ಹೆಣ್ಣು ಸಂಸಾರದ ಕಣ್ಣಾಗಿರುವಳು: ಶಾಸಕ

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಸಂಸಾರಕ್ಕೆ ಕಣ್ಣಾಗಿ ಮನೆತನದ ಉಳಿವಿಗೆ ನಿಂತಿರುವಳು. ಈ ಮೂಲ ವಿಚಾರವನ್ನು ಸಮಾಜದ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಲಿಂಗಪಟ್ಟಣ, ಗಾಣಾಳು ಕೃಷಿ ಪತ್ತಿನ ಸಹಕಾರ 33 ಸಂಘಗಳಿಗೆ , ಸ್ವಸಹಾಯ ಗುಂಪುಗಳಿಗೆ ಸಾಲದ ಚೆಕ್ ವಿತರಣೆ

ಕನ್ನಡಪ್ರಭ ವಾರ್ತೆ ಹಲಗೂರು

ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಸಂಸಾರಕ್ಕೆ ಕಣ್ಣಾಗಿ ಮನೆತನದ ಉಳಿವಿಗೆ ನಿಂತಿರುವಳು. ಈ ಮೂಲ ವಿಚಾರವನ್ನು ಸಮಾಜದ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಸರ್ಕಾರಿ ಪಬ್ಲಿಕ್ ಶಾಲಾ ಆವರಣದಲ್ಲಿ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಹಲಗೂರು ಎಂಡಿಸಿಸಿ ಬ್ಯಾಂಕ್ ವತಿಯಿಂದ ಲಿಂಗಪಟ್ಟಣ ಮತ್ತು ಗಾಣಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ 33 ಸಂಘಗಳಿಗೆ ಒಂದುವರೆ ಕೋಟಿ ರು ಸಾಲದ ಚೆಕ್ ಗಳನ್ನು ಸ್ವ ಸಹಾಯ ಗುಂಪು ಗಳಿಗೆ ವಿತರಿಸಿ ಮಾತನಾಡಿದ ಅವರು, ಸಂಘಗಳಲ್ಲಿ ಸಾಲಗಳನ್ನು ಮಹಿಳೆಯರು ಶೋಕಿಗಾಗಿ ಅಥವಾ ಬೇಕಾಬಿಟ್ಟಿ ಸಿಗುತ್ತಿದೆ ಎಂದು ತೆಗೆದುಕೊಳ್ಳುತ್ತಿಲ್ಲ. ತಮ್ಮ ಸಂಸಾರ ನಿರ್ವಹಣೆಗಾಗಿ ಎಂದು ಅರ್ಥೈಸಿಕೊಳ್ಳಬೇಕು ಎಂದರು.

ಹೆಣ್ಣಿನ ಜಾಣ್ಮೆ, ತಾಳ್ಮೆ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವ ಪ್ರಭುದ್ಧತೆ. ಜವಾಬ್ದಾರಿಯ ಸಾಲಿನಲ್ಲಿ ಈ ಸಾಲಗಳ ಬೇಡಿಕೆ ಪಟ್ಟಿ ನಿಂತಿದೆ. ಸಮಾಜದ ಮಹಿಳೆಯರಿಗೆ, ಕುಟುಂಬಕ್ಕೆ, ಯುವಕರು ಸೇರಿದಂತೆ ಎಲ್ಲರಿಗೂ ಅನುಕೂಲವಾಗುವಂತೆ ಶಕ್ತಿ ಯೋಜನೆ, ಗೃಹಜೋತಿ, ಅನ್ನಭಾಗ್ಯ ,ಗೃಹಲಕ್ಷ್ಮಿ, ಯುವನಿಧಿ, ಯೋಚನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ ಎಂದು ತಿಳಿಸಿದರು.

ಜಾತಿ, ಮತದ ಅಂಧಕಾರವಿಲ್ಲದೆ, ಮಾನವೀಯತೆಯ ನೆಲಗಟ್ಟಿನಲ್ಲಿ ಈ ದೇಶವನ್ನು ಮುನ್ನಡೆಸಲು ಸಾಧ್ಯ. ದೇಶದ ಮಕ್ಕಳು ಇತರ ಬೇರೆ ದೇಶಗಳೊಡನೆ ಪೈಪೋಟಿಯಿಂದ ತಂತ್ರಜ್ಞಾನದಲ್ಲಿ ಮುಂದುವರೆದು ಆ ದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದು ಹೇಳಿದರು.

ಶ್ರೀ ಶಕ್ತಿ ಸಂಘಗಳಲ್ಲಿ ಬ್ಯಾಂಕ್ ನೀಡುವ 5 ಲಕ್ಷದೊಳಗಿನ ಸಾಲಕ್ಕೆ ಬಡ್ಡಿಯನ್ನು ಸರ್ಕಾರವೇ ಕಟ್ಟುತ್ತದೆ. 5 ಲಕ್ಷಕ್ಕೆ ಮೇಲ್ಪಟ್ಟ ಸಾಲಕ್ಕೆ ನೀವು ಬಡ್ಡಿ ಕಟ್ಟಬೇಕು ಎಂದು ತಿಳಿಸಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಜೋಗಿಗೌಡ ಮಾತನಾಡಿ, ನಿರ್ದೇಶಕರೂ ಆದ ಶಾಸಕ ನರೇಂದ್ರಸ್ವಾಮಿ ಚುನಾವಣೆ ವೇಳೆ ನಮ್ಮ ತಾಲೂಕಿಗೆ ಹೆಚ್ಚಿನ ಸಾಲ ನೀಡಬೇಕು. ಅತಿ ಶೀಘ್ರದಲ್ಲೇ ಶ್ರೀ ಶಕ್ತಿ ಕಾರ್ಯಕ್ರಮವನ್ನು ಆಯೋಜಿಸಿ ಎಂದು ಮಾರ್ಗದರ್ಶನ ನೀಡಿದ್ದರು ಎಂದರು.

