ಬೆಂಗಳೂರು : ಮೊಬೈಲ್ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ಮೂಲದ ಶ್ರೀನಿವಾಸ (45) ಕೊಲೆಯಾದ ದುರ್ದೈವಿ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿ ನಾಗರಾಜ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?
ಕೊಲೆಯಾದ ಶ್ರೀನಿವಾಸ ಮತ್ತು ಆರೋಪಿ ನಾಗರಾಜ್ ಟಿ.ನರಸೀಪುರ ತಾಲೂಕಿನ ತಾಯೂರು ಗ್ರಾಮದವರು. ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಕತ್ರಿಗುಪ್ಪೆಯ ಶ್ರೀನಿವಾಸನಗರದಲ್ಲಿ ಬಾಡಿಗೆ ರೂಮ್‌ನಲ್ಲಿ ನೆಲೆಸಿದ್ದರು. ಬುಧವಾರ ಇಬ್ಬರು ಸಂಜೆ ಕೆಲಸ ಮುಗಿಸಿಕೊಂಡು ರೂಮ್‌ಗೆ ಬಂದಿದ್ದಾರೆ. ಈ ವೇಳೆ ನಾಗರಾಜ್‌ನ ಮೊಬೈಲ್ ಅನ್ನು ಶ್ರೀನಿವಾಸ ತೆಗೆದುಕೊಂಡ ಎಂಬ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ.
ಜಗಳ ವಿಕೋಪಕ್ಕೆ ತಿರುಗಿ ನಾಗರಾಜ್ ಮನೆಯಲ್ಲಿದ್ದ ವಾಟರ್ ಹೀಟರ್‌ನಿಂದ ಶ್ರೀನಿವಾಸ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಗುರುವಾರ ಬೆಳಗ್ಗೆ ಇಬ್ಬರು ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಮೇಸ್ತ್ರಿ ರೂಮ್ ಬಳಿ ಹುಡುಕಿಕೊಂಡು ಬಂದಾಗ ಶ್ರೀನಿವಾಸ್‌ನ ಕೊಲೆ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಮೃತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಕೊಲೆ ಬಳಿಕ ಪರಾರಿಯಾಗಿದ್ದ ಆರೋಪಿ ನಾಗರಾಜ್‌ನನ್ನು ಮೈಸೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊಬೈಲ್ ವಿಚಾರಕ್ಕೆ ನಡೆದ ಜಗಳದ ವೇಳೆ ಶ್ರೀನಿವಾಸ್‌ನನ್ನು ಕೊಲೆ ಮಾಡಿದ್ದಾಗಿ ಆರೋಪಿ ನಾಗರಾಜ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.