ಕನ್ನಡಪ್ರಭ ವಾರ್ತೆ ಹನೂರು
ಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆ ತಾಲೂಕಿನ ಗಂಗನ ದೊಡ್ಡಿ ಗ್ರಾಮದಲ್ಲಿ ಗುರುವಾರ ರಾತ್ರಿ ಜರುಗಿದೆ.ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಬಫರ್ ಜೋನ್ ವಲಯದ ಗಂಗನ ದೊಡ್ಡಿ ಗ್ರಾಮದ ರೈತ ತಂಗವೇಲು ಬಿನ್ ಷಣ್ಮುಗಂ ಅವರ ಜಮೀನಿನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಮೇಕೆಯನ್ನು ಗುರುವಾರ ಮಧ್ಯರಾತ್ರಿ 2 ರ ಸಮಯದಲ್ಲಿ ಚಿರತೆ ಅರಣ್ಯ ಪ್ರದೇಶದಿಂದ ಬಂದು ಮೇಕೆಯನ್ನು ತಿಂದಿರುವ ಘಟನೆ ಜರುಗಿದೆ. ಇದನ್ನು ಪ್ರತ್ಯಕ್ಷವಾಗಿ ನೋಡಿದ ತಂಗವೇಲು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬೋನಿಗೆ ಬೀಳದ ಚಿರತೆ:
ಕಳೆದ ಹಲವಾರು ದಿನಗಳಿಂದ ನಾಗಣ್ಣ ನಗರ, ಬಸಪ್ಪನ ದೊಡ್ಡಿ, ಗಂಗನ ದೊಡ್ಡಿ ಸುತ್ತಮುತ್ತಲಿನ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಸಾಕುಪ್ರಾಣಿಗಳನ್ನು ಮತ್ತು ಸಾಕು ನಾಯಿಗಳನ್ನು ತಿಂದಿರುವ ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಕಳೆದ ಒಂದು ವಾರದ ಹಿಂದೆ ಗಂಗನ ದೊಡ್ಡಿ ಗ್ರಾಮದ ಜಮೀನಿನಲ್ಲಿ ಚಿರತೆ ಸರೆ ಹಿಡಿಯಲು ಬೋನ್ ಇಡಲಾಗಿದೆ. ಆದರೆ ಚಿರತೆ ಮತ್ತೊಂದೆಡೆ ರೈತನ ಜಮೀನಿನಲ್ಲಿ ಮೇಕೆ ಬಲಿ ತೆಗೆದುಕೊಂಡಿದೆ.ಹೆಚ್ಚಿದ ಆತಂಕ: ಕಳೆದ ಹಲವಾರು ದಿನಗಳಿಂದ ಈ ಭಾಗದಲ್ಲಿ ಚಿರತೆ ನಿರಂತರವಾಗಿ ತೋಟದ ಮನೆಗಳ ಮೇಲೆ ದಾಳಿ ನಡೆಸಿ ಸಾಕು ಪ್ರಾಣಿಗಳನ್ನು ತಿಂದು ಪರಾರಿಯಾಗಿತ್ತಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಹಾಗೂ ತೋಟದ ಜಮೀನುಗಳಲ್ಲಿ ವಾಸಿಸುವ ರೈತರು ರಾತ್ರಿ ವೇಳೆ ಹೊರಬರಲು ಜಮೀನಿನ ಕಾವಲು ಕಾಯಲು ಹಿಂದೇಟು ಹಾಕುವಂತಾಗಿದೆ. ಇದರಿಂದಾಗಿ ಉಪಟಳ ನೀಡುತ್ತಿರುವ ಚಿರತೆಯನ್ನು ಅರಣ್ಯಾಧಿಕಾರಿಗಳು ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ಚಿರತೆಯನ್ನು ಸೆರೆಹಿಡಿದು ಬೇರೆ ಬಿಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ವಲಯ ಅರಣ್ಯಾಧಿಕಾರಿಗಳು ಹೆಚ್ಚುವರಿ ಸಿಬ್ಬಂದಿ ನೇಮಿಸಿ ರೈತರ ನಿದ್ದೆಗೆಡಿಸಿರುವ ಚಿರತೆ ಸೆರೆಹಿಡಿಯಬೇಕು. ರಾತ್ರಿ ವೇಳೆ ತೋಟದ ಮನೆಗಳಲ್ಲಿ ವಾಸಿಸುವ ರೈತರ ಮೇಲೆ ದಾಳಿ ಮಾಡಿ ಜೀವ ಹಾನಿ ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.-ಅಮ್ಜದ್ ಖಾನ್, ಕರ್ನಾಟಕ ರಾಜ್ಯ ರೈತ ಸಂಘ ಹನೂರು ಘಟಕ ಅರಣ್ಯದಂಚಿನ ತೋಟದ ಮನೆಗಳಲ್ಲಿ ವಾಸಿಸುವ ರೈತರು ತಮ್ಮ ಜಾನುವಾರು ಮತ್ತು ಸಾಕು ಪ್ರಾಣಿಗಳನ್ನು ರಾತ್ರಿ ವೇಳೆ ಬಯಲು ಪ್ರದೇಶದಲ್ಲಿ ಕಟ್ಟಿಹಾಕಿ ಮನೆಗಳಿಗೆ ಹೋಗುತ್ತಾರೆ. ಹೀಗಾಗಿ ಸುರಕ್ಷಿತ ಸ್ಥಳಗಳಲ್ಲಿ ಸಾಕುಪ್ರಾಣಿಗಳನ್ನು ಕಟ್ಟಿ ಹಾಕಬೇಕು. ತೋಟದ ಮನೆಗಳಲ್ಲಿರುವ ನಿವಾಸಿಗಳು ಸುರಕ್ಷಿತವಾಗಿರಬೇಕು. ಚಿರತೆ ದಾಳಿ ಆಗಿರುವ ಬಗ್ಗೆ ಮಾಹಿತಿ ಬಂದಿದೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಪ್ರವೀಣ್ , ವಲಯ ಅರಣ್ಯ ಅಧಿಕಾರಿ