ಚಿತ್ರದುರ್ಗ: ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಹಾಗೂ ಅರ್ಥರ್ಪೂವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಅದರನ್ವಯ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸುವ ಸಂಬಂಧ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯೋತ್ಸವದ ಅಂಗವಾಗಿ ನವೆಂಬರ್ 01 ರಂದು ಬೆಳಿಗ್ಗೆ 7.30ಕ್ಕೆ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆಯು ನಗರದ ನೀಲಕಂಠೇಶ್ವರ ದೇಗುಲದಿಂದ ಪ್ರಾರಂಭವಾಗಲಿದೆ. ಈ ಬಾರಿಯ ಸ್ತಬ್ಧಚಿತ್ರ ಮೆರವಣಿಗೆ ಅರ್ಥಪೂರ್ಣವಾಗಿರಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಸ್ತಬ್ಧ ಚಿತ್ರ ಸಮಿತಿ ಹೆಚ್ಚಿನ ಸಂಖ್ಯೆ ಸ್ತಬ್ಧಚಿತ್ರಗಳ ಬದಲಾಗಿ ಆಯ್ದ 10 ಇಲಾಖೆಗಳ ಅತ್ಯುತ್ತಮ ಸ್ತಬ್ಧಚಿತ್ರಗಳಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದರು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಮಿತಿ ಭಾಗವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಕಾರ್ಯ ನಡೆಸಬೇಕು. ಜಿಲ್ಲಾ ಪಂಚಾಯಿತಿ, ಕೃಷಿ, ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಕೆಎಸ್ಆರ್‌ಟಿಸಿಯಿಂದ ಸರ್ಕಾರದ ಸಾಧನೆಗಳನ್ನು ಸ್ತಬ್ಧಚಿತ್ರಗಳ ಮೂಲಕ ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಮೆರವಣಿಗೆಯು ನಗರದ ನೀಲಕಂಠೇಶ್ವರ ದೇಗುಲದಿಂದ ಹೊರಟು, ಪ್ರಮುಖ ರಸ್ತೆ ಮೂಲಕ ರಾಜ್ಯೋತ್ಸವ ಸಮಾರಂಭ ಜರುಗುವ ಪೊಲೀಸ್ ಕವಾಯತು ಮೈದಾನದವರೆಗೆ ಸಾಗಿ ಬರಲಿದೆ. ಅಂದು ಬೆಳಿಗ್ಗೆ 9ಕ್ಕೆ ಪೊಲೀಸ್ ಕವಾಯತು ಮೈದಾನದಲ್ಲಿ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರಧ್ವಜಾರೋಹಣ ನೆರವೇರಲಿದೆ. ಶಿಷ್ಟಾಚಾರದ ಅನ್ವಯ ಎಲ್ಲ ಗಣ್ಯಮಾನ್ಯರನ್ನು ಆಹ್ವಾನಿಸಲಾಗುವುದು. ಇದಕ್ಕಾಗಿ ಜಿಲ್ಲಾ ಪಂಚಾಯಿತಿ ಸಿಇಓ ಅಧ್ಯಕ್ಷತೆಯಲ್ಲಿ ವೇದಿಕೆ ಸಮಿತಿಯನ್ನು ರಚಿಸಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿ ರಚನೆ ಮಾಡಲಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಬೆಳಿಗ್ಗೆ ಪೊಲೀಸ್ ಕವಾಯತು ಮೈದಾನದಲ್ಲಿ ಹಾಗೂ ಸಂಜೆ ತರಾಸು ರಂಗಮಂದಿರದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವರು ಎಂದು ಮಾಹಿತಿ ನೀಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಲಾವಿದರಿಂದ ನಮ್ಮ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಗೀತಗಾಯನ ಕಾರ್ಯಕ್ರಮ ಆಯೋಜಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು. ಉಪ ವಿಭಾಗಾಧಿಕಾರಿ ಎಂ.ಕಾರ್ತಿಕ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಮಂಜುನಾಥ, ಆಹಾರ ಇಲಾಖೆ ಉಪ ನಿರ್ದೇಶಕ ಮಧುಸೂಧನ್, ನಗರಸಭೆ ಪೌರಾಯುಕ್ತೆ ರೇಣುಕಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಸ್ವಾಮಿ, ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ ಇದ್ದರು.