ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯ ಆಡಳಿತಗಾರರಾಗಿದ್ದು, ಅವರು ನಿರ್ಮಿಸಿದ ನಗರ ಯೋಜನೆ, ಜನಪರ ಆಡಳಿತ ಹಾಗೂ ಅಭಿವೃದ್ಧಿಯ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ. ಅವರ ಸೇವೆ ಮತ್ತು ಆದರ್ಶಗಳು ಇಂದಿನ ಯುವಜನತೆಗೆ ದಾರಿದೀಪವಾಗಬೇಕು. ಇಂತಹ ಮಹನೀಯರ ಬದುಕು ಮತ್ತು ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಜಯಂತಿಯ ಅಂಗವಾಗಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ನಡೆದ ಅದ್ಧೂರಿ ಮೆರವಣಿಗೆ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ವಿವಿಧ ಸಂಘಸಂಸ್ಥೆಗಳು ನೀಡಿದ ಸಹಕಾರ ಶ್ಲಾಘನೀಯವಾಗಿದೆ. ಸಮಾಜವನ್ನು ಒಗ್ಗೂಡಿಸುವ ಇಂತಹ ಕಾರ್ಯಕ್ರಮಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಹಾಸನ
ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಹಾಸನ ನಗರದಲ್ಲಿ ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಅತ್ಯಂತ ಸಂಭ್ರಮ, ಸಡಗರ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಯಂತಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ, ಹಾಸನ- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಎಚ್.ಪಿ. ಸ್ವರೂಪ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸೇರಿದಂತೆ ಗಣ್ಯರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ನಂತರ ಮಾತನಾಡಿದ ಸಂಸದ ಶ್ರೇಯಸ್ ಎಂ. ಪಟೇಲ್, ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯ ಆಡಳಿತಗಾರರಾಗಿದ್ದು, ಅವರು ನಿರ್ಮಿಸಿದ ನಗರ ಯೋಜನೆ, ಜನಪರ ಆಡಳಿತ ಹಾಗೂ ಅಭಿವೃದ್ಧಿಯ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ. ಅವರ ಸೇವೆ ಮತ್ತು ಆದರ್ಶಗಳು ಇಂದಿನ ಯುವಜನತೆಗೆ ದಾರಿದೀಪವಾಗಬೇಕು. ಇಂತಹ ಮಹನೀಯರ ಬದುಕು ಮತ್ತು ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಜಯಂತಿಯ ಅಂಗವಾಗಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ನಡೆದ ಅದ್ಧೂರಿ ಮೆರವಣಿಗೆ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ವಿವಿಧ ಸಂಘಸಂಸ್ಥೆಗಳು ನೀಡಿದ ಸಹಕಾರ ಶ್ಲಾಘನೀಯವಾಗಿದೆ. ಸಮಾಜವನ್ನು ಒಗ್ಗೂಡಿಸುವ ಇಂತಹ ಕಾರ್ಯಕ್ರಮಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಶಾಸಕ ಎಚ್. ಪಿ. ಸ್ವರೂಪ್ ಮಾತನಾಡಿ, ನಾಡಿನ ಸಮಸ್ತ ಜನತೆಗೆ ಕೆಂಪೇಗೌಡ ಜಯಂತಿಯ ಶುಭಾಶಯಗಳನ್ನು ಕೋರಿದರು. ಜಿಲ್ಲಾಡಳಿತದ ನೇತೃತ್ವದಲ್ಲಿ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಎಲ್ಲ ಸಮುದಾಯಗಳ ಸಹಭಾಗಿತ್ವದೊಂದಿಗೆ ಜಯಂತಿಯನ್ನು ಆಚರಿಸಿರುವುದು ಸಂತಸದ ಸಂಗತಿ ಎಂದರು. ಕೆಂಪೇಗೌಡರ ಸಾಧನೆಗಳು ಇಂದಿಗೂ ಜೀವಂತವಾಗಿದ್ದು, ಅವರು ಹಾಕಿಕೊಟ್ಟ ಅಭಿವೃದ್ಧಿಯ ಮಾರ್ಗ ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದೆ. ಅವರ ಆದರ್ಶಗಳನ್ನು ಅನುಸರಿಸಿ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಬಳಿಕ ವಿವಿಧ ಜಾನಪದ ಕಲಾತಂಡಗಳು, ಡೊಳ್ಳು ಕುಣಿತ, ಸಾಂಪ್ರದಾಯಿಕ ವಾದ್ಯಗೋಷ್ಠಿಗಳು ಹಾಗೂ ಕೆಂಪೇಗೌಡರ ಭಾವಚಿತ್ರದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಾವಿರಾರು ಸಾರ್ವಜನಿಕರು, ವಿವಿಧ ಸಂಘಸಂಸ್ಥೆಗಳ ಸದಸ್ಯರು ಹಾಗೂ ಯುವಕರು ಉತ್ಸಾಹದಿಂದ ಪಾಲ್ಗೊಂಡು ಜಯಂತಿಗೆ ಮೆರುಗು ತಂದರು.
ಇದೇ ವೇಳೆ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ. ಎಲ್. ಮುದ್ದೇಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಚ್. ಎಲ್. ಮಲ್ಲೇಶ್ ಗೌಡ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್. ಬಿ. ಮದನ್ ಗೌಡ, ಸಮಾಜಸೇವಕ ಕಂಚಮಾರನಹಳ್ಳಿ ಕಾಂತರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಚ್. ಪಿ. ತಾರನಾಥ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.