ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ ಸಂಗ್ರಹದ ಪ್ರಕರಣದಲ್ಲಿ ಸಿಬಿಐ ತನಿಖೆ ಹಿಂಪಡೆದ ರಾಜ್ಯ ಸರ್ಕಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ರೈತ ಮತ್ತು ಕೃಷಿ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯದಲ್ಲಿ ಕಳ್ಳರ ತಂಡವೇ ಕ್ಯಾಬಿನೆಟಿನಲ್ಲಿ ಕೂತಿದೆ ಎಂದು ಗಂಭೀರ ಆರೋಪ ಮಾಡಿದರು. ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾವು ಕಳ್ಳರ ಕೈಗೆ ಬೀಗದ ಕೈ ಕೊಟ್ಟಿದ್ದೇವೆ, ಅವರೇ ಕೇಸು ವಾಪಸ್ ತಗೊಳ್ತಾರೆ, ಅವರೇ ಜವಾಬ್ದಾರಿ ಹಂಚಿಕೊಳ್ಳುತ್ತಾರೆ, ಅವರೇ ದುಡ್ಡು ತಿಂತಾರೆ, ಅವರೇ ಸಂಗ್ರಹ ಮಾಡುತ್ತಾರೆ, ಬೇರೆ ರಾಜ್ಯಗಳಿಗೆ ಚುನಾವಣೆ ನಡೆಸಲು ಹಣ ಹಂಚುತ್ತಾರೆ ಎಂದರು.ಡಿ.ಕೆ.ಶಿ. ಅವರ ಪ್ರಕರಣದಲ್ಲಿ ಸಿಬಿಐ ಅವರು ಇಷ್ಟೊಂದು ತನಿಖೆ ನಡೆಸಿದ ಕೇಸ್‌ನಿಂದ ಅವರನ್ನೇ ಕೈ ಬಿಡುವುದು ಎಷ್ಟು ಸರಿ, ಸಾಕಷ್ಟು ವಿವಾದ ನಡೆದಿದೆ, ಸಾಕಷ್ಟು ವಿಚಾರಣೆ ನಡೆದಿದೆ, ಅದಕ್ಕಾಗಿ ಸಾಕಷ್ಟು ಖರ್ಚು ಆಗಿದೆ, ಈಗ ನಿರ್ಣಾಯಕ ಹಂತದಲ್ಲಿ ಕೇಸು ವಾಪಸ್ ತೆಗೆದುಕೊಳ್ಳುವುದು ಎಂದರೆ ಭ್ರಷ್ಟಾಚಾರಿಗಳ ರಕ್ಷಣೆ ಕಾಂಗ್ರೆಸ್‌ನ ನೀತಿ ಎಂದು ಸಾಬೀತಾಗುತ್ತಿದೆ ಎಂದರು. ಆದರೆ ನಮಗೆ ನ್ಯಾಯಾಂಗ, ಸಿಬಿಐ ಇದಕ್ಕೆ ಅವಕಾಶ ಕೊಡುವುದಿಲ್ಲ, ಭ್ರಷ್ಟರಿಗೆ ಖಂಡಿತ ಶಿಕ್ಷೆಯಾಗುತ್ತದೆ ಅನ್ನೋ ವಿಶ್ವಾಸ ಇದೆ ಎಂದರು.
2024ರ ಚುನಾವಣೆಯೊಂದೇ ಗುರಿ ನಾವು ಪಂಚ ರಾಜ್ಯ ಚುನಾವಣೆಯ ಫಲಿತಾಂಶದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿಲ್ಲ, ಕಾರಣ ಈ ಚುನಾವಣೆಯಲ್ಲಿ ನಮ್ಮ ರಾಜ್ಯ ಇತರ ರಾಜ್ಯಗಳ ಕಾಂಗ್ರೆಸ್ ಸರ್ಕಾರಗಳು ಹಣವನ್ನು ವಿತರಿಸಿ, ಸುಳ್ಳು ಗ್ಯಾರಂಟಿಗಳನ್ನ ನೀಡಿ ಗೆಲ್ಲುವ ಪ್ರಯತ್ನ ಮಾಡುತ್ತಿವೆ. ಆದ್ದರಿಂದ ನಮ್ಮ ಗುರಿ ಇರುವುದು 2024ರ ಲೋಕಸಭಾ ಚುನಾವಣೆ, ಇದರಲ್ಲಿ ಮತ್ತೆ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ತರುವುದೇ ಉದ್ದೇಶವಾಗಿದೆ ಎಂದು ಶೋಭಾ ಹೇಳಿದರು.ಅಧಿಕಾರಿಗಳ ಮೂಲಕ ರಾಜಕೀಯ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳನ್ನು ಜನರಿಗೆ ತಲುಪಿಸದಂತೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಿಗಳನ್ನು ತಡೆಯುತ್ತಿದೆ, ಅಧಿಕಾರಿಗಳ ಮೂಲಕ ರಾಜಕೀಯ ಮಾಡಿಸುತ್ತಿದೆ. ಕೇಂದ್ರ ನೀಡಿದ ಹಣವನ್ನೂ ಜನರಿಗೆ ತಲುಪಿಸುತ್ತಿಲ್ಲ, ವಿಕಸಿತ ಭಾರತ ಸಂಕಲ್ಪ ಯಾತ್ರೆಗೂ ಸಹಕಾರ ನೀಡುತ್ತಿಲ್ಲ. ಸಿದ್ದರಾಮಯ್ಯ ಅವರೇ ,ನೀವು ಕೇಂದ್ರ ಸರ್ಕಾರದ ಬಳಿ ಬರುವುದಿಲ್ಲವೇ ಕೇಂದ್ರದ ಸಹಾಯ ಬೇಡವೇ ಎಂದು ಸಚಿವೆ ಶೋಭಾ ಪ್ರಶ್ನಿಸಿದರು.