ಕನ್ನಡಪ್ರಭ ವಾರ್ತೆ ಕೊಪ್ಪಳ
ಮೊನ್ನೆಯಷ್ಟೇ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಆ ಬಾಲಕಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಳು. ಉತ್ತಮ ಫಲಿತಾಂಶ ಬರುವ ಉತ್ಸಾಹವೂ ಇತ್ತು. ಆದರೆ ವಿಧಿಯ ಅಟ್ಟಹಾಸ ಬೇರೆಯದೇ ಆಗಿತ್ತು. ಗದಗದಲ್ಲಿ ನಡೆದ ಬರ್ಬರ್ ಹತ್ಯಾಕಾಂಡದಲ್ಲಿ ಈ ಬಾಲಕಿ ಸೇರಿದಂತೆ ನಾಲ್ವರು ಹತ್ಯೆಗೀಡಾಗಿದ್ದು, ಅವರ ಸಹಪಾಠಿಗಳು, ಸ್ನೇಹಿತರು ಇದನ್ನು ನೆನೆಸಿ ಮಮ್ಮಲ ಮರಗುತ್ತಿದ್ದಾರೆ.ಗದಗಿನಲ್ಲಿ ಗುರುವಾರ ಮಧ್ಯಾರಾತ್ರಿಯ ಬಳಿಕ ಒಂದೇ ಮನೆಯಲ್ಲಿ ನಾಲ್ವರನ್ನು ಹತ್ಯೆಗೈದ ಘಟನೆಯಲ್ಲಿ ಮೃತರಾದವರ ಪೈಕಿ ಆಕಾಂಕ್ಷಾ ಸಹ ಒಬ್ಬಳು. ಇವಳು ಇತ್ತೀಚಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದರು.
ಗದಗದಲ್ಲಿ ಸಂಬಂಧಿಗಳ ಮನೆಗೆ ತನ್ನ ಸಾಕು ತಂದೆ ಪರಶುರಾಮ, ತಾಯಿ ಲಕ್ಷ್ಮೀ ಅವರ ಜೊತೆಗೆ ತೆರಳಿದ್ದಳು. ಸಂಬಂಧಿ ಪ್ರಕಾಶ ಬಾಕಳೆ ಅವರ ನಿವಾಸದಲ್ಲಿ ತಂಗಿದ್ದು, ಗುರುವಾರ ಮಧ್ಯರಾತ್ರಿಯ ಬಳಿಕ ಈ ಮೂವರು ಹಾಗೂ ಪ್ರಕಾಶ ಬಾಕಳೆ ಅವರ ಪುತ್ರನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು.ಕೊಪ್ಪಳದ ಭಾಗ್ಯನಗರದ ನಿವಾಸಿಗಳಾಗಿದ್ದ ಪರಶುರಾಮ ಹಾಗು ಲಕ್ಷ್ಮೀ ಎಂಬವರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ತಮ್ಮ ಸಂಬಂಧಿಯೊಬ್ಬರಿಂದ ದತ್ತು ಪಡೆದು ಆಕಾಂಕ್ಷಾಳನ್ನು ಪ್ರೀತಿಯಿಂದ ಸಾಕಿ ಸಲಹುತ್ತಿದ್ದರು. ಗುರುವಾರ ರಾತ್ರಿಯೇ ಇವರು ಕೊಪ್ಪಳಕ್ಕೆ ವಾಪಸಾಗಬೇಕಿತ್ತು. ರೈಲು ವಿಳಂಬವಾಗಿದ್ದರಿಂದ ಅವರು ಮನಸ್ಸು ಬದಲಿಸಿ ಗದಗದಲ್ಲಿಯೇ ವಾಸಿಸಲು ನಿರ್ಧರಿಸಿದರು. ರಾತ್ರಿ ಹತ್ಯೆಯಾದರು.
ಬಾಗಿಲು ತೆರೆಯುವವರಿರಲಿಲ್ಲ:ಭಾಗ್ಯನಗರ ನಿವಾಸಿಯಾಗಿದ್ದ ಪರಶುರಾಮ ಹಾಗು ಲಕ್ಷ್ಮೀ ಹಾಗೂ ಮಗಳು ಆಕಾಂಕ್ಷಾ ಹೊರತಾಗಿ ಮನೆಯಲ್ಲಿ ಯಾರೂ ಸಹ ಇರಲಿಲ್ಲ. ಇದ್ದಿದ್ದೂ ಈ ಮೂವರು ಮಾತ್ರ. ಗದಗಿನಲ್ಲಿ ಜರುಗಿದ ಕೊಲೆ ಪ್ರಕರಣದಲ್ಲಿ ಮೂವರ ಪ್ರಾಣ ಹೋಗಿದ್ದರಿಂದ ಭಾಗ್ಯನಗರದ ಅವರ ಮನೆ ಬಾಗಿಲನ್ನೂ ಸಹ ತೆರೆಯುವವರು ಯಾರೂ ಇರಲಿಲ್ಲ. ಸುಮಾರು ನಲವತ್ತು ವರ್ಷದ ಹಿಂದೆ ಭಾಗ್ಯನಗರಕ್ಕೆ ಬಂದು ನೆಲೆಸಿದ್ದ ಇವರು ಇದ್ದಿದ್ದು ಮೂವರೇ. ಹೀಗಾಗಿ ಮೂವರು ಕೊಲೆಯಾಗಿದ್ದರಿಂದ ಅವರ ಮನೆ ಕದ ತೆಗೆಯುವವರು ದಿಕ್ಕಿರಲಿಲ್ಲ. ಶನಿವಾರ ಬೆಳಗ್ಗೆ ದೂರದ ಸಂಬಂಧಿಕರು ಭಾಗ್ಯನಗರದ ನಿವಾಸಿಗಳು ಪೊಲೀಸರ ಉಪಸ್ಥಿತಿಯಲ್ಲಿ ಬಾಗಿಲನ್ನು ತೆರೆದು ಮನೆ ಸ್ವಚ್ಛ ಮಾಡುವುದು, ಪೂಜೆ ಕಾರ್ಯ, ವಿವಿಧ ಕಾರ್ಯ ನೆರೆವೇರಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಗುಡೂರು ಗ್ರಾಮದವರಾಗಿದ್ದ ಇವರು ನಲವತ್ತು ವರ್ಷದ ಹಿಂದೆ ಭಾಗ್ಯನಗರದಲ್ಲಿ ನೆಲೆಸಿ ಹೋಟೆಲ್ ಉದ್ಯಮ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.