ಹನುಮನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯ ಮುಳ್ಳುಗದ್ದುಗೆ ಉತ್ಸವ

KannadaprabhaNewsNetwork | Published : Apr 2, 2025 1:02 AM

ಸಾರಾಂಶ

ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಜಾತ್ರಾ ಮಹೋತ್ಸವ ಸೋಮವಾರ ರಾತ್ರಿ ಮಠದ ಸಣ್ಣ ಹಾಲಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

ಹಾವೇರಿ: ತಾಲೂಕಿನ ಹನುಮನಹಳ್ಳಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಪಾರಂಪರಿಕ ವಾರ್ಷಿಕ ಜಾತ್ರೆ ಆರಂಭಗೊಂಡಿದ್ದು, ಶ್ರೀಮಠದ ಪ್ರಮುಖ ಆಚರಣೆಯಾಗಿರುವ ಮುಳ್ಳುಗದ್ದುಗೆ ಉತ್ಸವವು ಸೋಮವಾರ ರಾತ್ರಿ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಜಾತ್ರಾ ಮಹೋತ್ಸವ ಸೋಮವಾರ ರಾತ್ರಿ ಮಠದ ಸಣ್ಣ ಹಾಲಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಶ್ರೀಗಳ ಮುಳ್ಳುಗದ್ದುಗೆ ಉತ್ಸವಕ್ಕೆ ಹಲಗಿ ಬಾರಿಸುವವರು, ಸಮ್ಮಾಳ ಕಲಾ ತಂಡದವರು, ಡೊಳ್ಳು, ಕಂಸಾಳೆ ಹಾಗೂ ಲಂಬಾಣಿ ನೃತ್ಯ ತಂಡದವರು ಸಾಥ್ ನೀಡಿ ಜಾತ್ರೆಯ ಮೆರುಗನ್ನು ಹೆಚ್ಚಿಸಿದರು. ಶ್ರೀಗಳು ಕೌಪೀನ ಬಾಳೆ ಎಲೆ ಧರಿಸಿಕೊಂಡು ಮುಳ್ಳುಗದ್ದುಗೆಯನ್ನು ಏರಿದರು. ಹಾಲಸ್ವಾಮಿ ಮಠದ ಆವರಣದಿಂದ ಆರಂಭವಾದ ಮೆರವಣಿಗೆಯು ಸತತ ಎರಡು ಗಂಟೆಗಳವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂಲ ಸ್ಥಳಕ್ಕೆ ಆಗಮಿಸಿ ವಿರಾಜಮಾನಗೊಂಡಿತು. ಶತಮಾನಗಳ ಧಾರ್ಮಿಕ ಇತಿಹಾಸ ಹೊಂದಿರುವ ರಾಂಪುರ ಹಾಲಸ್ವಾಮಿ ಮಠ, ಹೂವಿನಹಡಗಲಿ, ಸಂಕಧಾಳ ಪುಣ್ಯಕ್ಷೇತ್ರಗಳ ಸಂಸ್ಥಾನ ಮಠವಾದ ಹನುಮನಹಳ್ಳಿ ಗ್ರಾಮದ ಹಾಲೇಶ್ವರ ಮಠದ ಮುಳ್ಳುಗದ್ದುಗೆ ಉತ್ಸವದಲ್ಲಿ ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಕನವಳ್ಳಿ, ಕಾಟೇನಹಳ್ಳಿ, ಭರಡಿ, ಕೂರಗುಂದ ಅಗಡಿ, ನೂಕಾಪುರ, ಕಂಚಾರಗಟ್ಟಿ, ಕೆಂಗೊಂಡ, ಕಳ್ಳಿಹಾಳ ತಿಮ್ಮೇನಹಳ್ಳಿ, ಬಸಾಪುರ, ಬೂದಗಟ್ಟಿ, ಬಸವನಕಟ್ಟಿ, ಸೋಮನಕಟ್ಟಿ, ಅರಬಗೊಂಡ, ಕಲ್ಲೆದೇವರ, ಹನುಮಾಪುರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮುಳ್ಳುಗದ್ದುಗೆ ಉತ್ಸವವನ್ನು ನೋಡಿ ಕಣ್ತುಂಬಿಕೊಂಡರು.ಮುಳ್ಳುಗದ್ದುಗೆ ಜಾತ್ರಾ ಮಹೋತ್ಸವದಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ತರಾವರಿ ಪಟಾಕಿಗಳು ಬಾನೆತ್ತರದಲ್ಲಿ ಸಿಡಿಯುತ್ತಿದ್ದು, ಜನಾಕರ್ಷಣೆಗೆ ಒಳಗಾಗಿತ್ತು. ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ಸಿಡಿಮದ್ದು ಪ್ರದರ್ಶನ ವೀಕ್ಷಣೆ ಮಾಡಿದರು. ಉತ್ಸವದಲ್ಲಿ ಶ್ರೀಮಠದ ಸಿದ್ಧರಾಮ ಹಾಲಶಿವಯೋಗಿಗಳು, ಹಾಲ ಮುದುಕೇಶ್ವರ ಶ್ರೀಗಳು, ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಶ್ರೀಗಳು, ಅಭಿನವ ಹಾಲವೀರಪ್ಪಜ್ಜ ಶ್ರೀಗಳು, ಹಾಲ ಅಭಿಷೇಕ ಸ್ವಾಮೀಜಿ, ನಾಗತಿ ಬಸಾಪೂರದ ಗಿರಿರಾಜ ಹಾಲಸ್ವಾಮಿಗಳು ಸೇರಿದಂತೆ ಹಿರೇಹಡಗಲಿ, ಸಂಕಧಾಳ, ರಾಂಪುರ, ಗುಂಡೇರಿ ಕ್ಷೇತ್ರಗಳ ವಿವಿಧ ಮಠಾಧೀಶರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.ಹಾಲಜ್ಜನ ರಥೋತ್ಸವ..ಮುಳ್ಳುಗದ್ದುಗೆ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಮಂಗಳವಾರ ಸಂಜೆ ಹಾಲಸ್ವಾಮಿ ಮಹಾರಥೋತ್ಸವ ನಡೆಯಿತು. ಶ್ರೀಮಠದ ಆವರಣದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಆರಂಭವಾದ ರಥೋತ್ಸವಕ್ಕೆ ಸಣ್ಣ ಹಾಲಸ್ವಾಮಿಗಳು ಹಾಗೂ ಓಂಕಾರ ಹಾಲಸ್ವಾಮಿಗಳು ಚಾಲನೆ ನೀಡಿದರು. ರಥೋತ್ಸವದ ಕಳಶಕ್ಕೆ ಭಕ್ತರು ಬಾಳೆಹಣ್ಣು, ಉತ್ತತ್ತಿ, ಬೆಲ್ಲವನ್ನು ಎಸೆಯುವ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.

Share this article