ದತ್ತ ಜಯಂತಿ ಉತ್ಸವಕ್ಕೆ ವೈಭವಯುತ ತೆರೆ

KannadaprabhaNewsNetwork |  
Published : Dec 15, 2024, 02:03 AM IST
ದತ್ತಪೀಠದಲ್ಲಿ ದತ್ತ ಪಾದುಕೆ ದರ್ಶನಕ್ಕೆ ಕಾದು ನಿಂತಿರುವ ದತ್ತಮಾಲಾಧಾರಿಗಳು. | Kannada Prabha

ಸಾರಾಂಶ

ಮುಗಿಲಿಗೆ ಕೈ ಚಾಚಿರುವ ಚಂದ್ರದ್ರೋಣ ಪರ್ವತಗಳ ನಡುವೆ ಸಾಗುತ್ತಿದ್ದ ವಾಹನಗಳಲ್ಲಿ ಕೇಳಿ ಬರುತ್ತಿದ್ದ ಜೈ ಶ್ರೀರಾಮ್‌, ಜೈ ಹನುಮಾನ್‌ ಘೋಷಣೆಗಳು, ಕೇಸರಿ ಶಲ್ಯ ಧರಿಸಿ ತಲೆ ಮೇಲೆ ಇರುಮುಡಿ ಹೊತ್ತು ಕಿಲೋ ಮೀಟರ್‌ ಗಟ್ಟಲೆ ಸರದಿ ಸಾಲಿನಲ್ಲಿ ನಿಂತಿದ್ದ ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿದರು.

ದತ್ತ ಪಾದುಕೆ ದರ್ಶನ ಮಾಡಿದ ಸಾವಿರಾರು ಮಾಲಾಧಾರಿಗಳು । ಸಿ.ಟಿ. ರವಿ, ಪ್ರಮೋದ್ ಮುತಾಲಿಕ್ ಪೂಜೆಯಲ್ಲಿ ಭಾಗಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮುಗಿಲಿಗೆ ಕೈ ಚಾಚಿರುವ ಚಂದ್ರದ್ರೋಣ ಪರ್ವತಗಳ ನಡುವೆ ಸಾಗುತ್ತಿದ್ದ ವಾಹನಗಳಲ್ಲಿ ಕೇಳಿ ಬರುತ್ತಿದ್ದ ಜೈ ಶ್ರೀರಾಮ್‌, ಜೈ ಹನುಮಾನ್‌ ಘೋಷಣೆಗಳು, ಕೇಸರಿ ಶಲ್ಯ ಧರಿಸಿ ತಲೆ ಮೇಲೆ ಇರುಮುಡಿ ಹೊತ್ತು ಕಿಲೋ ಮೀಟರ್‌ ಗಟ್ಟಲೆ ಸರದಿ ಸಾಲಿನಲ್ಲಿ ನಿಂತಿದ್ದ ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿದರು.

ವಾಯುಭಾರ ಕುಸಿತದಿಂದ ದತ್ತಪೀಠ ಪ್ರದೇಶದಲ್ಲಿ ಕಳೆದ ಎರಡು ದಿನ ಪ್ರತಿಕೂಲ ಹವಮಾನ ಇತ್ತು. ತುಂತುರು ಮಳೆ ಮಂಜಿನಂತೆ ನಿರಂತರವಾಗಿ ಸುರಿಯುತ್ತಿತ್ತು. ಆದರೆ ಮಾಲಾಧಾರಿಗಳ ಮೊಗದಲ್ಲಿ ಇಡೀ ಪೀಠದ ಸುತ್ತ ಉತ್ಸವದ ವಾತಾವರಣ ಇತ್ತು.

ಸರದಿ ಸಾಲಿನಲ್ಲಿ ನಿಂತು ದತ್ತ ಗುಹೆಯೊಳಗೆ ತೆರಳಿದ ದತ್ತಮಾಲಾಧಾರಿಗಳು ದತ್ತಪಾದುಕೆಗಳ ದರ್ಶನ ಪಡೆದರು. ಹೋಮ, ಪಾರ್ಕಿಂಗ್‌ನಲ್ಲಿ ನಿಂತಿರುವ ವಾಹನಗಳ ಸಾಲು ನೋಡುಗರಿಗೆ ಹಿತ ಎನಿಸಿತು. ಸಂಜೆ 4 ಗಂಟೆಯವರೆಗೆ ಸುಮಾರು 14 ಸಾವಿರ ಮಂದಿ ಭಕ್ತರು ಪೀಠಕ್ಕೆ ಬಂದು ದತ್ತಪಾದುಕೆಗಳ ದರ್ಶನ ಪಡೆದು ವಾಪಸ್‌ ತೆರಳಿದರು.

ಶ್ರೀರಾಮಸೇನೆ ಸಾಥ್:ಇದುವರೆಗೆ ಶ್ರೀರಾಮಸೇನೆಯಿಂದಲೇ ಪ್ರತ್ಯೇಕವಾಗಿ ದತ್ತಮಾಲಾ ಅಭಿಯಾನ ನಡೆಸಿದರೆ, ವಿಶ್ವಹಿಂದೂಪರಿಷತ್ ಹಾಗೂ ಭಜರಂಗದಳದಿಂದ ದತ್ತಜಯಂತಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಆದರೆ ಈ ಬಾರಿಯ ದತ್ತಜಯಂತಿ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ನಾಯಕರು ಸೇರಿದಂತೆ ಕಾರ್ಯಕರ್ತರು ಭಾಗಿಯಾಗಿದ್ದು ವಿಶೇಷವಾಗಿತ್ತು.ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನದಲ್ಲಿ ಸಿ.ಟಿ. ರವಿ ಸೇರಿದಂತೆ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು. ಶನಿವಾರ ನಡೆದ ದತ್ತಜಯಂತಿಯ ಪೂರ್ಣಾಹುತಿ ಕಾರ್ಯಕ್ರಮ ಸೇರಿದಂತೆ ಹೋಮ ಹವನಗಳಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿದಂತೆ ಇತರೆ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಗಮನ ಸೆಳೆದರು.

