ಕನ್ನಡಪ್ರಭ ವಾರ್ತೆ, ಚಾಮರಾಜನಗರಪ್ರಶಿಕ್ಷಣಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆಯಾಗಿದ್ದು, ಈ ಮೂಲಕ ಕಲಿಕೆಯಲ್ಲಿ ಅತ್ಮವಿಶ್ವಾಸವನ್ನು ಮೂಡಿಸಿಕೊಂಡು ವಿದ್ಯಾರ್ಥಿಗಳು ಮೆಚ್ಚುವಂತಹ ಶಿಕ್ಷಕರಾಗಬಹುದು ಎಂದು ಚಲನಚಿತ್ರ, ಹಾಸ್ಯ ಕಲಾವಿದ ಉಮ್ಮತ್ತೂರು ಬಸವರಾಜು ತಿಳಿಸಿದರು.
ನಗರದ ಜೆಎಸ್‌ಎಸ್ ಕಾಲೇಜಿನ ಸಭಾಂಗಣದಲ್ಲಿ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ನಡೆದ ೨೦೨೩-೨೪ನೇ ಸಾಲಿನ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಪ್ರತಿಭಾ ಶೋಧ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಶಿಕ್ಷಣಾರ್ಥಿಗಳಾದ ತಾವು ಪದವಿ ಪೂರೈಸಿ, ೨ ವರ್ಷಗಳ ಬಿ.ಇಡಿ ಪದವಿಗೆ ಸೇರ್ಪಡೆಯಾಗಿದ್ದು, ಇನ್ನೊಂದು ತಂಡ ಎರಡು ವರ್ಷಗಳ ಪದವಿ ಪೂರ್ಣಗೊಳಿಸಿ ಶಿಕ್ಷಕ ವೃತ್ತಿಗೆ ಸೇರ್ಪಡೆಯಾಗುತ್ತಿದ್ದಾರೆ. ಎರಡು ಹಂತಗಳ ಪ್ರಶಿಕ್ಷಣಾರ್ಥಿಗಳಿದ್ದು, ನಿಮ್ಮೆಲ್ಲರ ಪ್ರತಿಭಾ ಶೋಧ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದೆ. ಗುಣಮಟ್ಟದ ಬೋಧನೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಸ್ಯ, ನೃತ್ಯ, ಕೌಶಲ್ಯಾಭಿವೃದ್ದಿ, ಚಿತ್ರಕಲೆ, ಭಾಷಣ, ಸೇರಿದಂತೆ ವಿವಿಧ ಕಲೆಗಳ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆಯಲು ಸಾಧ್ಯವಿದೆ ಎಂದರು.ನಿವೆಲ್ಲರು ಬಹಳ ಪ್ರತಿಭಾವಂತರಿದ್ದೀರಿ. ಒಬ್ಬೊಬ್ಬರು ಒಂದು ಕಲೆಯಲ್ಲಿ ತಮ್ಮದೇ ಆದ ಪ್ರತಿಭೆಯನ್ನು ಹೊಂದಿದ್ದಾರೆ. ನಿಮ್ಮ ಆಶಯ ಈಡೇರಲು, ಗುರು ಹಿರಿಯರನ್ನು ಗೌರವಿಸುವ ಜೊತೆಗೆ ಭಾವಿ ಸತ್ಪ್ರಜೆಗಳನ್ನು ರೂಪಿಸುವ ಶಕ್ತಿ ಹೊಂದಿರುವ ತಾವೆಲ್ಲರು ವೃತ್ತಿಯಲ್ಲಿ ಯಶಸ್ಸು ಹೊಂದಿ ಎಂದು ಬಸವರಾಜು ಶುಭ ಕೋರಿದರು.
ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಕೆ.ಸಿ. ಡಾ. ಬಸವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಜೊತೆಗೆ ಪ್ರಶಿಕ್ಷಣ ತರಬೇತಿಯನ್ನು ನೀಡಿ, ಶಿಕ್ಷಕರನ್ನಾಗಿ ರೂಪಿಸಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ. ಈಗಾಗಲೇ ಪ್ರಥಮ ಪ್ರಶಿಕ್ಷಣಾರ್ಥಿಗಳು ಹಾಗೂ ಎರಡು ವರ್ಷಗಳ ಪೂರ್ಣಗೊಳಿಸಿರುವ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಭಾ ಶೋಧ ಉತ್ತಮ ವೇದಿಕೆಯಾಗಿದೆ. ತಮ್ಮಲಿರುವ ಪ್ರತಿಭೆಯನ್ನು ಗುರುತಿಸಿ, ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.ಕಾರ್ಯಕ್ರಮದಲ್ಲಿ ದ್ವೀತಿಯ ವರ್ಷದ ಪ್ರಶಿಕ್ಷಣಾರ್ಥಿಗಳು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ಮಾಡುವ ಮೂಲಕ ಶಿಕ್ಷಕರು ಹಾಗೂ ವಿದ್ಯಾಥಿಗಳ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕೆ.ಎಂ. ಯೋಗೇಶ್, ಎಸ್.ಎನ್. ರಾಜು, ಕೆ.ಎಸ್. ಸಿದ್ದರಾಜು, ಎನ್. ಮಲ್ಲೇಶ್, ಕೆ.ಕೆ. ಶಿವರಾಜ್ ಅರಸು, ಎಂ.ಬಿ. ಶ್ರೀಧರ್, ಗೀತಾ, ಶಿವಕುಮಾರ್ ಹಾಗೂ ವಿದ್ಯಾರ್ಥಿಗಳು ಇದ್ದರು.