ಕನ್ನಡಪ್ರಭ ವಾರ್ತೆ ಹರಿಹರ
ನಿತ್ಯ ಹರಿಹರದಿಂದ ಕಡೂರಿಗೆ ಮರದ ಕೆತ್ತನೆ ಕಸೂರಿ ಮಾಡುವ ಕಾರ್ಯಕ್ಕೆ ತೆರಳುವ ಹರಿಹರದ ಖ್ಯಾತ ಚಿತ್ರಕಲಾವಿದ ಜಿ.ಎಂ.ರಾಜಶೇಖರಮೂರ್ತಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುವ ಸಿದ್ಧಗಂಗಾ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಬೆಳಿಗ್ಗೆ 7.58ಕ್ಕೆ ಆಗಮಿಸಿ 8 ಗಂಟೆಗೆ ಹರಿಹರದಿಂದ ಬೆಂಗಳೂರು ಕಡೆ ತೆರಳುವ 6ನೇ ನಂಬರ್ ಡಬ್ಬಿಯಲ್ಲಿ ಪ್ರಯಾಣಿಸುತ್ತಾರೆ.
ಡಬ್ಬಿಯಲ್ಲಿ ಹತ್ತುವ ಹೊಸ ಹೊಸ ಪ್ರಯಾಣಿಕರನ್ನೂ ಪರಿಚಯ ಮಾಡಿಕೊಂಡು ಅವರ ಹೆಸರು ಕೆಲಸ ಸೇರಿದಂತೆ ಇಡೀ ಡಬ್ಬಿಯಲ್ಲಿರುವವರಿಗೆ ಪರಿಚಯ ಮಾಡಿಕೊಡುತ್ತಾರೆ.ಇವರೆಲ್ಲರ ಸಹಯೋಗದಲ್ಲಿ ರಾಜಶೇಖರಮೂರ್ತಿ ನೇತೃತ್ವದಲ್ಲಿ ರೈಲು ಮಜಾ ಟಾಕೀಸ್, ಸಾಂಸ್ಕೃತಿಕ ವೇದಿಕೆಯ ಗೆಳೆಯರ ಬಳಗ ಸ್ಥಾಪಿಸಲಾಗಿದೆ. ಬಳಗದಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಾಂಬೆಗೆ ನಮನ ಸಲ್ಲಿಸುತ್ತಾರೆ.
ನವೆಂಬರ್ ತಿಂಗಳಲ್ಲಿ ಎಲ್ಲರ ಅನುಕೂಲ ಉಪಸ್ಥಿತಿಗೆ ಅನುಗುಣವಾಗಿ ರಾಜ್ಯೋತ್ಸವಕ್ಕೆ ಮಹೂರ್ತ ಸಿದ್ದ ಪಡಿಸುತ್ತಾರೆ. ಕನ್ನಡಾಂಬೆಯ ಸಿಂಗರಿಸಿ, ಪೂಜೆ ಸಲ್ಲಿಸಿ, ಸಾಮೂಹಿಕವಾಗಿ ಎದ್ದುನಿಂತು ಕನ್ನಡ ತಾಯಿ ಭುವನೇಶ್ವರಿಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಣೆ, ನಾಡಗೀತೆ ಹಾಡುವ, ಕನ್ನಡದ ಮಹತ್ವ ಸಾರುವ ಕಾರ್ಯ, ಹಿರಿಯರಿಗೆ, ಗೆಳೆಯರಿಗೆ, ಗೌರವ ಸನ್ಮಾನ ನೀಡಿ ನಂತರ ಬೋಗಿಯ ಸಹ ಪ್ರಯಾಣಿಕರಿಗೆಲ್ಲ ಸಿಹಿ ಹಂಚಲಾಯಿತು.
ಇವರ ಡಬ್ಬಿಯಲ್ಲಿ, ವೈದ್ಯರು, ಎಂಜಿನಿಯರ್, ಕೃಷಿ ಪಂಡಿತರು ಸೇರಿದಂತೆ ವಿವಿಧ ಉದ್ಯೋಗಸ್ಥರು ಪ್ರಯಾಣಿಸುತ್ತಾರೆ. ತಾವು ಅರಿತ ಮಾಹಿತಿಗಳನ್ನು ಜೊತೆಗಾರರೊಂದಿಗೆ ಹಂಚಿಕೊಳ್ಳುತ್ತಾರೆ. ಕೃಷಿಯಲ್ಲಿ ಸಾಧನೆ ಮಾಡಿದವರು ಮಣ್ಣಿನ ಗುಣ, ಬೀಜಗಳ ಬಳಕೆ, ಔಷಧ ಬಳಕೆ, ಬೆಳೆಗಳು, ಅವುಗಳ ಮಾರುಕಟ್ಟೆ ಮುಂತಾದ ಮಾಹಿತಿಗಳನ್ನು ಹಂಚುತ್ತಾರೆ.