ನಿವೃತ್ತ ಸೈನಿಕನಿಗೆ ತವರೂರ ಅದ್ಧೂರಿ ಸ್ವಾಗತ

KannadaprabhaNewsNetwork | Updated : Feb 05 2024, 04:07 PM IST

ಸಾರಾಂಶ

ಭಾರತೀಯ ಭೂ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಗೊಂಡು ತವರೂರಿಗೆ ಬಂದ ಸೈನಿಕನನ್ನು ಗ್ರಾಮಸ್ಥರು, ಸ್ನೇಹಿತರು ಅದ್ದೂರಿಯಾಗಿ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಭಾರತೀಯ ಭೂ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಗೊಂಡ ಸೈನಿಕ ತನ್ನ ತವರೂರಿಗೆ ಬಂದಾಗ ಗ್ರಾಮಸ್ಥರು, ಸ್ನೇಹಿತರ ಬಳಗ ಶನಿವಾರಸಂತೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.

ಕೊಡಗು-ಹಾಸನ ಗಡಿ ಭಾಗದಲ್ಲಿರುವ ಹಣಸೆ ಗ್ರಾಮದ ಶಶಿಕುಮಾರ್, ಭಾರತೀಯ ಭೂ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದರು. ಜ.31ರಂದು ಶಶಿಕುಮಾರ್ ಸೇವೆಯಿಂದ ನಿವೃತ್ತಿಗೊಂಡಿದ್ದರು. 

ಶನಿವಾರ ಅವರು ತವರೂರು ಹಣಸೆ ಗ್ರಾಮಕ್ಕೆ ಆಗಮಿಸಿದರು. ಈ ಸಂದರ್ಭ ಶಶಿಕುಮಾರ್ ಪೋಷಕರು, ಪತ್ನಿ, ಹಣಸೆ ಗ್ರಾಮಸ್ಥರು, ಸ್ನೇಹಿತರ ಬಳಗ ಶನಿವಾರಸಂತೆಯಲ್ಲಿ ಅದ್ದೂರಿ ಸ್ವಾಗತದೊಂದಿಗೆ ತವರೂರಿಗೆ ಬರಮಾಡಿಕೊಂಡರು.

ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಗ್ರಾಮಸ್ಥರು, ಸ್ನೇಹಿತರ ಬಳಗ ತೆರೆದ ವಾಹನದಲಿದ್ದ್ಲ ಶಶಿಕುಮಾರ್ ಅವರಿಗೆ ಹೂವಿನ ಹಾರಹಾಕಿ ಸ್ವಾಗತಿಸಿದರು. 

ನಂತರ ಪಟ್ಟಣದ ಐ.ಬಿ. ರಸ್ತೆಯಲ್ಲಿರುವ ನಿವೃತ್ತ ಸೈನಿಕ ಸಂಘಕ್ಕೆ ಶಶಿಕುಮಾರ್ ಅವರನ್ನು ಬರಮಾಡಿಕೊಳ್ಳಲಾಯಿತು.ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಶಿಕುಮಾರ್, ಸೇನೆಯಲ್ಲಿ ಸೇವೆ ಸಲ್ಲಿಸುವುದು ಪುಣ್ಯದ ಕೆಲಸ. 

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವಕರು ಸೇನೆಗೆ ಸೇರಲು ಆಸಕ್ತಿವಹಿಸಬೇಕು. ಇಂದು ಹತ್ತನೆ ತರಗತಿ ಹಂತದ ವಿದ್ಯಾರ್ಥಿಗಳಿಂದ ಹಿಡಿದು ಡಿಪ್ಲೊಮೋ ಪದವಿ ಹಂತದ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಗೆ ಪೂರಕವಾದ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. 

ಇದರ ಜೊತೆಯಲ್ಲಿ ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಸೇನೆಗೆ ಸೇರಲು ಅವಕಾಶ ಇರುತ್ತದೆ ಈ ದಿಸೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸೇನೆಗೆ ಸೇರುವಂತೆ ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.

ಶಶಿಕುಮಾರ್ ಪೋಷಕರು, ಪತ್ನಿ, ನಿವೃತ್ತ ಸೈನಿಕ ಹಣಸೆ ಆನಂದ್, ಹಣಸೆ ಗ್ರಾಮದ ಪ್ರಮುಖರು, ಸ್ನೇಹಿತರ ಬಳಗದ ವಿನೋದ್, ಮುಂತಾದವರಿದ್ದರು.

Share this article