ಮಕ್ಕಳ ಕಲಿಕೆಗೆ ಪ್ರಾಥಮಿಕ ಹಂತದಲ್ಲೆ ಬುನಾದಿ ಅವಶ್ಯ: ಶಶಿಲ್ ನಮೋಶಿ

KannadaprabhaNewsNetwork |  
Published : Jan 09, 2025, 12:47 AM IST
8ಕೆಪಿಎಲ್3:ಕೊಪ್ಪಳ ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮುನಿರಾಬಾದ್ ವತಿಯಿಂದ ಪ್ರೌಢಶಾಲಾ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಮತ್ತು ಜಿಪಿಟಿ ಶಿಕ್ಷಕರಿಗಾಗಿ ನಡೆಯುತ್ತಿರುವ ಐದು ದಿನಗಳ ತರಬೇತಿಯಲ್ಲಿ  ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ ನಮೋಶಿ  ಮಾತನಾಡಿದರು. | Kannada Prabha

ಸಾರಾಂಶ

ಪ್ರಾಥಮಿಕ ಹಂತದಿಂದಲೇ ಮಕ್ಕಳ ಕಲಿಕೆಗೆ ಭದ್ರ ಬುನಾದಿ ಹಾಕುವ ಅವಶ್ಯಕತೆ ಇದೆ.

ಪ್ರೌಢಶಾಲಾ ಶಿಕ್ಷಕರಿಗಾಗಿ ತರಬೇತಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕೊಪ್ಪಳ

ಪ್ರಾಥಮಿಕ ಹಂತದಿಂದಲೇ ಮಕ್ಕಳ ಕಲಿಕೆಗೆ ಭದ್ರ ಬುನಾದಿ ಹಾಕುವ ಅವಶ್ಯಕತೆ ಇದೆ ಎಂದು ವಿಧಾನಪರಿಷತ್ ಸದಸ್ಯ ಶಶಿಲ್ ಜಿ. ನಮೋಶಿ ಹೇಳಿದರು.

ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮುನಿರಾಬಾದ್ ವತಿಯಿಂದ ಪ್ರೌಢಶಾಲಾ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಮತ್ತು ಜಿಪಿಟಿ ಶಿಕ್ಷಕರಿಗಾಗಿ ನಡೆಯುತ್ತಿರುವ ಐದು ದಿನಗಳ ತರಬೇತಿಯಲ್ಲಿ ಮಾತನಾಡಿದರು.ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಇಲಾಖೆ ಹತ್ತು ಹಲವು ಯೋಜನೆ ಹಮ್ಮಿಕೊಂಡಿದ್ದರೂ ಸಹ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಕಾರಣ ಪ್ರೌಢಶಾಲೆಗೆ ದಾಖಲಾಗುವ ಹೆಚ್ಚಿನ ಮಕ್ಕಳಿಗೆ ಮೂಲ ಕಲಿಕೆಯೇ ಇಲ್ಲ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ೭೦೦೦ಕ್ಕೂ ಅಧಿಕ ಮಕ್ಕಳಿಗೆ ಕನ್ನಡ ಓದಲು, ಬರೆಯಲು ಮತ್ತು ಕನಿಷ್ಠ ಲೆಕ್ಕಾಚಾರ ಮಾಡಲು ಬರುತ್ತಿಲ್ಲ ಎಂಬ ವರದಿ ಬಂದಿತ್ತು. ಸದನದಲ್ಲಿ ಆ ವಿಷಯ ಚರ್ಚೆಯಾಯಿತು. ಆ ಹಿನ್ನೆಲೆ ಪ್ರಾಥಮಿಕ ಹಂತದಲ್ಲೇ ಮಕ್ಕಳ ಕಲಿಕೆಗೆ ಭದ್ರ ಬುನಾದಿ ಹಾಕುವ ಅವಶ್ಯಕತೆ ಇದೆ. ಶೈಕ್ಷಣಿಕ ಹಾಗೂ ಮಕ್ಕಳ ಗುಣಾತ್ಮಕ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಎಲ್ಲರೂ ಶೈಕ್ಷಣಿಕ ಶ್ರೇಯೋಭಿವೃದ್ದಿಗಾಗಿ ಶ್ರಮಿಸೋಣ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕೋರ್ಸುಗಳನ್ನು ಮಕ್ಕಳು ಹೆಚ್ಚು ಆಯ್ಕೆ ಮಾಡಿಕೊಳ್ಳಬೇಕಾದರೆ ಮಕ್ಕಳಿಗೆ ಮೂಲವಿಜ್ಞಾನ ಮತ್ತು ಗಣಿತದಲ್ಲಿ ಆಸಕ್ತಿ ಮೂಡುವಂತೆ ಶಿಕ್ಷಕರು ಬೋಧಿಸಬೇಕು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸತತ ಕಾರ್ಯನಿರತನಾಗಿದ್ದೇನೆ. ಪ್ರೌಢಶಾಲಾ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರ ಮತ್ತು ಉಪನ್ಯಾಸಕರ ಬಡ್ತಿ ಪ್ರಕ್ರಿಯೆಗಳಿಗೆ ಸಿದ್ಧತೆ ನಡೆದಿವೆ. ಪಿ.ಎಸ್ ಟಿ ಶಿಕ್ಷಕರ ಬಡ್ತಿ ವಿಷಯ ಸೇರಿದಂತೆ ಶಿಕ್ಷಕರ ನೇಮಕಾತಿಗಾಗಿ ಒತ್ತಾಯ ಮಾಡಿದ್ದೇನೆ ಎಂದರು.

