ಜನಸಾಗರದ ನಡುವೆ ವೈಭವದ ಚಾಮರಾಜೇಶ್ವರ ರಥೋತ್ಸವ

KannadaprabhaNewsNetwork |  
Published : Jul 21, 2024, 01:18 AM IST
ಜನ ಸಾಗರದ ನಡುವೆ ವೈಭವದ ಚಾಮರಾಜೇಶ್ವರ ರಥೋತ್ಸವ | Kannada Prabha

ಸಾರಾಂಶ

ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ಮಹಾ ರಥೋತ್ಸವವು ಶನಿವಾರ ಮಧ್ಯಾಹ್ನ ಜನಸಾಗರದ ನಡುವೆ ಯಾವುದೇ ಅಡೆತಡೆ ಇಲ್ಲದೇ ವೈಭವಯುತವಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ಮಹಾ ರಥೋತ್ಸವವು ಶನಿವಾರ ಮಧ್ಯಾಹ್ನ ಜನಸಾಗರದ ನಡುವೆ ಯಾವುದೇ ಅಡೆತಡೆ ಇಲ್ಲದೇ ವೈಭವಯುತವಾಗಿ ನಡೆಯಿತು.ನೂತನ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಥೋತ್ಸವಕ್ಕೆ ಮೆರುಗು ತಂದರು. ಶನಿವಾರ ಬೆಳಗ್ಗೆ ಪುರೋಹಿತರ ತಂಡ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳನ್ನು ಪ್ರಾರಂಭಿಸಿದರು. ಉತ್ಸವ ಮೂರ್ತಿಯನ್ನು ಚಿನ್ನಾಭರಣಗಳಿಂದ ಶೃಂಗರಿಸಿ ವಿಶೇಷ ಪೂಜೆ ಮಾಡಿ ಮಹಾಮಂಗಳಾರತಿ ನಂತರ ದೇವಸ್ಥಾನದ ಒಳಾವರಣದಲ್ಲಿ ಒಂದು ಸುತ್ತು ದೇವಸ್ಥಾನದ ಸುತ್ತ ಪ್ರದಕ್ಷಿಣಿ ಹಾಕಿ ದೇವಸ್ಥಾನದ ಮುಂಭಾಗದ ಜಗುಲಿಯಲ್ಲಿ ಇಡಲಾಯಿತು.

ಅಧಿಕಾರಿಗಳು, ಜನಪ್ರತಿನಿಧಿಗಳು ವಿವಿಧ ಕೋಮಿನ ಯಜಮಾನರು, ದೇವಸ್ಥಾನದ ಸೇವಾ ಸಮಿತಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು. ಮಧ್ಯಾಹ್ನ ೧.೭ ರಿಂದ ೧೨.೩೦ ರ ಶುಭ ಅಭಿಜನ್ ಲಗ್ನದಲ್ಲಿ ನೂತನ ರಥಕ್ಕೆ ಪೂಜೆ ನೆರವೇರಿತು, ವಿವಿಧ ಕೋಮಿನವರಿಂದ ಪೂಜೆ ನೆರವೇರಿದ ನಂತರ ೧೨.೩೨ ಕ್ಕೆ ನೂತನ ರಥ ಚಲಿಸಿತು, ಚಾಮರಾಜೇಶ್ವರ ರಥದ ಮುಂದೆ, ಮಹಾರಾಜರ ತೇರು, ಗಣಪತಿ ಸುಬ್ರಹ್ಮಣ್ಯ, ರಥದ ಹಿಂದೆ ಅಮ್ಮನವರ ರಥ ಚಲಿಸಿದವು.

ದೇವಸ್ಥಾನದ ಮುಂಭಾಗದಿಂದ ದಕ್ಷಿಣಾಭಿಮುಖವಾಗಿ ಚಲಿಸಿ ಎಸ್.ಬಿ.ಎಂ. ರಸ್ತೆಯಲ್ಲಿ ಸಾಗಿ ವೀರಭದ್ರೇಶ್ವರಸ್ವಾಮಿ ದೇವಾಲಯದ ವೃತ್ತದಿಂದ ಮಾರಮ್ಮ ದೇವಸ್ಥಾನದ ರಸ್ತೆಯ ಮೂಲಕ ಹಳೆ ತರಕಾರಿ ಮಾರುಕಟ್ಟೆ ರಸ್ತೆಯಲ್ಲಿ ಹಾದು ಯಾವುದೇ ಅಡೆತಡೆ ಇಲ್ಲದೇ ದೇವಸ್ಥಾನದ ಮೂಲಸ್ಥಾನ ತಲುಪಿತು. ರಥೋತ್ಸವದಲ್ಲಿ ನಾದಸ್ಪರ, ಡೊಳ್ಳು ಕುಣಿತ, ವೀರಗಾಸೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದರು, ತಾಳಕ್ಕೆ ತಕ್ಕಂತೆ ಯುವಕರು ಕುಣಿದು, ಜಯಘೋಷ ಹಾಕಿದರು.

ಸಿಳ್ಳೆ, ಪೀಪಿ ಊದುವುದು, ಬಣ್ಣ ಎರಚುವುದಕ್ಕೆ ನಿಷೇಧ ಹಾಕಲಾಗಿತ್ತು. ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಎಸ್ಪಿ ಕವಿತಾ ರಥೋತ್ಸವದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು. ರಥ ಸಾಗುವ ಹಾದಿಯಲ್ಲಿ ಮುಖಂಡರು, ವಿವಿಧ ಸಂಘಟನೆಗಳು, ಪಾನಕ, ಮಜ್ಜಿಗೆ ವಿತರಿಸಿ ಅನ್ನಸಂತರ್ಪಣೆ ಮಾಡಿದರು. ನವ ವಧು-ವರರು ರಥಕ್ಕೆ ಹಣ್ಣು ಜವನ ಎಸೆದು ಭಕ್ತಿಯ ಪರಿಕಾಷ್ಠೆ ಮೆರೆದರು. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸ್, ಹೋಂ ಗಾರ್ಡ್ಸ್‌ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಡಿವೈಎಸ್ಪಿ ಲಕ್ಷ್ಮಯ್ಯ ರಥದ ಜೊತೆ ಸಾಗಿ, ಭದ್ರತೆಯನ್ನು ನೋಡಿಕೊಂಡರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