ಉತ್ತಮ ಮುಂಗಾರು; ಬಿತ್ತನೆ ಬೀಜಕ್ಕೆ ಬೇಡಿಕೆ

KannadaprabhaNewsNetwork |  
Published : Jun 12, 2024, 12:33 AM IST
10ಐಎನ್‌ಡಿ1,ಮುಂಗಾರು ಬೀಜ ಖರೀದಿಗೆ ಇಂಡಿ ರೈತ ಸಂಪರ್ಕ ಕೇಂದ್ರದ ಮುಂದೆ ಮುಗಿಬಿದ್ದ ರೈತರು. | Kannada Prabha

ಸಾರಾಂಶ

ಕಳೆದ ಸಾರಿ ಮಳೆ ಕೈಕೊಟ್ಟಿದ್ದರಿಂದ ಅನ್ನದಾತ ಕಂಗಾಲಾಗಿದ್ದ. ಆದರೆ, ಈ ಬಾರಿ ಮಳೆ ಭರ್ಜರಿ ಆರಂಭ ಕಂಡಿದೆ. ಹೀಗಾಗಿ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜ ಪಡೆದುಕೊಳ್ಳಲು ಮುಗಿ ಬೀಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಕಳೆದ ಸಾರಿ ಮಳೆ ಕೈಕೊಟ್ಟಿದ್ದರಿಂದ ಅನ್ನದಾತ ಕಂಗಾಲಾಗಿದ್ದ. ಆದರೆ, ಈ ಬಾರಿ ಮಳೆ ಭರ್ಜರಿ ಆರಂಭ ಕಂಡಿದೆ. ಹೀಗಾಗಿ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜ ಪಡೆದುಕೊಳ್ಳಲು ಮುಗಿ ಬೀಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಈ ಬಾರಿ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿಗೆ 1.55 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೇ 14883 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಮುಂಗಾರು ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೃಗಶಿರ ಮಳೆ ಇದಕ್ಕೂ ಮುಂಚೆ ರೋಹಿಣಿ ಮಳೆ ಸುರಿದಿದ್ದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ರೋಹಿಣಿ ಅದರಲ್ಲೂ ಮೃಗಶಿರ ಮಳೆ ತಂಪೆರೆದಿದ್ದರಿಂದ ಅಂತರ್ಜಲಮಟ್ಟ ಸುಧಾರಿಸಿ ಕೊಳವೆ ಬಾವಿಗಳು, ಹಳ್ಳ, ಕೊಳ್ಳಗಳಲ್ಲಿ ನೀರಿನ ಭಾಗ್ಯ ಕಂಡು ರೈತರಲ್ಲಿ ಹರ್ಷ ಮೂಡಿದೆ. ಕಳೆದ ಎರಡ್ಮೂರು ವರ್ಷಗಳಿಂದ ಮಳೆ ಕಾಣದೆ ಭೀಕರ ಬರದ ಛಾಯೆ ತಾಲೂಕಿನಲ್ಲಿ ಆವರಿಸಿದ್ದು,ರೈತರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರೂ ಮಳೆ ಆಗಲಿಲ್ಲ.

ಹೀಗಾಗಿ ಅಂತರ್ಜಲಮಟ್ಟ ಸಂಪೂರ್ಣ ಕುಸಿದು, ಜನ,ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದ್ದು, ತೇವಾಂಶದ ಕೊರತೆಯಿಂದ ಅಲ್ಪಸ್ವಲ್ಪ ಬಂದ ಮಳೆಯ ಮೇಲೆ ಬಾರ ಹಾಕಿ ಬಿತ್ತನೆ ಮಾಡಿದ ರೈತರಿಗೆ ಹಾಕಿದ ಬೀಜದ ಗಂಟು ಸಹ ಬಾರದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದರು.ಪ್ರಸಕ್ತ ವರ್ಷ ಮುಂಗಾರು ಅಬ್ಬರಿಸಿ,ಬೊಬ್ಬರಿಸಿದ್ದರಿಂದ ಜಮೀನುಗಳೆಲ್ಲ ತೇವಾಂಶಗೊಂಡು ಬಿತ್ತನೆಗೆ ಅನುಕೂಲವಾಗಿದೆ.

