3 ರಿಂದ ಅದ್ಧೂರಿ ಹಾರೋಹಳ್ಳಿ ದಸರಾ ಮಹೋತ್ಸವ

KannadaprabhaNewsNetwork | Published : Oct 2, 2024 1:10 AM

ಸಾರಾಂಶ

ಹಾರೋಹಳ್ಳಿ: ಗ್ರಾಮೀಣ ಪರಂಪರೆ ಮತ್ತು ಸಂಸ್ಕೃತಿಯನ್ನು ವಿಭಿನ್ನ ಸಾಂಸ್ಕೃತಿಕ ಕಲಾ ಮಾಧ್ಯಮದ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ವರ್ಣರಂಜಿತ ಮತ್ತು ವೈಭವಯುತ 8ನೇ ವರ್ಷದ ಹಾರೋಹಳ್ಳಿ ದಸರಾ ಮಹೋತ್ಸವವು ಅ.3 ರಿಂದ ಅ.11ರವರೆಗೆ 9 ದಿನಗಳ ಕಾಲ ನವದುರ್ಗಿ ಮಾತೆಯರ ಪ್ರತಿಷ್ಠಾಪನೆ ಮತ್ತು ಆರಾಧನೆ ನಡೆಯಲಿದ್ದು, ಅ.12ರಂದು ಪಟ್ಟಣದಲ್ಲಿ ಅದ್ಧೂರಿ ದಸರಾ ಮಹೋತ್ಸವ ನಡೆಯಲಿದೆ ಎಂದು ಚಾಮುಂಡೇಶ್ವರಿ ಅಮ್ಮನವರ ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಗೌತಮ್‌ ಗೌಡ ತಿಳಿಸಿದರು.

ಹಾರೋಹಳ್ಳಿ: ಗ್ರಾಮೀಣ ಪರಂಪರೆ ಮತ್ತು ಸಂಸ್ಕೃತಿಯನ್ನು ವಿಭಿನ್ನ ಸಾಂಸ್ಕೃತಿಕ ಕಲಾ ಮಾಧ್ಯಮದ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ವರ್ಣರಂಜಿತ ಮತ್ತು ವೈಭವಯುತ 8ನೇ ವರ್ಷದ ಹಾರೋಹಳ್ಳಿ ದಸರಾ ಮಹೋತ್ಸವವು ಅ.3 ರಿಂದ ಅ.11ರವರೆಗೆ 9 ದಿನಗಳ ಕಾಲ ನವದುರ್ಗಿ ಮಾತೆಯರ ಪ್ರತಿಷ್ಠಾಪನೆ ಮತ್ತು ಆರಾಧನೆ ನಡೆಯಲಿದ್ದು, ಅ.12ರಂದು ಪಟ್ಟಣದಲ್ಲಿ ಅದ್ಧೂರಿ ದಸರಾ ಮಹೋತ್ಸವ ನಡೆಯಲಿದೆ ಎಂದು ಚಾಮುಂಡೇಶ್ವರಿ ಅಮ್ಮನವರ ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಗೌತಮ್‌ ಗೌಡ ತಿಳಿಸಿದರು.

ಹಾರೋಹಳ್ಳಿ ಶ್ರೀ ಅರುಣಾಚಲೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವ ಉದ್ಘಾಟನೆಯನ್ನು ಬ್ರಹ್ಮಶ್ರೀ ಡಾ.ಆನಂದ್‌ ಗುರೂಜಿ ನೆರವೇರಿಸಲಿದ್ದಾರೆ. ಶನಿವಾರ ಸಂಜೆ 4.30ಕ್ಕೆ ಶ್ರೀ ಅರುಣಾಚಲೇಶ್ವರಸ್ವಾಮಿ ದೇವಾಲಯ ಮುಂಭಾಗದಿಂದ ಕಾರ್ಯಕ್ರಮ ಪ್ರಾರಂಭವಾಗಲಿದೆ. ಅದೇ ದಿನ ರಾತ್ರಿ 8.30ಕ್ಕೆ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ಬನ್ನಿಪೂಜೆ ಹಾಗೂ ರಾತ್ರಿ 9.30ರ ನಂತರ ಬಸ್ ನಿಲ್ದಾಣ ಸಮೀಪದ ಸರ್ಕಾರಿ ಶಾಲಾ ಮೈದಾನದಲ್ಲಿ ಅಮೋಘ ಮದ್ದುಗುಂಡು, ಬಾಣಬಿರುಸು ಪ್ರದರ್ಶನದಲ್ಲಿ ಅಂಧಕಾಸುರನ ವಧೆ ನಡೆಯಲಿದೆ ಎಂದರು.

