ಕನ್ನಡಪ್ರಭ ವಾರ್ತೆ ಹಾಸನ
ಕಳೆದ ೨೨ ವರ್ಷಗಳ ಕಾಲ ದೇಶ ಸೇವೆ ಮಾಡಿ ಯಶಸ್ವಿಯಾಗಿ ನಿವೃತ್ತಿಗೊಂಡು ವಾಪಸ್ ತಾಯ್ನಾಡು ಹಾಸನ ಜಿಲ್ಲೆಗೆ ಬಂದ ಹವಲ್ದಾರ್ ಎಚ್.ಆರ್. ರಮೇಶ್ ಅವರನ್ನು ನಿವೃತ್ತ ಸೈನಿಕರ ಸಂಘದಿಂದ ಹಾಗೂ ಊರಿನ ಜನರು ನಗರದ ಡೇರಿ ವೃತ್ತದಲ್ಲಿ ಪಟಾಕಿ ಸಿಡಿಸಿ ಹೂವಿನ ಮಾಲೆ ಹಾಗೂ ಮೈಸೂರು ಪೇಟ ತೊಡಿಸಿ ಅದ್ಧೂರಿ ಸ್ವಾಗತದೊಂದಿಗೆ ಬರಮಾಡಿಕೊಂಡು ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಕರೆದೊಯ್ದರು.ಇದೇ ವೇಳೆ ನಿವೃತ್ತರಾದ ಹವಲ್ದಾರ್ ಎಚ್.ಆರ್. ರಮೇಶ್ ಮಾತನಾಡಿ, ತಾಲೂಕಿನ ಅರೆಕಲ್ಲು ಹೊಸಳ್ಳಿ ಗ್ರಾಮದ ಹಾಗೂ ಪ್ರಸ್ತುತ ನಗರದ ಬಿ.ಟಿ. ಕೊಪ್ಪಲಿನಲ್ಲಿ ವಾಸವಿದ್ದು, ಕಳೆದ ೨೨ ವರ್ಷಗಳ ಕಾಲ ಸೇವೆ ಮಾಡಿ ಮತ್ತೆ ತಾಯ್ನಾಡಾದ ಹಾಸನ ಜಿಲ್ಲೆಗೆ ಯಶಸ್ವಿಯಾಗಿ ವಾಪಸ್ ಬಂದಿದ್ದೇನೆ. ಇಲ್ಲಿನ ಎಲ್ಲರನ್ನು ನೋಡಿ ತುಂಬ ಸಂತೋಷವಾಗುತ್ತಿದೆ. ಮಾಜಿ ಸೈನಿಕರು ಮತ್ತು ನಮ್ಮ ಊರಿನ ಜನರು ಎಲ್ಲಾರು ಬಂದು ನಮಗೆ ಶುಭ ಹಾರೈಸಿ ಬರಮಾಡಿಕೊಂಡು ಸ್ವಾಗತ ನೀಡಿದ್ದಾರೆ. ಯಾರೇ ಸೇನೆಗೆ ಸೇರಿದರೆ ಖುಷಿಪಡಬೇಕು, ಒಬ್ಬ ಯೋಧ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಪಡಬೇಕು. ನನ್ನ ೨೨ ವರ್ಷದ ಸೇವೆಯಲ್ಲಿ ಅನೇಕ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಜಮ್ಮು ಕಾಶ್ಮೀರದಲ್ಲಿ ಏನು ಸಮಸ್ಯೆ ಇರುತ್ತದೆ ಎನ್ನುವ ಬಗ್ಗೆ ಎಲ್ಲರಿಗೂ ತಿಳಿದಿದೆ. ತುಂಬ ಕಠಿಣವಾದ ಪರಿಸ್ಥಿತಿಯನ್ನು ಎದುರಿಸಿ ಕರ್ತವ್ಯ ನಿರ್ವಹಿಸಿದ್ದೇವೆ ಎಂದರು.
ಮುಂದಿನ ಜೀವನ ಸಮಾಜ ಸೇವೆ ಮಾಡಬೇಂಬುದು ಉದ್ದೇಶವನಿಟ್ಟುಕೊಂಡಿದ್ದೇನೆ. ಇಲ್ಲಿವರೆಗೂ ಹೇಗೆ ದೇಶ ಸೇವೆ ಮಾಡಿದ್ದೇವೆ ಮುಂದೆ ಜನಸೇವೆ ಮಾಡಬೇಕೆನ್ನುವುದು ತುಂಬ ಆಸೆ ಇದೆ ಎಂದು ದೇಶ ಕಾಯುವ ವೃತ್ತಿಯಲ್ಲಿನ ಹಾಗೂ ಮುಂದಿನ ಜೀವನದ ಉದ್ದೇಶ ಕುರಿತು ಮನದಾಳದ ಮಾತನ್ನು ಇದೇ ವೇಳೆ ಹೇಳಿಕೊಂಡರು. ಇದೇ ವೇಳೆ ಜಿಲ್ಲಾ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರಾದ ಎ.ಎಸ್. ಪ್ರದೀಪ್ ಸಾಗರ್, ಕಾರ್ಯದರ್ಶಿ ಡಿ.ಈ. ಸ್ವಾಮಿ, ಮಾಜಿ ಅಧ್ಯಕ್ಷರಾದ ಸೋಮೇಶ್, ನಾಗರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಇತರ ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾಗತದೊಂದಿಗೆ ಬರಮಾಡಿಕೊಂಡರು.