಗಿ ಹೋಗಿದ್ದಾರೆ.

ದಿನನಿತ್ಯದ ಬಿಸಿಲಿನ ತಾಪ ಸೂರ್ಯೋದಯದ ಜೊತೆಗೇ ಹೆಚ್ಚುತ್ತಾ ಹೋಗುವುದು ಈಗಿನ ದಿನಚರಿಯಾಗಿದೆ. ಜೊತೆಗೆ ೨೪ ಗಂಟೆಗಳ ಕಾಲವೂ ಹಿಂದೆಂದೂ ಕಾಣದಂತಹ ಬಿಸಿಗಾಳಿ.

ಗುರುವಾರ ಬೆಳಗ್ಗೆ ೩೩ ಡಿಗ್ರಿ ಸೆಲ್ಸಿಯಸ್‌ನಿಂದ ಆರಂಭಗೊಂಡ ಬಿಸಿಲು ಮಧ್ಯಾಹ್ನದ ಹೊತ್ತಿಗೆ ಹತ್ತಿರತ್ತಿರ ೪೦ ಡಿಗ್ರಿ ಸೆಲ್ಸಿಯಸ್‌ ತಲುಪಿತ್ತು. ಈ ತಿಂಗಳ ೪ರ ವರೆಗೂ ವಾತಾವರಣದಲ್ಲಿ ಇನ್ನಷ್ಟು ಬಿಸಿ ಗಾಳಿ ಬೀಸುವ ಸೂಚನೆ ದೊರೆಯುತ್ತಿದ್ದಂತೆ ಜನರು ಉಸಿರು ಬಿಡುವಂತಾಗಿದ್ದಾರೆ. ಜಿಲ್ಲೆಗೆ ಹವಾಮಾನ ಇಲಾಖೆ ಆರೇಂಜ್‌ ಅಲರ್ಟ್‌ ಘೋಷಣೆಯಾದ ಮೇಲೆ ಜನರು ಪರಿತಪಿಸುವಂತಾಗಿದೆ.

ಸೂರ್ಯನ ತಾಪ ಮತ್ತು ಬೀಸುವ ಬಿಸಿ ಗಾಳಿಗೆ ಗ್ರಾಮಾಂತರ ಜನರೂ ತಲ್ಲಣಗೊಂಡಿದ್ದಾರೆ. ಪರಿಣಾಮ ನಗರಕ್ಕೆ ನಿತ್ಯ ಒಂದಿಲ್ಲೊಂದು ಕೆಲಸಾರ್ಥ ಬರುವ ಜನರ ಸಂಖ್ಯೆಯಲ್ಲಿಯೂ ಗಣನೀಯವಾಗಿ ಕಡಿಮೆ ಆಗಿದೆ. ಯಾವಾಗಲು ಜನರ ಕೊಳ್ಳುವಿಕೆಯಿಂದ ತುಂಬಿರುತ್ತಿದ್ದ ಮುಖ್ಯ ರಸ್ತೆಯಲ್ಲಿನ ಅಂಗಡಿಗಳ ಮುಂದೆ ಬಿಕೋ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ನಗರದ ಜನರಂತೂ ಬೆಳಗ್ಗೆ ೧೧ ಗಂಟೆಯಿಂದ ಸಂಜೆ ೫ ರ ತನಕ ರಸ್ತೆಗಿಳಿಯುವ ಸಾಹಸನ್ನೇ ಮಾಡುತ್ತಿಲ್ಲ.

ದಿನಗೂಲಿ ಮತ್ತು ಕೂಲಿ ಕಾರ್ಮಿಕರು ಬಿಸಿಲಿನ ತಾಪಕ್ಕೆ ಝರ್ಜಿತರಾಗಿದ್ದಾರೆ. ಅಂಗಡಿಗಳಲ್ಲಿ ಬೀಸಣಿಕೆ, ಪ್ಯಾನ್‌ ಕೊಳ್ಳುವವರ ಸಂಖ್ಯೆ ತುಸು ಹೆಚ್ಚಿದಂತೆ ಕಂಡಿದೆ.

ಯುಗಾದಿ ಕಳೆದ ನಂತರ ಮಳೆ ಬಂದೇ ಬರುತ್ತದೆ ಎನ್ನುವ ಆಶಾಭಾವ ಹೊಂದಿದ್ದ ಜನರು ಈಗ ನಿರಾಶರಾಗಿದ್ದಾರೆ. ಗ್ರಾಮಾಂತರ ನಾಡಿನಲ್ಲಿ ಅಡಿಕೆ ತೋಟ ಹೊಂದಿರುವ ರೈತರ ಬದುಕು ಹೇಳತೀರದಂತಾಗಿದೆ. ಕಳೆದ ವರ್ಷವೂ ಮಳೆ ಕೈಕೊಟ್ಟಿದ್ದರಿಂದ ಅಂತರಜಲ ಮಟ್ಟ ತೀರಾ ಕುಸಿತ ಕಂಡು ಕೊಳವೆ ಬಾವಿಗಳೆಲ್ಲಾ ಬತ್ತುತ್ತಿರುವುದು ಒಂದು ಕಾರಣವಾದರೆ, ನೀರು ಸಿಗುವ ಕಡೆಯಿಂದ ಹಣ ತೆತ್ತು ಟ್ಯಾಂಕರುಗಳಲ್ಲಿ ತೋಟಗಳಿಗೆ ನೀರು ತರುವ ರೈತರ ಸಾಹಸ ಕಣ್ಣಲ್ಲಿ ಹನಿಮೂಡಿಸುತ್ತಿದೆ.

ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮುರು ತಾಲೂಕುಗಳಲ್ಲಿ ನೀರಿನ ತೀವ್ರ ಸಂಕಟ ಉಂಟಾಗಿದೆ. ಹೊಳಲ್ಕೆರೆ ಭಾಗದಲ್ಲಿ ಕೃಷಿಗೆ ನೀರಿನ ಲಭ್ಯತೆ ಕಡಿಮೆ ಆಗಿದ್ದರೂ ಪರಿಸ್ಥಿತಿ ಅಷ್ಟೇನೂ ದುಸ್ತರವಾಗಿಲ್ಲ. ಭರಮಸಾಗರ-ಸಿರಿಗೆರೆ ಭಾಗದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಇಚ್ಛಾಶಕ್ತಿಯಿಂದ ಏತ ನೀರಾವರಿ ಯೋಜನೆ ಜಾರಿಗೆ ಬಂದಿದ್ದು ರೈತರ ಸಂಕಟ ಕಡಿಮೆ ಮಾಡಿದೆ. ಆದರೂ ಏತ ನೀರಾವರಿ ಕೆಲವು ಭಾಗಗಳಲ್ಲಿ ಜನರು ಕಳೆದ ಎರಡು ತಿಂಗಳುಗಳ ಹಿಂದಿನಿಂದಲೇ ಕೊಂಡು ಟ್ಯಾಂಕರ್‌ ನೀರು ಹಾಯಿಸುತ್ತಿರುವುದು ಗಮನಾರ್ಹವಾಗಿದೆ.

ಜಿಲ್ಲೆಯಾದ್ಯಂತ ಈ ಬಿರು ಬಿಸಿಲಿನ ತಾಪದಿಂದ ಮಕ್ಕಳನ್ನು ರಕ್ಷಿಸುವ ದೊಡ್ಡ ಹೊಣೆಗಾರಿಕೆಯನ್ನು ತಾಯಂದಿರು ನಿಭಾಯಿಸುತ್ತಿದ್ದಾರೆ.

Share this article