ಕನ್ನಡಪ್ರಭ ವಾರ್ತೆ ಬೀದರ್
ಇಲ್ಲಿನ ಕೆಇಬಿ ರಸ್ತೆಯಲ್ಲಿನ ರಾಯರ ಮಠದಲ್ಲಿ ಮೂರು ದಿನದ ಶ್ರೀ ರಾಘವೇಂದ್ರ ಮಹಾಸ್ವಾಮಿಗಳ 353ನೇ ಆರಾಧನಾ ಮಹೋತ್ಸವಕ್ಕೆ ಮಂಗಳವಾರ ಪೂರ್ವಾರಾಧನೆಗೆ ಶ್ರದ್ಧೆ, ಭಕ್ತಿಯೊಂದಿಗೆ ಚಾಲನೆ ದೊರೆಯಿತು.ಬೆಳಗ್ಗಿನ ಜಾವದಿಂದ ರಾತ್ರಿವರೆಗೆ ಮಂದಿರದಲ್ಲಿ ವಿಶೇಷ ಪೂಜೆ, ಅಭಿಷೇಕ, ಭಜನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸುಪ್ರಭಾತ, ಗೋಪೂಜೆ ಮತ್ತು ಧ್ವಜಾರೋಹಣ, ಅಷ್ಟೋತ್ತರ ನಂತರ ರಾಯರ ವೃಂದಾವನದ ಅಲಂಕಾರ ಕಣ್ಮನ ಸೆಳೆಯಿತು. ನಗರದಲ್ಲಿ ಅದ್ಧೂರಿಯಾಗಿ ಗುರುಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡರು.
ನಂತರ ರಾಯರ ವೃಂದಾವನದ ಅಲಂಕಾರ, ತುಳಸಿ ಮತ್ತು ಪುಷ್ಪಾರ್ಚನೆ, ನೈವಿದ್ಯ, ಹಸ್ತೋದಕ ಮಹಾ ಮಂಗಳಾರತಿ ಜರುಗಿತು.ಮಧ್ಯಾಹ್ನ 12.30ರಿಂದ ಆಚಾರ್ಯರ ಭೋಜನ, ಸಾರ್ವಜನಿಕ ಮಹಾಪ್ರಸಾದ, ಸಾಯಂಕಾಲ 6 ರಿಂದ 8.30ರ ವರೆಗೆ ಪಾಂಡುರಂಗ ಮಹಾರಾಜ (ಸಾಧುಘಾಟ) ಇವರಿಂದ ಚಕ್ರಿ ಭಜನೆ, ಸಂಗೀತ ಕಾರ್ಯಕ್ರಮ ಜರುಗಿತು. ರಾತ್ರಿ 8.30ರಿಂದ ಪಾಲಕಿ ಸೇವೆ ರಥೋತ್ಸವ ಮಹಾಮಂಗಳಾರತಿ ಸ್ವಸ್ತಿ ವಾಚನ ಜರುಗಿತು.
ಬುಧವಾರ ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ 5ಕ್ಕೆ ಸುಪ್ರಭಾತ, 6ಕ್ಕೆ ಅಷ್ಟೋತ್ತರ, 7.30ಕ್ಕೆ ಪಂಚಾಮೃತ ಅಭಿಷೇಕ, 9.30ಕ್ಕೆ ವೃಂದಾವನ ಅಲಂಕಾರ, 10.30ಕ್ಕೆ ತುಳಸಿ ಮತ್ತು ಪುಷ್ಪಾರ್ಚನೆ, 11ಕ್ಕೆ ಮಹಾ ರಥೋತ್ಸವ, ಮಧ್ಯಾಹ್ನ 1ಕ್ಕೆ ನೈವೇದ್ಯ, ಹಸ್ತೋದಕ, 3ಕ್ಕೆ ಸಾರ್ವಜನಿಕ ಮಹಾಪ್ರಸಾದ, ರಾತ್ರಿ 8.30ಕ್ಕೆ ಮಹಾ ಮಂಗಳಾರತಿ ಜರುಗಲಿದೆ.ಆ.22ರಂದು ಉತ್ತರಾರಾಧನೆ ಮೂಲಕ ಮಹೋತ್ಸವಕ್ಕೆ ತೆರೆ ಬೀಳಲಿದೆ. ಬೆಳಗ್ಗೆ 5ಕ್ಕೆ ಸುಪ್ರಭಾತ, 6ಕ್ಕೆ ಅಷ್ಟೋತ್ತರ, 7.30ಕ್ಕೆ ಪಂಚಾಮೃತ ಅಭಿಷೇಕ, 9ಕ್ಕೆ ವೃಂದಾವನ ಅಲಂಕಾರ, 10.30ಕ್ಕೆ ತುಳಸಿ ಮತ್ತು ಪುಷ್ಪಾರ್ಚನೆ, ಮಧ್ಯಾಹ್ನ 12ಕ್ಕೆ ನೈವೇದ್ಯ, ಹಸ್ತೋದಕ ಮಂಗಳಾರತಿ, 2.30ಕ್ಕೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ಭಜನೆ, ರಾತ್ರಿ 8ಕ್ಕೆ ರಥೋತ್ಸವ, 10ಕ್ಕೆ ಶಾಸ್ತ್ರೀಯ ಸಂಗೀತ ದರ್ಬಾರ್ ನಡೆಯಲಿದೆ.