ಹುಬ್ಬಳ್ಳಿ: ಮಹಾನಗರದಲ್ಲಿ ಮನೆ ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಮಂಡಳಿಗಳಿಂದ ಪ್ರಥಮ ಪೂಜಿತ, ವಿಘ್ನ ನಿವಾರಕ ಗಣೇಶನನ್ನು ಬುಧವಾರ ಅತ್ಯಂತ ವಿಜೃಂಭಣೆಯಿಂದ ಬರಮಾಡಿಕೊಳ್ಳಲಾಯಿತು. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬರೋಬ್ಬರಿ 900 ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆ ನಡೆಯಿತು.
ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ನಡೆದ ಭರ್ಜರಿ ಮೆರವಣಿಗೆಯಲ್ಲಿ ಡಿಜೆ ಹಾಗೂ ಬೃಹದಾಕಾರದ ಧ್ವನಿವರ್ಧಕಗಳು ಮತ್ತು ಲೈಟಿಂಗ್‌ಗಳು ವಿಶೇಷ ಗಮನ ಸೆಳೆದವು. ಮೆರವಣಿಗೆ ಆರಂಭದಿಂದ ಹಿಡಿದು ಮುಕ್ತಾಯದ ವರೆಗೂ ಸಾವಿರಾರು ಯುವಕ- ಯುವತಿಯರು, ಮಹಿಳೆಯರು- ಪುರುಷರು ಮತ್ತು ಮಕ್ಕಳು ಸೇರಿದಂತೆ ಎಲ್ಲರೂ ಭಾಗವಹಿಸಿ ಅಬ್ಬರದ ಮ್ಯೂಸಿಕ್‌ಗೆ ಹೆಜ್ಜೆ ಹಾಕಿದರು.ಈ ನಡುವೆ ಮುಂಗಡವಾಗಿ ಕಾಯ್ದಿರಿಸಿದ್ದ ಗಣಪ ಮೂರ್ತಿಯನ್ನು ಭಕ್ತರು ತಲೆ ಮೇಲೆ, ಕಾರು, ದ್ವಿಚಕ್ರ ವಾಹನ, ಆಟೋರಿಕ್ಷಾ ಸೇರಿದಂತೆ ವಿವಿಧ ವಾಹನಗಳಲ್ಲಿ ಗಣೇಶನನ್ನು ಮನೆಯತ್ತ ಕೊಂಡೊಯ್ಯುವ ನೋಟ ಕಂಡು ಬಂದಿತು. ಮಕ್ಕಳು, ಮಹಿಳೆಯರು, ಹಿರಿಯರಾದಿಯಾಗಿ ಮನೆ ಮಂದಿಯೆಲ್ಲ ಹೊಸ ಬಟ್ಟೆತೊಟ್ಟು ಗಣೇಶನನ್ನು ಸ್ವಾಗತಿಸಿಕೊಂಡರು. ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರತಿಷ್ಠಾಪನೆ ಮಾಡಿದರು.
ವಿವಿಧ ರೂಪಕಗಳಲ್ಲಿ ರಾರಾಜಿಸುತ್ತಿದ್ದ ಗಣೇಶನ ಮೂರ್ತಿಗಳನ್ನು ಹೊತ್ತ ಮೆರವಣಿಗೆ ಬೆಳಗ್ಗೆಯಿಂದ ತಡರಾತ್ರಿಯ ವರೆಗೂ ನಡೆಯಿತು. ಡಿಜೆ ಮ್ಯೂಸಿಕ್‌ಗೆ ಯುವ ಜನತೆ ಅಕ್ಷರಶಃ ಕುಣಿದು ಕುಪ್ಪಳಿಸಿದರು. ಮಹಾನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳ ಮೂಲಕ ಸಂಚರಿಸಿ, ಆಯಾ ಪ್ರದೇಶದಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪ್ರತಿಷ್ಠಾಪನೆ ಮಾಡಲಾಯಿತು. ಈ ವೇಳೆ ಮಂತ್ರಘೋಷಗಳು ಹಾಗೂ ಗಣೇಶನ ಆರಾಧನೆ ಗೀತೆಗಳು ಕೇಳಿ ಬಂದವು. ನಂತರ ಗಣೇಶನಿಗೆ ನೈವೇದ್ಯದ ಮೂಲಕ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.ಅದರಂತೆ ನಗರದ ದಾಜೀಬಾನ್‌ಪೇಟ, ದುರ್ಗದಬೈಲ್, ವೀರಾಪೂರ ಓಣಿ, ಬಮ್ಮಾಪೂರ ಓಣಿ, ಗಣೇಶಪೇಟ, ಬಾರದಾನ್ ಸಾಲ, ಕೇಶ್ವಾಪೂರ, ಸ್ಟೇಶನ್ ರಸ್ತೆ, ಗೋಕುಲ ರಸ್ತೆ, ದೇಶಪಾಂಡೆ ನಗರ, ಶೀಲವಂತರ ಓಣಿ, ವಿದ್ಯಾನಗರ, ಉಣಕಲ್, ಗೋಪನಕೊಪ್ಪ ಸೇರಿದಂತೆ ವಿವಿಧ ಪ್ರಮುಖ ಪ್ರದೇಶಗಳಲ್ಲಿ ಹಲವಾರು ರೂಪಕಗಳ ಸಾರ್ವಜನಿಕ ಗಣೇಶನ ಮೂರ್ತಿಗಳನ್ನು ಅದ್ಧೂರಿ ಮೆರವಣಿಗೆ ಮೂಲಕ ಪ್ರತಿಷ್ಠಾಪನೆ ಮಾಡಲಾಗಿದೆ. ಗುರುವಾರ ಹೋಮ, ಮಂಗಳಾರತಿ ಹಾಗೂ ನೈವೇದ್ಯದ ಮೂಲಕ ಪೂಜಿಸಲಾಯಿತು. ಬಹುತೇಕ ಎಲ್ಲ ಉತ್ಸವ ಮಂಡಳಿಗಳು ಸಾರ್ವಜನಿಕರಿಗೆ ಅನ್ನ ಪ್ರಸಾದ ಹಾಗೂ ತಂಪುಪಾನೀಯ ವಿತರಣೆ ಮಾಡಿದವು. ಎರಡು, ಮೂರು, ಐದು ಹಾಗೂ 11 ದಿನಗಳವರೆಗೆ ಗಣೇಶನ ಆರಾಧನೆ ನಡೆಯಲಿದೆ.