ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಶಿಕ್ಷಕ ವೃತ್ತಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಉತ್ತಮ ಶಿಕ್ಷಕರಿಂದ ಸಾವಿರಾರು ಸಾಧಕರನ್ನು ಸೃಷ್ಟಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ ಹೇಳಿದರು.ಹೊನ್ನೇನಹಳ್ಳಿ ತಾಂಡ್ಯ ಶಾಲೆಯಲ್ಲಿ ನಿವೃತ್ತಿ ಹೊಂದಿದ ವಿ.ಸಿ.ನಾಗರಾಜಮೂರ್ತಿ, ದೈಹಿಕ ಶಿಕ್ಷಕ ರಂಗಸ್ವಾಮಿ, ಜಕ್ಕಸಂದ್ರಶಾಲೆ ಶಿಕ್ಷಕ ಕೃಷ್ಣಮೂರ್ತಿಯವರಿಗೆ ಅಭಿನಂದನೆ ಸಲ್ಲಿಸುವ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿಯನ್ನು ಪ್ರಾಮಾಣಿಕವಾಗಿ ನಡೆಸುವ ಶಿಕ್ಷಕ ಸಾಧಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾನೆ. ಒಬ್ಬ ಉತ್ತಮ ಶಿಕ್ಷಕ ವಿದ್ಯಾರ್ಥಿಗಳ ದೇವರಾಗಬಹುದು. ನಿವೃತ್ತಿ ಪಡೆಯುತ್ತಿರುವ ಶಿಕ್ಷಕರ ಸೇವೆ ಶ್ಲಾಘನೀಯವಾಗಿದೆ. ಅವರ ನಿವೃತ್ತಿ ಜೀವನ ಮತ್ತಷ್ಟು ಚೆನ್ನಾಗಿರಲಿ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರುದ್ರಾರಾಧ್ಯ ಮಾತನಾಡಿ, ಉತ್ತಮ ಪ್ರಜೆಗಳನ್ನು ರೂಪಿಸುವ ಶಿಕ್ಷಕರನ್ನು ಪ್ರತಿಯೊಬ್ಬರೂ ಗೌರವಿಸುತ್ತಾರೆ. ಸದಾ ಮಕ್ಕಳೊಂದಿಗೆ ಒಡನಾಟ ಮತ್ತು ಅವರ ಕಲಿಕೆಯಲ್ಲಿ ತಮ್ಮ ಜೀವಮಾನವನ್ನು ಕಳೆಯುವ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚು. ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ಅವರ ಬಾಳಿಗೆ ಬೆಳಕು ನೀಡುವಲ್ಲಿ ಶಿಕ್ಷಕರು ಶ್ರಮಿಸುತ್ತಾರೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ನಾಗರಾಜುಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳಿಗಷ್ಟೇ ಸೀಮಿತರಾಗದೇ ಜೀವನದ ಪಾಠಗಳನ್ನು ಕಲಿಯಬೇಕು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅವಕಾಶಗಳನ್ನು ಸದ್ಬಳಿಸಿಕೊಳ್ಳಬೇಕು. ಶಿಕ್ಷಕರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಈ ಭಾಗದ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವಾಸುದೇವಮೂರ್ತಿ, ಮುಖಂಡರಾದ ಪುಟ್ಟರುದ್ರ ಆರಾಧ್ಯ, ದೇವರಾಜು, ಸಿದ್ದಗಂಗಯ್ಯ, ರೇಣುಕಸ್ವಾಮಿ, ಹೊನರಾಜು, ಪ್ರಕಾಶ್, ಕೃಷ್ಣಮೂರ್ತಿ, ಮಲ್ಲಿಕಾರ್ಜುನ್, ಆರ್.ಜಿ ಬಸವರಾಜಪ್ಪ, ಯೋಗನಂದ್, ಚಂದ್ರಶೇಖರಯ್ಯ, ಎಚ್.ಆರ್ ಸತೀಶ್, ಗಂಗಪ್ಪಗೌಡ, ಪರಮೇಶ್ವರಯ್ಯ,ರಾಮಚಂದ್ರಪ್ಪ, ಶ್ರೀನಿವಾಸ್ ಮತ್ತಿತರರಿದ್ದರು.