ಬೆಲೆ ಏರಿಕೆ ರಾಜ್ಯ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪ

KannadaprabhaNewsNetwork |  
Published : Sep 16, 2024, 02:01 AM ISTUpdated : Sep 16, 2024, 07:41 AM IST
Jagadeesh Shettar

ಸಾರಾಂಶ

ಬೆಲೆ ಏರಿಕೆ ರಾಜ್ಯ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಖರ್ಚು ಮತ್ತು ಆರ್ಥಿಕತೆಯ ಹದಗೆಡುತ್ತಿರುವ ಸ್ಥಿತಿಯನ್ನು ಅವರು ದೂಷಿಸಿದರು.

ಹುಬ್ಬಳ್ಳಿ: ಹಾಲು, ಕುಡಿಯುವ ನೀರು, ವಿದ್ಯುತ್ ಹೀಗೆ ಒಂದಲ್ಲ ಒಂದರ ಬೆಲೆ ಏರಿಕೆ ಮಾಡುತ್ತಿರುವುದು ರಾಜ್ಯ ಸರ್ಕಾರ ದಿವಾಳಿಯಾಗುತ್ತಿರುವುದಕ್ಕೆ ಉತ್ತಮ ಉದಾಹರಣೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ₹50-60 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಇದರಿಂದ ಆಡಳಿತ ನಡೆಸುವುದು ಕಷ್ಟವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಒಂದಲ್ಲ ಒಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಸರಿದೂಗಿಸಲು ಪ್ರಯತ್ನಿಸುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಪ್ರವೃತ್ತಿಯಾಗಿ ಹೋಗಿದೆ ಎಂದರು.

ಟೀಕೆ ಸರಿಯಲ್ಲ

ಪ್ರಧಾನಿ ನರೇಂದ್ರ ಮೋದಿ, ಮುಖ್ಯ ನ್ಯಾಯಮೂರ್ತಿ ಅವರ ಮನೆಗೆ ಭೇಟಿ ನೀಡಿರುವುದಕ್ಕೆ ಅಪಾರ್ಥ ಕಲ್ಪಿಸಿ ಕಾಂಗ್ರೆಸ್ ಟೀಕೆ ಮಾಡಿರುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಎಷ್ಟು ಕೆಳ ಹಂತಕ್ಕೆ ಹೋಗಿದೆ ಎಂಬುದನ್ನು ಸೂಚಿಸುತ್ತದೆ. ಸಾಂವಿಧಾನಿಕ ಹುದ್ದೆಯಲ್ಲಿ ಇರುವವರ ವೈಯಕ್ತಿಕ ಸಂಬಂಧಗಳು, ಪರಸ್ಪರ ಗೌರವ ಕೊಡುವುದರ ಬಗ್ಗೆ ಟೀಕೆ, ಟಿಪ್ಪಣಿ ಮಾಡಬಾರದು. ನಾನು ಸಹ ಎಷ್ಟೋ ನ್ಯಾಯಾಧೀಶರ ಮನೆಯ ಮದುವೆ, ಇನ್ನಿತರ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ನಮ್ಮ ಕುಟುಂಬದ ಕಾರ್ಯಕ್ರಮಗಳಿಗೆ ನ್ಯಾಯಾಂಗ ಇಲಾಖೆಯವರು ಬಂದಿದ್ದಾರೆ ಎಂದರು.

ದಂಗೆ ಏಳಲಿದ್ದಾರೆ

ರಾಜ್ಯದಲ್ಲಿ ಕೋಮು ಗಲಭೆಯಂಥ ಘಟನೆಗಳು ಹೆಚ್ಚುತ್ತಿವೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣ ನೀತಿಯೇ ಮೂಲ ಕಾರಣ. ನಾಗಮಂಗಲ ಘಟನೆಯಲ್ಲಿ ಸಂತ್ರಸ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ರೀತಿ ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ಕ್ರಮ ಕೈಗೊಳ್ಳುತ್ತ ಹೋದರೆ ರಾಜ್ಯ ಸರ್ಕಾರದ ವಿರುದ್ಧ ಜನ ದಂಗೆ ಏಳಲಿದ್ದಾರೆ ಎಂದರು.

ಸಮಗ್ರ ತನಿಖೆಯಾಗಲಿ

ಶಾಸಕ ಮುನಿರತ್ನ ಬಂಧನ ಪ್ರಕರಣದಲ್ಲಿ ಸಮಗ್ರ ತನಿಖೆಯಾಗಬೇಕು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಬಿಟ್ಟು ಹೊರಗೆ ಬಂದು ಬಿಜೆಪಿ ಪರವಾಗಿ ಕೆಲಸ ಮಾಡಿದಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಮುನಿರತ್ನ ಅವರೇ ಹೇಳಿದ್ದಾರೆ. ಸಂಭಾಷಣೆಯ ವಿಡಿಯೋ ತಿರುಚಲಾಗಿದೆ ಎಂದೂ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

PREV