ಶ್ರೀ ದತ್ತಾತ್ರೇಯ ಹೋಮ:ದತ್ತಜಯಂತಿ ಅಂಗವಾಗಿ ದತ್ತಪೀಠದ ತುಳಸಿಕಟ್ಟೆಯ ಬಳಿ ಶ್ರೀದತ್ತಾತ್ರೇಯ ಮಹಾಮಂತ್ರ ಯಾಗ, ಶ್ರೀ ದತ್ತತಾರಕ ಹೋಮ, ಶ್ರೀ ಆದಿವಾಸ ಹೋಮ, ಶ್ರೀರುದ್ರಹೋಮ, ಕಲಶಾಭಿಷೇಕ, ಮಹಾಪೂಜೆ, ತಂತ್ರಿಗಳಿಂದ ಆಶೀರ್ವಚನ, ಬ್ರಹ್ಮಭೋಜನ ಸೇವೆ ಸಾಂಗವಾಗಿ ನೆರವೇರಿದವು. ಕಮ್ಮರಡಿಯ ಪ್ರದೀಪ್ ಭಟ್, ಅರ್ಚಕರಾದ ಅರುಣ್ ಭಟ್, ಮಧು ಭಟ್, ಮಹೇಶ್, ಶ್ರೀಕಾಂತ್ ನೇತೃತ್ವದಲ್ಲಿ ಹೋಮ ಹವನಗಳು ಜರುಗಿದವು.ಹೋಮ ಹವನಗಳಲ್ಲಿ ಕಡೂರು ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಶ್ರೀ, ಸರ್ವಧರ್ಮ ಪೀಠದ ಜಯಬಸವಾನಂದ ಶ್ರೀ, ಬೀರೂರು ರಂಭಾಪುರಿ ಶಾಖಾಮಠದ ರುದ್ರಮುನಿ ಶ್ರೀ, ಹುಣಸಘಟ್ಟದ ಹಾಲಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಶ್ರೀ ಭಾಗಿಯಾಗಿದ್ದರು.ಇವರೊಂದಿಗೆ ದತ್ತಪೀಠ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹೇಮಂತ್, ಸದಸ್ಯರಾದ ಬಾಷ, ಸುಮಂತ್, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್‌ ಪೈ, ಕಾರ್ಯದರ್ಶಿ ರಂಗನಾಥ, ಸಹ ಕಾರ್ಯದರ್ಶಿ ಶ್ಯಾಮ್ ವಿ.ಗೌಡ, ಉಪಾಧ್ಯಕ್ಷ ಯೋಗೀಶ್‌ ರಾಜ್ ಅರಸ್, ಹಾಸನ ವಿಭಾಗದ ಅಧ್ಯಕ್ಷ ಆರ್.ಡಿ.ಮಹೇಂದ್ರ, ಬಜರಂಗದಳದ ವಿಭಾಗೀಯ ಸಂಚಾಲಕ ಸಕಲೇಶಪುರದ ರಘು, ಸೂರ್ಯನಾರಾಯಣ, ಜಿಲ್ಲಾ ಸಂಯೋಜಕ ಶಿವಕುಮಾರ್, ಹೆರೂರು ಶಶಾಂಕ್ ಸಹ ಹೋಮ ಹವನದಲ್ಲಿ ಭಾಗಿಯಾಗಿದ್ದರು.

ಸಿಸಿ ಕ್ಯಾಮರಾ ಕಣ್ಗಾವಲುದತ್ತಪೀಠಕ್ಕೆ ಮಾಲಾಧಾರಿಗಳು ಬಂದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದತ್ತಪೀಠದ ಎಲ್ಲೆಡೆಯೂ ಸಿಸಿ ಕ್ಯಾಮರಾ ಕಣ್ಗಾವಲಿಡಲಾಗಿತ್ತು. ಜೊತೆಗೆ ಡ್ರೋಣ್ ಕ್ಯಾಮರಾಗಳನ್ನು ಬಳಸಿ ವೀಡಿಯೋ ಚಿತ್ರೀಕರಣ ಮಾಡಲಾಯಿತು. ಇನ್ನು ಸಿಸಿ ಕ್ಯಾಮರಾ ದೃಶ್ಯವಳಿಗಳನ್ನು ದತ್ತಪೀಠದ ಆವರಣದಲ್ಲೇ ಇರುವ ಮುಜರಾಯಿ ಇಲಾಖೆ ಕಚೇರಿಯಲ್ಲಿ ತೆರೆಯಲಾಗಿದ್ದ ಸಿಸಿ ಕ್ಯಾಮರಾ ಮಾನಿಟರಿಂಗ್ ಕೊಠಡಿಯಲ್ಲಿ ಅಧಿಕಾರಿಗಳ ತಂಡ ನಿರಂತರವಾಗಿ ವೀಕ್ಷಿಸುತ್ತಲೇ ಇತ್ತು. ದತ್ತಜಯಂತಿ ಹಿನ್ನಲೆಯಲ್ಲಿ ದತ್ತಪೀಠವೂ ಸೇರಿದಂತೆ ಜಿಲ್ಲೆಯಾದ್ಯಂತ ಸುಮಾರು 4 ಸಾವಿರ ಮಂದಿ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿತ್ತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