ವಿಜೃಂಭಣೆಯಿಂದ ಜರುಗಿದ ಈದ್ ಮಿಲಾದ್ ಮೆರವಣಿಗೆ

KannadaprabhaNewsNetwork |  
Published : Sep 20, 2024, 01:36 AM IST
ಭದ್ರಾವತಿಯಲ್ಲಿ ಪ್ರವಾದಿ ಮಹಮ್ಮದ್(ಸ.ಸ)ರವರ ಜನ್ಮದಿನ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಪ್ರತಿ ವರ್ಷದಂತೆ ಈ ಬಾರಿ ಸಹ ಗುರುವಾರ ಮಧ್ಯಾಹ್ನ ನಗರದ ಅನ್ವರ್ ಕಾಲೋನಿ ವೃತ್ತದಿಂದ ತರೀಕೆರೆ ರಸ್ತೆ ಸಾದತ್ ದರ್ಗಾವರೆಗೆ ಬೃಹತ್ ಮೆರವಣಿಗೆ ನಡೆಸಿದರು.  | Kannada Prabha

ಸಾರಾಂಶ

ಭದ್ರಾವತಿಯಲ್ಲಿ ಪ್ರವಾದಿ ಮಹಮ್ಮದ್(ಸ.ಸ)ರವರ ಜನ್ಮದಿನ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಪ್ರತಿ ವರ್ಷದಂತೆ ನಗರದ ಅನ್ವರ್ ಕಾಲೋನಿ ವೃತ್ತದಿಂದ ತರೀಕೆರೆ ರಸ್ತೆ ಸಾದತ್ ದರ್ಗಾವರೆಗೆ ಬೃಹತ್ ಮೆರವಣಿಗೆ ನಡೆಸಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಪ್ರವಾದಿ ಮಹಮ್ಮದ್ (ಸ.ಸ)ರವರ ಜನ್ಮದಿನ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಪ್ರತಿ ವರ್ಷದಂತೆ ಈ ಬಾರಿ ಸಹ ಗುರುವಾರ ಮಧ್ಯಾಹ್ನ ನಗರದ ಅನ್ವರ್ ಕಾಲೋನಿ ವೃತ್ತದಿಂದ ತರೀಕೆರೆ ರಸ್ತೆ ಸಾದತ್ ದರ್ಗಾವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಇನ್ನು, ಸಂಭ್ರಮದ ಮಧ್ಯೆ ವಿವಾದಿತ ವಿವಾದಿತ ಫ್ಲೆಕ್ಸ್- ಟಿಪ್ಪು ಖಡ್ಗ ತೆರವುಗೊಳಿಸಿ ಮೆರವಣಿಗೆಗೆ ಅನುವು ಮಾಡಿಕೊಡಲಾಯಿತು.

ನಗರದ ವಿವಿಧೆಡೆಗಳಿಂದ ಮಸೀದಿಗಳ ಪ್ರಮುಖರೊಂದಿಗೆ ಆಯಾ ಭಾಗದ ಮುಸ್ಲಿಂ ಸಮುದಾಯದವರು ಕುಟುಂಬ ಸಮೇತರಾಗಿ ಪಾಲ್ಗೊಳ್ಳುವ ಮೂಲಕ ಬೆರಗುಗೊಳಿಸಿದರು. ಅಲಂಕೃತಗೊಂಡ ಮೆಕ್ಕಾ, ಮದೀನಾ ಮಾದರಿಗಳೊಂದಿಗೆ ಆಗಮಿಸುವ ಜೊತೆಗೆ ರಸ್ತೆಯುದ್ದಕ್ಕೂ ಯುವಕರು ಹಸಿರು ಧ್ವಜಗಳನ್ನು ಹಿಡಿದು ಕುಣಿದು ಸಂಭ್ರಮಿಸಿದರು.

ಅನ್ವರ್ ಕಾಲೋನಿ ವೃತ್ತದಿಂದ ಆರಂಭಗೊಂಡ ಮೆರವಣಿಗೆ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ತರೀಕೆರೆ ರಸ್ತೆ ಮಹಾತ್ಮಗಾಂಧಿ ವೃತ್ತ ಸಾದತ್ ದರ್ಗಾ ತಲುಪಿತು. ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ನೇತೃತ್ವದಲ್ಲಿ ನಗರದ ವಿವಿಧ ಮಸೀದಿಗಳ ಸಮಿತಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ರಕ್ತದಾನ; ಸೇವಾ ಕಾರ್ಯಗಳು:

ಉಸ್ಮಾನಿಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ರಕ್ತದಾನ ಆಯೋಜಿಸಲಾಗಿತ್ತು. ಅಲ್ಲದೆ ಬಡವರಿಗೆ ವಸ್ತ್ರಗಳನ್ನು ವಿತರಿಸಲಾಯಿತು. ಶಿವಮೊಗ್ಗ ಪುರಲೆ, ಸುಬ್ಬಯ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಸಹಯೋಗದೊಂದಿಗೆ ಹಮ್ಮಿ ಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ನೂರಾರು ಮಂದಿ ರಕ್ತದಾನ ಮಾಡಿದರು.

