ರೋಣ: ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆ ವತಿಯಿಂದ ಶುಕ್ರವಾರ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆಗಳು, ದೇಶ ಭಕ್ತಿ ನೃತ್ಯ, ಪೊಲೀಸರು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನೆ ಜರುಗಿತು.ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಜನತೆಗೆ ಸಾಕಷ್ಡು ಅನುಕೂಲವಾಗಿದೆ. ಅದರಲ್ಲೂ ಬಡವರಿಗೆ ಆರ್ಥಿಕ ಹೊರೆ ಕಡಿಮೆ ಮಾಡಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಅನುದಾನವನ್ನು ಈಗಾಗಲೇ ಮೀಸಲಿರಿಸಿದ್ದು, ಯಾವುದೇ ಕಾರಣಕ್ಕೂ ಯೋಜನೆ ನಿಲ್ಲುವುದಿಲ್ಲ. ಗೃಹಲಕ್ಷ್ಮೀ ಯೋಜನೆಯಿಂದ ಅನೇಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಬದುಕನ್ನು ಸಾಗಿಸುತ್ತಿದ್ದಾರೆ. ಎಲ್ಲಡೆ ಗ್ಯಾರಂಟಿ ಯೋಜನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಜೊತೆಗೆ ಜನತೆಗೆ ಬೇಕಾದ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತಾ ಬರಲಾಗಿದೆ ಎಂದರು.
ಧ್ವಜಾರೋಹಣವನ್ನು ತಹಸೀಲ್ದಾರ್ ನಾಗರಾಜ ಕೆ. ನೆರವೇರಿಸಿ, ಬ್ರಿಟಿಷರ ಸಂಕೋಲೆಯಿಂದ ಭಾರತವನ್ನು ಸ್ವತಂತ್ರಗೊಳಿಸಲು ಅನೇಕ ಮಹನೀಯರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಡಿದ್ದಾರೆ. ಅವರ ಹೋರಾಟ, ತ್ಯಾಗ ಬಲಿದಾನದಿಂದಾಗಿಯೇ ದೇಶ ಸ್ವತಂತ್ರ ಹೊಂದಿದೆ. ಕಳೆದ 79 ವರ್ಷಗಳಲ್ಲಿ ದೇಶ ಜಗತ್ತಿನಲ್ಲಿಯೇ ಮುಂದುವರೆದ ದೇಶವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ, ತಾಪಂ ಇಒ ಚಂದ್ರಶೇಖರ ಕಂದಕೂರ, ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್‌ಐ ಪ್ರಕಾಶ ಬಣಕಾರ, ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನಮಂತಪ್ಪ ತಳ್ಳಿಕೇರಿ, ಗೀತಾ ಆಲೂರ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪ್ರಭುಗೌಡ ಪಾಟೀಲ ಸೇರಿದಂತೆ ವಿವಿದ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಬಿಇಒ ಅರ್ಜುನ ಕಾಂಬೋಗಿ ಸ್ವಾಗತಿಸಿದರು.