ಈ ಬಾರಿ ವಿಜೃಂಭಣೆ ದಸರಾ: ಅರುಣಾಚಲೇಶ್ವರ ದೇವಾಲಯ ಧರ್ಮದರ್ಶಿ ಎಂ.ಮಲ್ಲಪ್ಪ ಮಾತನಾಡಿ, ಶನಿವಾರ ಅದ್ಧೂರಿ ದಸರಾ ಉತ್ಸವ ಮೆರವಣಿಗೆಯಲ್ಲಿ ಸರ್ವಾಲಂಕೃತ ಬೆಳ್ಳಿರಥದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪಿಸಿ ಹಾರೋಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಗುವುದು. ಹೂವಿನ ಪಲ್ಲಕ್ಕಿ, ಮಂಗಳವಾದ್ಯ, ಚಿಲಿಪಿಲಿ ಬೊಂಬೆ, ನಾಯಂಡಿ ಕರಗ ನೃತ್ಯ, ಡೊಳ್ಳು, ನೃತ್ಯ, ವೀರಗಾಸೆ, ಪೂಜಾ-ಪಟ ಕುಣಿತ, ಮೈಸೂರು ನಗಾರಿ ಇತ್ಯಾದಿ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಲಿದೆ. ಸಾರ್ವಜನಿಕರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ: ದೇಶಿ ರೋಮಾಂಚಕ ಕ್ರೀಡೆಯಾದ ಕುಸ್ತಿ ಪಂದ್ಯಾವಳಿಯನ್ನು ಅ.6 ರ ಬೆಳಗ್ಗೆ 9.30 ರಿಂದ ಮಹಿಳೆಯರು, ಮಕ್ಕಳು ಹಾಗೂ ಪುರುಷರ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಿದರು.

ಸುದ್ದಿಗೋಷ್ಠಿಯಲ್ಲಿದಸರಾ ಸಮಿತಿ ಸಂಚಾಲಕ ಎಚ್.ಎಸ್.ಮುರಳೀಧರ್, ಪ್ರಧಾನ ಕಾರ್ಯದರ್ಶಿ ಹೋಟೆಲ್ ಜಗದೀಶ್, ಚಕ್ರಪಾಣಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಮೊಹಮ್ಮದ್ ಯಾಕೂಬ್‌ಪಾಷ, ಸಹಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ಶ್ರೀಕಂಠಯ್ಯ, ಬನ್ನಿಪೂಜೆ ಸಮಿತಿಯ ವಿಶ್ವನಾಥ್‌ ರಾಜ್, ಅರ್ಚಕರಾದ ದಿವಾಕರ್‌ ಭಟ್, ಮನೋಹರ್, ಕೃಷ್ಣಪ್ಪ, ಭೀಮಯ್ಯ, ರಮೇಶ್, ಅನಂತು, ಎಲ್.ಸುರೇಶ್, ಹೋಟೆಲ್ ಶಿವಲಿಂಗಯ್ಯ, ಎಚ್.ವಿ.ಸುರೇಶ್, ಮುನಿರಾಜು, ವೇಣು, ಮುತ್ತೇಗೌಡ, ಪದ್ಮಮ್ಮ, ಗಾಯತ್ರಿ, ನಾಗರತ್ನ ಇದ್ದರು.ಮಹಿಳೆಯರಿಂದ ವಿಶೇಷ ಪೂಜೆ

ಈ ಬಾರಿ ದುರ್ಗಾಷ್ಟಮಿಯ ದಿನ ಪ್ರಸನ್ನ ಪಾರ್ವತಿ ಅಮ್ಮನವರ ಸನ್ನಿಧಿಯಲ್ಲಿ ನವದುರ್ಗಾ ಮಾತೆಯರ ಪ್ರತಿಷ್ಠಾಪನೆಯಲ್ಲಿ ಹಾರೋಹಳ್ಳಿ ತಾಲೂಕಿನ ಮಹಿಳಾ ಮಂಡಳಿ, ಸ್ತ್ರೀಶಕ್ತಿ ಮತ್ತು ಧರ್ಮಸ್ಥಳ ಸಂಘದ ಮಹಿಳೆಯರು ವಿಶೇಷವಾಗಿ ಭಾಗವಹಿಸಿ ಕುಂಕುಮಾರ್ಚನೆ ನೆರವೇರಿಸಲಿದ್ದಾರೆ. ಈ ಧಾರ್ಮಿಕ ಕೈಂಕರ್ಯದಲ್ಲಿ ಭಾಗವಹಿಸುವ ಮಹಿಳೆಯರು ಹೆಸರು ನೋಂದಾಯಿಸಿಕೊಳ್ಳಬೇಕೆಂದು ಲಲಿತ ಮಹಿಳಾ ಮಂಡಳಿ ಸದಸ್ಯೆ ಕಮಲಮ್ಮ ಮನವಿ ಮಾಡಿದರು.

Share this article