ನಗರಸಭೆ ಅಧ್ಯಕ್ಷ ಮಣಿ ಎಎನ್‌ಎಸ್, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಪೊಲೀಸ್ ನಗರ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್, ಸೂಡಾ ಸದಸ್ಯ ಎಚ್. ರವಿಕುಮಾರ್ ಸೇರಿದಂತೆ ರಕ್ತದಾನಿಗಳನ್ನು ಅಭಿನಂದಿಸಿದರು. ಸಮಿತಿ ಪ್ರಮುಖರಾದ ಜೆಬಿಟಿ ಬಾಬು, ಮಸ್ವೀರ್ ಬಾಷಾ, ಇಮ್ರಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್ :

ಮೆರವಣಿಗೆ ಅಂಗವಾಗಿ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಆಯಾಕಟ್ಟಿನ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಲ್ಲದೆ ಮೆರವಣಿಗೆಯಲ್ಲಿ ಈ ಬಾರಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಮೆರವಣಿಗೆ ಮಾರ್ಗದ ಪ್ರಮುಖ ರಸ್ತೆಗಳ ಸಂಚಾರ ಸ್ಥಗಿತಗೊಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅಲಂಕಾರ, ಸಡಗರ-ಸಂಭ್ರಮ:

ತಾಲೂಕಿನಲ್ಲಿ ಸುಮಾರು ೫೭ ಮಸೀದಿಗಳಿದ್ದು, ಈ ಪೈಕಿ ೧೯ ಮಸೀದಿಗಳು ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧೀನದಲ್ಲಿವೆ. ಹಬ್ಬದ ಹಿನ್ನೆಲೆಯಲ್ಲಿ ಮಸೀದಿಗಳ ಬಳಿ ಹಾಗು ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಈ ಬಾರಿ ಹೆಚ್ಚಿನ ಅಲಂಕಾರ ಕೈಗೊಳ್ಳಲಾಗಿತ್ತು. ಎಲ್ಲೆಡೆ ಹಸಿರುಮಯ ವಾಗಿರುವುದು ಕಂಡು ಬಂದಿತು.

ವಿವಾದಿತ ಫ್ಲೆಕ್ಸ್- ಟಿಪ್ಪು ಖಡ್ಗ ತೆರವು

ಹಬ್ಬದ ಹಿನ್ನೆಲೆಯಲ್ಲಿ ಹಳೇನಗರದ ಖಾಜಿ ಮೊಹಲ್ಲಾ ಜಂಡಾಕಟ್ಟೆ ವೃತ್ತದ ಬಳಿ ಹಾಗು ಇನ್ನೊಂದೆಡೆ ಥರ್ಮಕೂಲ್‌ನಿಂದ ತಯಾರಿಸಲಾದ ಖಡ್ಗಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಅಲ್ಲದೆ ಮುಸ್ಲಿಂ ಹೆಚ್ಚಾಗಿರುವ ಸೀಗೆಬಾಗಿ ಜಟ್‌ಪಟ್ ಸೇರಿದಂತೆ ಹಲವೆಡೆ ಟಿಪ್ಪು ಸುಲ್ತಾನ್, ಔರಂಗಜೇಬ್ ಫ್ಲೆಕ್ಸ್‌ಗಳನ್ನೂ ಅಳವಡಿಸಲಾಗಿತ್ತು. ಇದು ವಿವಾದವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಟಿಪ್ಪು ಖಡ್ಗ ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದೆ. ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಸ್ಪಷ್ಟನೆ ನೀಡಿದ್ದು, ಅಲ್ಲದೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ.

ಪ್ರಮುಖರಾದ ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಮುರ್ತುಜಾ ಖಾನ್, ಮಾಜಿ ಅಧ್ಯಕ್ಷರಾದ ಬಾಬಾ ಜಾನ್, ಫೀರ್ ಷರೀಫ್, ಅಮೀರ್ ಜಾನ್, ಜಹೀರ್ ಜಾನ್, ಅಬ್ದುಲ್ ಖದೀರ್, ಅಫ್ತಾಬ್ ಅಹಮದ್, ಅಯೂಬ್ ಖಾನ್, ಇಬ್ರಾಹಿಂ ಸಾಬ್, ರಹಮದ್‌ಉಲ್ಲಾ ಖಾನ್, ಮಸ್ತಾನ್ ಸೇರಿದಂತೆ ಇನ್ನಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