ಶಿವಾನಂದ ಗೊಂಬಿಹುಬ್ಬಳ್ಳಿ:
ಹೋರಾಟ ಮುಂದುವರಿದಿದ್ದರೂ ಮಹದಾಯಿ ಮಾತ್ರ ದಾಹ ತೀರಿಸಲಿಲ್ಲ. ವೇದಿಕೆಯ ಹಾಸಿಗೆ ಮಾಸಿದೆ, ಹಾಕಿದ ಪೆಂಡಾಲ್ ಹರಿದಿದೆ. ಮಳೆ ನೀರು ಒಳಗೆ ಹೊಕ್ಕುತ್ತದೆ. ಹರಿದ ಪೆಂಡಾಲ್‌ನ ಬಟ್ಟೆಯೊಳಗಿಂದ ಕೊರೆಯುವ ಚಳಿ ರೈತರನ್ನು ನಡುಗಿಸುತ್ತದೆ. ಆದರೂ ನಮ್ಮ ನೀರು ನಮಗೆ ನೀಡಿ ಎಂಬ ಘೋಷಣೆ ವೇದಿಕೆಯಿಂದ ನಿರಂತರವಾಗಿ ಮೊಳಗುತ್ತಲೇ ಇದೆ.
೧೯೮೦ರ ದಶಕಗಳಿಂದ ಕಳಸಾ-ಬಂಡೂರಿ ತಿರುವು ಯೋಜನೆಗೆ ಹೋರಾಟ ನಡೆಯುತ್ತಲೇ ಇದ್ದು ಇದಕ್ಕಾಗಿ ಎಲ್ಲ ರೀತಿಯ ಹೋರಾಟ ನಡೆದಿವೆ. ನರಗುಂದದಿಂದ ಮಹದಾಯಿ ನದಿ ವರೆಗೂ ಪಾದಯಾತ್ರೆ, ರಕ್ತದಲ್ಲಿ ಪತ್ರವನ್ನು ಬರೆಯಲಾಗಿದೆ. ಈ ಬಗೆಯ ಹೋರಾಟಗಳೆಲ್ಲ ಒಂದು ಹಂತಕ್ಕೆ ಮುಗಿದು ಹಿಂದಿನವರೆಲ್ಲ ಸುಸ್ತಾಗಿದ್ದಾರೆ. ಆ ಬಳಿಕ ಆಗಾಗ ಹೋರಾಟ ಮಾಡಿದರೆ ನಡೆಯದು, ನೀರು ಬರುವ ವರೆಗೂ ಹೋರಾಟ ನಡೆಸಲೇಬೇಕೆಂದು ನರಗುಂದ (2026, ಜುಲೈ 16) ಹಾಗೂ ನವಲಗುಂದದಲ್ಲಿ ಕಳೆದ ೧೦ ವರ್ಷದ ನಿರಂತರ ಹೋರಾಟ ನಡೆಯುತ್ತಲೇ ಇದೆ.ಈ ಹತ್ತು ವರ್ಷದಲ್ಲಿ ೧೦೦ಕ್ಕೂ ಅಧಿಕ ದಿನಗಳ ಕಾಲ ನರಗುಂದ, ನವಲಗುಂದ ಸೇರಿದಂತೆ ಉತ್ತರ ಕರ್ನಾಟಕ ವಿವಿಧೆಡೆ ಬಂದ್, ಚಳವಳಿ, ಪತ್ರ ಚಳವಳಿ, ರಸ್ತೆ ತಡೆ, ಕಚೇರಿಗೆ ಮುತ್ತಿಗೆ, ರೈಲು ತಡೆ, ರಕ್ತದಲ್ಲಿ ಪತ್ರ ಬರೆಯುವುದು ಸೇರಿದಂತೆ ವಿಭಿನ್ನ ಬಗೆಯ ಹೋರಾಟಗಳು ನಡೆದರೂ ಗಂಗೆ ಮಾತ್ರ ಜನರ ದಾಹ ತೀರಿಸಿಯೇ ಇಲ್ಲ.
