ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಭೀಮನಗರ ಬಡಾವಣೆಯ ಮಾತೆ ಸಾವಿತ್ರಿ ಬಾಯಿಪುಲೆ ರಂಗಮಂದಿರದ ಹೆಬ್ಬಾಗಿಲು ಬಳಿ ಆಗಮಿಸಿದ ರಥಯಾತ್ರೆಯನ್ನು ಯಜಮಾನರು, ಮಾಜಿ ಯಜಮಾನರು, ಮುಖಂಡರು, ನಿವಾಸಿಗಳು ಹಾಗೂ ಬೌದ್ಧ ಉಪಾಸಕರು ಪುಷ್ಪನಮನ ಸಲ್ಲಿಸಿ, ಮುಂಬತ್ತಿ ಹಿಡಿದು ಸ್ವಾಗತಿಸಿ ಮೆರವಣಿಗೆ ನಡೆಸುವ ಮೂಲಕ ಬರಮಾಡಿಕೊಂಡರು.
ಬಳಿಕ ಯಾತ್ರೆ ಮೂಡಲ ಬೀದಿ, ಸಿದ್ದಮಲ್ಲಯ್ಯ ಬೀದಿ, ಬಸವನ ದೇವರ ಗುಡಿ ಬೀದಿ, ಪಾಲ್ ಚಾವಡಿ ಬೀದಿ, ಪನ್ನಾ ಬೀದಿ, ಕಲ್ಲುಬಾವಿ ಬೀದಿ, ಚೌಡಮ್ಮನ ಗುಡಿ ಬೀದಿ, ದಿಡ್ಡದಕೇರಿಗಳಲ್ಲಿ ಸಂಚರಿಸಿತು. ಮೆರವಣಿಗೆ ವೇಳೆ ಪ್ರತಿ ಮನೆಮನೆಗಳಿಂದ ಬುದ್ಧನ ಅನುಯಾಯಿಗಳು ರಥದಲ್ಲಿದ್ದ ಬುದ್ದ ಭಗವಾನ್ ಹಾಗೂ ಅಂಬೇಡ್ಕರ್ ಅವರ ಪುತ್ಹಳಿಗೆ ಜ್ಯೋತಿ ಬೆಳಗಿಸಿ, ಮುಂಬತ್ತಿ ಬೆಳಗಿಸಿ, ಪುಷ್ಪ ನಮನ ಸಲ್ಲಿಸಿ ವಂದಿಸಿದರು. ಬಳಿಕ ಚೌಡಮ್ಮ ಗುಡಿ ಬೀದಿಯಲ್ಲಿ ಬೌದ್ಧ ಬಿಕ್ಕು ಗೌತಮಿ ಭಂತೆ ಅವರು ಧಮ್ಮ ಬೋಧನೆಯನ್ನು ಬೋಧಿಸಿದರು. ನಂತರ ನೂರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.ಈ ವೇಳೆ ಭೀಮನಗರ ಬಡಾವಣೆಯ ದೊಡ್ಡ ಯಜಮಾನರಾದ ಚಿಕ್ಕಮಾಳಿಗೆ ಮಾತನಾಡಿ, ಬೌದ್ಧ ಮಹಾಸಮ್ಮೇಳನದ ಅಂಗವಾಗಿ ಆಗಮಿಸಿರುವ ಧಮ್ಮ ಪಯಣ ಜಾಗೃತಿ ರಥಯಾತ್ರೆಯನ್ನು ಭೀಮನಗರದ ನಿವಾಸಿಗಳು ಹಾಗೂ ಅನುಯಾಯಿಗಳು ಅದ್ಧೂರಿಯಾಗಿ ಸ್ವಾಗತಿಸಿ, ಮುಂದಿನ ತಿಂಗಳು ಅ.24 ಮತ್ತು 25ರಂದು ಚಾ.ನಗರದಲ್ಲಿ ನಡೆಯುವ ಅಂತಾರಾಷ್ಟೀಯ ಎರಡನೇ ಬೌದ್ಧ ಮಹಾ ಸಮ್ಮೇಳನ ನಮ್ಮ ಬೆಂಬಲ ಸೂಚಿಸುವುದರ ಜತೆಗೆ ಬುದ್ಧ ಅನುಯಾಯಿಗಳಾಗಿ ಭೀಮನಗರದ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತೀರ್ಮಾನಿಸಲಾಗಿದ್ದು ಎಲ್ಲರೂ ಸಹಕರಿಸಬೇಕು ಎಂದರು.