ಇದು ಎರಡನೇ ಕಾರ್ಯಕ್ರಮವಾಗಿದೆ. ಅವರ ಮಾರ್ಗದರ್ಶನದಲ್ಲಿ ಹಾಗೂ ನಿರ್ದೇಶನದ ಮೇರೆಗೆ ತಾಲೂಕಿನಲ್ಲಿರುವ ಎಲ್ಲಾ ಹೋಬಳಿಯ ಸ್ವಸಹಾಯ ಸಂಘಗಳಿಗೆ ನಮ್ಮ ಬ್ಯಾಂಕಿನ ವತಿಯಿಂದ 16 ಕೋಟಿ ಸಾಲ ನೀಡಲಾಗಿತ್ತು. ಅವರು ನಿರ್ದೇಶಕರಾದ ಎರಡು ವರ್ಷದ ಒಳಗೆ 15 ಕೋಟಿ ಹೆಚ್ಚುವರಿ ಹಣ ನೀಡಿದ್ದೇವೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ 20 ಕೋಟಿ ರು ಹಣವನ್ನು ನೀಡುತ್ತೇವೆ. ರೈತರಿಗೆ ಸಾಲ ಮತ್ತು ಶ್ರೀ ಶಕ್ತಿ ಸಂಘಗಳ ಸಾಲ ಸೇರಿದಂತೆ 237 ಕೋಟಿ ರು ಗಳನ್ನು ಸಾಲ ನೀಡಲಾಗಿದೆ. ಇನ್ನೂ ಒಂದು ವರ್ಷದೊಳಗೆ 300 ಕೋಟಿ ಸಾಲವನ್ನು ಕೊಟ್ಟೆ ಕೊಡುತ್ತೇವೆ ಎಂದು ಹೇಳಿದರು.

ಹಲಗೂರು ಗ್ರಾಪಂ ಅಧ್ಯಕ್ಷೆ ರಕ್ಷಿತಾ ಮಾತನಾಡಿ, ಗ್ರಾಮೀಣ ಅಭಿವೃದ್ಧಿಗೆ ಮಹಿಳಾ ಸ್ವಸಹಾಯ ಸಂಘಗಳು ಸಹಕಾರಿಯಾಗಿವೆ. ಮಹಿಳೆಯರು ತಮ್ಮ ಆಸೆಗಳ ಪೂರೈಕೆ ಜೊತೆಗೆ ಕುಟುಂಬದ ಅಭಿವೃದ್ಧಿಗೂ ಸಂಘಗಳು ಬೆನ್ನೆಲುಬಾಗಿ ನಿಂತಿವೆ. ಸಂಘಗಳ ಮೂಲಕ ಕೌಶಲ್ಯ ತರಬೇತಿ ನೀಡಿ, ಈ ಮೂಲಕ ಸ್ವ ಉದ್ಯೋಗ ಆರಂಭಿಸಿ ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಹಲಗೂರು ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ಬದಲಾಗುತ್ತಿರುವುದರಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಪಂಚಾಯಿತಿ ಅಭಿವೃದ್ಧಿಗೆ ಸಹಕರಿಸುವಂತೆ ಶಾಸಕರಲ್ಲಿ ವಿನಂತಿಸಿದರು. ಈ ವೇಳೆ ಸ್ವಸಹಾಯ ಸಂಘಗಳಿಗೆ ಸಾಲದ ಚೆಕ್ ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಡಿಡಿಸಿ ಬ್ಯಾಂಕ್ ನಿರ್ದೇಶಕ ಎಚ್.ವಿ.ಅಶ್ವಿನ್ ಕುಮಾರ್, ಜಿಪಂ ಮಾಜಿ ಸದಸ್ಯ ಚಂದ್ರ ಕುಮಾರ್, ಗ್ರಾಪಂ ಉಪಾಧ್ಯಕ್ಷೆ ಲತಾ, ಬ್ಯಾಂಕಿನ ತಾಲೂಕು ಮೇಲ್ವಿಚಾರಕ ಬಸವರಾಜು, ಉಮೇಶ್, ಹಲಗೂರು ಶಾಖೆ ವ್ಯವಸ್ಥಾಪಕ ಕೆ.ಎಲ್ . ವಿಜಯ್ ಕುಮಾರ್ ಮತ್ತು ಸಿಬ್ಬಂದಿ, ಸ್ವಸಹಾಯ ಸಂಘಗಳ ಮೇಲ್ವಿಚಾರಕರು ಸೇರಿದಂತೆ ಶಿವನಂಜೇಗೌಡ, ತೇಜ್ ಕುಮಾರ್, ಶ್ಯಾಮ್ ,ಸಾಗ್ಯ ಕೆಂಪಣ್ಣ. ಪುಟ್ಟಸ್ವಾಮಿ, ಚಲನಚಿತ್ರ ನಟ ಜಿಮ್ ರವಿ ಸೇರಿದಂತೆ ಇತರರು ಇದ್ದರು.

------------

30ಕೆಎಂಎನ್ ಡಿ28,29

ಹಲಗೂರಿನಲ್ಲಿ ಲಿಂಗಪಟ್ಟಣ ಮತ್ತು ಗಾಣಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ 33 ಸಂಘಗಳಿಗೆ ಒಂದುವರೆ ಕೋಟಿ ರು. ಸಾಲದ ಚೆಕ್ ಗಳನ್ನು ಸ್ವ ಸಹಾಯ ಗುಂಪು ಗಳಿಗೆ ವಿತರಿಸಲಾಯಿತು.

---ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು.

Share this article