ರೈತರ ಒತ್ತಡ, ಹೋರಾಟಕ್ಕೆ ಮಣಿದು ನ್ಯಾಯಾಧಿಕರಣವೂ ತ್ವರಿತಗತಿಯಲ್ಲಿ ವಾದ-ವಿವಾದ ಆಲಿಸಿ ೨೦೧೮ರ ಆಗಸ್ಟ್ ೧೪ರಂದು ರಾಜ್ಯಕ್ಕೆ ೧೩.೪೦ ಟಿಎಂಸಿ ನೀರು ಹಂಚಿಕೆ ಮಾಡಿದೆ. ಅದರಲ್ಲಿ ೩.೯ ಟಿಎಂಸಿ ಕುಡಿಯುವ ನೀರು, ೮ ಟಿಎಂಸಿ ನೀರು ವಿದ್ಯುತ್ ಉತ್ಪಾದನೆ, ೧.೫ ಟಿಎಂಸಿ ಹಳ್ಳಿಗಳಿಗೆ ಮೀಸಲಿಟ್ಟಿದೆ. ಕೇಂದ್ರ ಸರ್ಕಾರ ಕೂಡ ತಡಮಾಡದೇ ಅಧಿಸೂಚನೆಯನ್ನೂ ಹೊರಡಿಸಿದೆ. ಆದರೆ, ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಈ ವರೆಗೂ ಕಾಮಗಾರಿ ಕೈಗೊಳ್ಳಲು ಅನುಮತಿ ಸಿಕ್ಕಿಲ್ಲ. ಯೋಜನೆಗೆ ಗೋವಾ ಕೊಕ್ಕೆ ಹಾಕಿ ಕುಳಿತಿದ್ದರಿಂದ ಮತ್ತಷ್ಟು ವಿಳಂಬವಾಗಲು ಕಾರಣವಾಗಿದೆ. ಇದೇ ಹೋರಾಟದಿಂದ ಸಾಕಷ್ಟು ಜನರು ರಾಜಕೀಯದಲ್ಲಿ ಹುಲುಸಾಗಿ ಬೆಳೆದು ದೊಡ್ಡ ಹುದ್ದೆ ಅನುಭವಿಸಿದ್ದಾರೆ.
ಇನ್ನಾದರೂ ಸರ್ಕಾರಗಳು ಸಮಸ್ಯೆ ಬಗೆಹರಿಸಿ ಜನರ ದಾಹ ತೀರಿಸಲು ಕ್ರಮಕೈಗೊಳ್ಳುತ್ತವೆಯೇ ಎಂಬುದನ್ನು ಕಾಯ್ದು ನೋಡಬೇಕಷ್ಟೇ.!ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸುವಂತೆ ನಡೆಸುತ್ತಿರುವ ಹೋರಾಟಕ್ಕೆ ಬರೋಬ್ಬರಿ ೧೦ ವರ್ಷ ಆಯ್ತು. ಆದರೆ ನೀರು ಬಂದಿಲ್ಲ. ನಾವು ದಣಿದಿಲ್ಲ. ಮಹದಾಯಿ ನಮ್ಮ ಒಡಲು ತಂಪಾಗಿಸುವ ವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಮುಂದುವರಿಯುತ್ತಲೇ ಇರುತ್ತದೆ. ಇನ್ನಾದರೂ ಸರ್ಕಾರಗಳು ನಮ್ಮತ್ತ ತಿರುಗಿ ನೋಡಿ ಸಮಸ್ಯೆ ಪರಿಹರಿಸಬೇಕೆಂಬುದಷ್ಟೇ ನಮ್ಮ ಆಗ್ರಹ.ವೀರೇಶ ಸೊಬರದಮಠ, ಅಧ್ಯಕ್ಷರು, ರೈತ ಸೇನಾ ಕರ್ನಾಟಕ