ಎಷ್ಟು ಮಳೆಯಾಗಿದೆ?:

ಜೂ.7 ರಂದು ಸುರಿದ ಮೃಗಶಿರ ಮಳೆ ಇಂಡಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಸರಾಸರಿ 137 ಎಂಎಂ, ಬಳ್ಳೊಳ್ಳಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಸರಾಸರಿ 124 ಎಂಎಂ, ಚಡಚಣ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಸರಾಸರಿ 129 ಎಂಎಂ ಮಳೆಯಾಗಿದ್ದು, ಜನವರಿ 1 ರಿಂದ ಜೂ.10 ವರೆಗೆ ತಾಲೂಕಿನಾಧ್ಯಂತ 194 ಎಂಎಂ ಮಳೆಯಾಗಿದೆ.

ಬೀಜ ವಿತರಣೆ, ದಾಸ್ತಾನು:

ಕೃಷಿ ಇಲಾಖೆ ಅಧಿಕಾರಿಗಳು ಮುಂಗಾರು ಹಂಗಾಮಿಗೆ ಪೂರ್ವದಲ್ಲಿಯೇ ರೈತರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ತಾಲೂಕಿನ ಮುಂಗಾರು ಬಿತ್ತನೆಯ ಗುರಿಗೆ ಅನುಗುಣವಾಗಿ ವಿವಿಧ ಮುಂಗಾರು ಬೀಜಗಳನ್ನು ದಾಸ್ತಾನು ಮಾಡಿದ್ದಾರೆ. ಹೆಸರು 7.20 ಕ್ವಿಂಟಲ್‌, ಸಜ್ಜೆ 32.51 ಕ್ವಿಂಟಲ್‌, ಗೋವಿನಜೋಳ 454.32 ಕ್ವಿಂಟಲ್‌, ಸೂರ್ಯಕಾಂತಿ 21.09 ಕ್ವಿಂಟಲ್‌, ತೊಗರಿ 1700 ಕ್ವಿಂಟಲ್‌ ಸೇರಿದಂತೆ ಒಟ್ಟು 2215.12 ಕ್ವಿಂಟಲ್‌ ಬೀಜ ದಾಸ್ತಾನು ಮಾಡಲಾಗಿದೆ. ಈಗಾಗಲೇ ವಿತರಣೆ ಕಾರ್ಯ ಆರಂಭಿಸಲಾಗಿದೆ.

ಈಗಾಗಲೇ ಹೆಸರು ಬೀಜ 3.80 ಕ್ವಿಂಟಲ್‌, ಸಜ್ಜೆ 9.41 ಕ್ವಿಂಟಲ್‌, ಗೋವಿನಜೋಳ 158.59 ಕ್ವಿಂಟಲ್‌, ಸೂರ್ಯಕಾಂತಿ 3.50 ಕ್ವಿಂಟಲ್‌, ತೋಗರಿ 941.51 ಕ್ವಿಂಟಲ್‌ ಸೇರಿದಂತೆ ಒಟ್ಟು 1116.81 ಕ್ವಿಂಟಲ್‌ ಬೀಜ ವಿತರಣೆ ಮಾಡಲಾಗಿದ್ದು,ರೈತರಿಗೆ ಬೀಜ ವಿತರಣೆ ಮಾಡಲು ತೊಂದರೆ ಆಗದಂತೆ ನಾಲ್ಕೈದು ಕೌಂಟರ್‌ಗಳನ್ನು ಆರಂಭಿಸಿದ್ದಾರೆ.

---

ಬಾಕ್ಸ್‌....