ವಿಜ್ಞಾನ ಕೇಂದ್ರ ಆರಂಭಿಸಲು ಈ ಹಿಂದೆ ಅನುದಾನ ನೀಡಿದ್ದೆ, ಈಗಲೂ ವಿಜ್ಞಾನ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಅನುದಾನ ನೀಡುವುದಾಗಿ ತಿಳಿಸಿದರು. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಬಗ್ಗೆ ಹಲವು ಬಾರಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಶೇ.20 ಹೆಚ್ಚುವರಿ ಪಟ್ಟಿ ಮಾಡಿ ಶಿಕ್ಷಕರ ನೇಮಕ ಮಾಡಿ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಆದಷ್ಟು ಬೇಗ 15000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಇದರಲ್ಲಿ 5000 ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಶಿಕ್ಷಕರ ನೇಮಕಾತಿ ಆರಂಭಿಸಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಯುಪಿಎಸ್‌ಸಿ ಮಾದರಿ ಅನುಸರಿಸಿ ಯಾವುದೇ ದೋಷವಿಲ್ಲದಂತೆ ನೇಮಕಾತಿ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ನಡೆಸಲು ಸರ್ಕಾರಕ್ಕೆ ಒತ್ತಾಯಿಸುವೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ನೋಡಲ್ ಅಧಿಕಾರಿ ರಾಜೇಂದ್ರ ಬೆಳ್ಳಿ, ಡಯಟ್ ವತಿಯಿಂದ ಶಿಕ್ಷಕರಿಗೆ ಪಿ‌ಎಬಿ ಅನುಮೋದಿತ ತರಬೇತಿ ಆಯೋಜಿಸಲಾಗಿದ್ದು, ಪೋಕ್ಸೋ, ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಶಿಕ್ಷಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವಿಜ್ಞಾನ ಕೇಂದ್ರದ ಕ್ಯೂರೇಟರ್ ಮೈಲಾರಪ್ಪ ಗುಡ್ಲಾನೂರು, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಸ್.ಬಿ‌. ಕುರಿ, ಹೇಮಣ್ಣ ಕವಲೂರು, ಶಿಕ್ಷಕ ಕಾಸೀಮಸಾಬ್ ಸಂಕನೂರ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವೇಂದ್ರಪ್ಪ ಜಿರ್ಲಿ, ಜಿಲ್ಲೆಯ ಪ್ರೌಢಶಾಲಾ ಹಾಗೂ ಜಿಪಿಟಿಯ ವಿಜ್ಞಾನ ಮತ್ತು ಗಣಿತ ಶಿಕ್ಷಕರಿದ್ದರು. ಶಿಕ್ಷಕ ಶೇಖರ ಅಂಕದ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