)
ಉಡುಪಿಉಡುಪಿ ಶ್ರೀ ಕೃಷ್ಣಮಠದಲ್ಲಿ ಪರ್ಯಾಯ ಪೀಠಾಧೀಶ, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವದ ಶ್ರೀ ಕೃಷ್ಣ ಜನ್ಮಾಷ್ಟಮಿ ಎರಡು ದಿನಗಳ ಕಾಲ ವೈಭವದಿಂದ ನಡೆಯಿತು.
ಶುಕ್ರವಾರ ಕೃಷ್ಣಮಠದೊಳಗೆ ಕೃಷ್ಣನಿಗೆ ಅರ್ಘ್ಯಪ್ರದಾನ, ಚಕ್ಕುಲಿಉಂಡೆ ನೈವೇದ್ಯ, ಮಹಾಪೂಜಾದಿ ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯಬದ್ಧವಾಗಿ ನಡೆಯಿತು. ಶನಿವಾರ ಕೃಷ್ಣಮಠದ ಹೊರಗೆ, ಭಕ್ತಜನರಿಂದ ತುಂಬಿ ತುಳುಕುತ್ತಿದ್ದ ರಥಬೀದಿಯಲ್ಲಿ ಕೃಷ್ಣನ ಲೀಲಾ ಪ್ರದರ್ಶನ - ಮೊಸರು ಕುಡಿಕೆ ಉತ್ಸವಗಳು ವೈಭವದಿಂದ ನಡೆದವು.ಮಧ್ಯಾಹ್ನ 3.20ಕ್ಕೆ ಪರ್ಯಾಯ ಶ್ರೀಗಳು ಕೃಷ್ಣನ ಮಣ್ಣಿನ ಮೂರುತಿಯನ್ನು ಹೂವುಗಳಿಂದ ಅಲಂಕೃತ ಚಿನ್ನದ ರಥಕ್ಕೆ ಆರೋಹಣಗೊಳಿಸಿ, ಮಂಗಳಾರತಿ ಬೆಳಗಿದರು. ರಥಬೀದಿಯಲ್ಲಿ ರಥೋತ್ಸವ ನಡೆಯಿತು. ಮಠದ ಬಿರುದಾವಳಿಗಳು, ಕೊಂಬುಕಹಳೆ, ಮಂಗಳವಾದ್ಯ - ಚಂಡೆಗಳು ರಥೋತ್ಸವದ ಕಳೆಯನ್ನು ಹೆಚ್ಚಿಸಿದವು.
ಪರ್ಯಾಯ ಶ್ರೀ ವೇವವರ್ಧನ ತೀರ್ಥರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಮಠದ ದಿವಾಣರಾದ ವಿದ್ವಾನ್ ಉದಯಕುಮಾರ್ ಸರಳತ್ತಾಯರು, ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರ್ ರಥಬೀದಿಯಲ್ಲಿ ಭಕ್ತರ ನಡುವೆ ಹೆಜ್ಜೆ ಹಾಕಿದರು.ರಥವು ರಥಬೀದಿಯಲ್ಲಿರುವ ಎಲ್ಲಾ ಅಷ್ಟಮಠದ ಮುಂದೆ ನಿಂತು ಶ್ರೀ ಮಠಗಳಿಂದ ಪೂಜೆಯನ್ನು ಸ್ವೀಕರಿಸುತ್ತಾ ಸಾವಕಾಶವಾಗಿ ರಥಬೀದಿಯಲ್ಲಿ ಸಾಗಿ ಬಂತು. ರಥೋತ್ಸವದ ನಂತರ ಶ್ರೀಗಳು ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ಜಲಸ್ತಂಭನೆಗೊಳಿಸಿದರು.
ರಥಬೀದಿಯಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಪರ್ಯಾಯ ಶಿರೂರು ಶ್ರೀಗಳು ಕೃಷ್ಣನ ಪ್ರಸಾದ ವಿವಿಧ ಬಗೆಯ ಉಂಡೆ ಚಕ್ಕಲಿಗಳನ್ನು, ಹಣ್ಣುಗಳನ್ನು ಭಕ್ತಸಮೂಹದತ್ತ ತೂರಿದರು. ಭಕ್ತರು ಪ್ರಸಾದ ಪಡೆಯಲು ಪೈಪೋಟಿ ನಡೆಸುತ್ತಿದ್ದರು.