ಎಲ್ಲೆಲ್ಲಿ ಇವೆ ರೈತ ಸಂಪರ್ಕ ಕೇಂದ್ರಗಳು:

ತಾಲೂಕಿನ ವಿವಿಧ ಗ್ರಾಮಗಳಿಂದ ತಾಲೂಕು ಕೇಂದ್ರ ಇಂಡಿಗೆ ಬಂದು ಬೀಜ ಖರೀದಿ ಮಾಡಿಕೊಂಡು ಹೋಗಲು ರೈತರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಸಿಬ್ಬಂದಿ ಕೊರತೆಯ ನಡುವೆಯೂ ಕೃಷಿ ಅಧಿಕಾರಿಗಳು ಇಂಡಿ, ನಾದ, ತಾಂಬಾ, ಬಳ್ಳೊಳ್ಳಿ, ಅಥರ್ಗಾ, ಲಚ್ಯಾಣ, ಹೊರ್ತಿ ಚಡಚಣಗಳಲ್ಲಿ ಬೀಜ ವಿತರಣೆ ಕೇಂದ್ರಗಳನ್ನು ಆರಂಭಿಸಿದ್ದಾರೆ.

---

ಕೋಟ್‌

ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜಗಳ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಮುಂಗಾರು ಹಂಗಾಮು ಆರಂಭಕ್ಕೂ ಮುಂಚೆಯೇ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ರೈತರಿಗೆ ತಾಲೂಕು ಕೇಂದ್ರಕ್ಕೆ ಬಂದು ಬೀಜ ಖರೀದಿ ಮಾಡಲು ತೊಂದರೆಯಾಗಬಾರದು ಎಂದು ನಾದ, ತಾಂಬಾ, ಅಥರ್ಗಾ, ಲಚ್ಯಾಣ, ಹೊರ್ತಿ ಗ್ರಾಮಗಳಲ್ಲಿ ಹೆಚ್ಚುವರಿ ಬೀಜ ವಿತರಣೆ ಕೇಂದ್ರಗಳನ್ನು ತೆರೆಯಲಾಗಿದೆ. ರಸಗೊಬ್ಬರಗಳ ಅಭಾವ ಸೃಷ್ಟಿ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.

-ಮಹಾದೇವಪ್ಪ ಏವೂರ, ಸಹಾಯಕ ಕೃಷಿ ನಿರ್ದೇಶಕರು, ಇಂಡಿ.

---

ಕೋಟ್‌ 2)

ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ಕೊರತೆ ಇರುವುದಿಲ್ಲ. ಮುಂಗಾರು ಹಂಗಾಮಿಗೆ ಬೇಕಾದಷ್ಟು ಪ್ರಮಾಣದಲ್ಲಿ ಬೀಜ ದಾಸ್ತಾನು ಮಾಡಲಾಗಿದೆ. ರೈತರಿಂದ ಇನ್ನೂ ಬೀಜಗಳ ಹೆಚ್ಚಿನ ಬೇಡಿಕೆ ಬಂದರೆ ಬೀಜ ತರಿಸಿಕೊಳ್ಳಲಾಗುತ್ತದೆ. ಬೀಜ ವಿತರಣೆಗೆ ತೊಂದರೆಯಾಗಬಾರದು ಎಂದು ಇಂಡಿ ರೈತ ಸಂಪರ್ಕ ಕೇಂದ್ರದಲ್ಲಿ ನಾಲ್ಕೈದು ಕೌಂಟರ್‌ಗಳನ್ನು ತೆರೆಯಲಾಗಿದೆ. ಬೀಜ ವಿತರಣೆಯಲ್ಲಿ ರೈತರಿಗೆ ಯಾವುದೇ ತೊಂದರೆ ಇಲ್ಲ.

-ಮಹಾಂತೇಶ ಶೆಟ್ಟೆಣ್ಣನವರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ,ಇಂಡಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