ಎಸ್ಸೆಸ್ಸೆಲ್ಸಿ ಪರೀಕ್ಷೆ ಸಾಧನೆಗೆ ಉತ್ತಮ ಘಟ್ಟ

KannadaprabhaNewsNetwork | Published : Dec 31, 2024 1:00 AM

ಸಾರಾಂಶ

ವಿದ್ಯಾರ್ಥಿಗಳು ಸರಳವಾಗಿ ಪರೀಕ್ಷೆ ಎದುರಿಸಲು ಇಂತಹ ಕಾರ್ಯಾಗಾರ ಅವಶ್ಯಕ

ಲಕ್ಷ್ಮೇಶ್ವರ: ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿ ಜೀವನವು ಹೂವಿನ ಹಾಸಿಗೆಯಲ್ಲ, ಭವಿಷ್ಯ ರೂಪಿಸುವ ಮಹತ್ವದ ಹಂತವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಆಯೋಜಿಸಿರುವ ಇಂತಹ ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಸೋಮವಾರ ಪಟ್ಟಣದ ಬಿ.ಸಿ.ಎನ್ ವಿಜನ್ ಪಿಯು ಹಾಗೂ ಪದವಿ ಕಾಲೇಜಿನಲ್ಲಿ ಬಿ.ಸಿ. ಎನ್ ವಿದ್ಯಾ ಸಂಸ್ಥೆಯಿಂದ ವಿಜನ್ 2025 ಎಸ್ಸೆಸ್ಸೆಲ್ಸಿವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸರಳವಾಗಿ ಪರೀಕ್ಷೆ ಎದುರಿಸಲು ಇಂತಹ ಕಾರ್ಯಾಗಾರ ಅವಶ್ಯಕ, ಪರಿಣಿತ ಶಿಕ್ಷಕರನ್ನು ಕರೆಸಿ ಪರೀಕ್ಷೆಯನ್ನು ಸರಳವಾಗಿ ಎದುರಿಸುವ ಪರಿ ಹಾಗೂ ಹೆಚ್ಚು ಅಂಕಗಳಿಸಲು ಮಾಡಬೇಕಾದ ಕಾರ್ಯ ತಂತ್ರಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನಿಯ. ಜೀವನದ ಉತ್ತಮ ಬೆಳವಣಿಗೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಹುಮುಖ್ಯ. ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸಮಯ ಹಾಳು ಮಾಡದೆ ಪರೀಕ್ಷೆ ವೇಳೆ ಮೊಬೈಲ್‌ನಿಂದ ದೂರ ಇರಬೇಕು ಎಂದು ಕರೆ ನೀಡಿದ ಅವರು, ಪರೀಕ್ಷೆ ವೇಳೆ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಗಮನ ಇಡಿ ವಿದ್ಯಾರ್ಥಿಗಳ ಪಾಲಕರು ಮಕ್ಕಳ ಸರಿಯಾಗಿ ಶಿಕ್ಷಣ ಕೊಡಿಸಲು ದೂರದ ಊರಿಗೆ ದುಡಿಯಲಿಕ್ಕೆ ಹೋಗಿರುತ್ತಾರೆ. ತಂದೆ ತಾಯಿಗಳ ಆಸೆ ವಿದ್ಯಾರ್ಥಿಗಳು ಈಡೇರಿಸಬೇಕು, ಹೆಚ್ಚು ಅಂಕ ಗಳಿಸುವ ಮೂಲಕ ತಾಲೂಕಿನ ಕೀರ್ತಿ ತನ್ನಿ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಣಕಿ ನಾಯಕ ಮಾತನಾಡಿ, ಬಿಸಿಎನ್ ಸಂಸ್ಥೆ ಖಾಸಗಿ ಶಿಕ್ಷಣ ಸಂಸ್ಥೆ ಆದರು ಸರ್ಕಾರಿ ಶಾಲೆಯ ಮಕ್ಕಳನ್ನು ಕರೆಸಿ ಕಾರ್ಯಾಗಾರ ಮಾಡುತ್ತಿರುವುದು ಶ್ಲಾಘನಿಯ, ತಾಲೂಕಿನಲ್ಲಿ ಬೆರಳಣಿಕೆಯಷ್ಟೇ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಉಳಿದಿದ್ದು, ಅಂತಹ ಮಕ್ಕಳಿಗೆ ವಿಶೇಷ ತರಬೇತಿ ನೀಡುವ ಮೂಲಕ ಅವರನ್ನು ಮೇಲಕ್ಕೆತ್ತುವ ಕಾರ್ಯ ಶಿಕ್ಷಕರು ಮಾಡಬೇಕು ಎಂದು ಹೇಳಿದರು.

ಈ ವೇಳೆ ನಂದಾ ಹಂಪಿಹೊಳಿ, ಲೋಹಿತ ನೆಲವಿಗಿ, ಮಂಜುನಾಥ ಬಂಡಿವಾಡ, ಈಶ್ವರ ಮೆಡ್ಲೇರಿ, ಸಿ.ಎಫ್. ಜೋಗಿನ. ಶೇಖರ ಚಿಕ್ಕಣ್ಣವರ, ಸಿದ್ದಲಿಂಗೇಶ ಹಲಸೂರ, ಎಂ.ಎಂ. ಹವಳದ, ಉಮೇಶ ಹುಚ್ಚಯ್ಯನಮಠ, ಎಲ್.ಎಸ್. ಅರಳಹಳ್ಳಿ ಇದ್ದರು.ಬಸವರಾಜ ಶೆಟ್ಟರ ನಿರೂಪಿಸಿದರು. ರಾಜಶೇಖರಸ್ವಾಮಿ ಸ್ವಾಗತಿಸಿದರು. ಮಂಜುನಾಥ ಬಂಡಿವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರೀಶ್ ಬಸರೆಡ್ಡಿ ವಂದಿಸಿದರು.

Share this article