ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮೈಸೂರು ರಾಜ್ಯವೆಂಬ ಹೆಸರು ಬದಲಾಗಿ ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡು ೫೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ- ೫೦ ಹೆಸರಿನಲ್ಲಿ ವರ್ಷಪೂರ್ತಿ ಕನ್ನಡ ಸಂಭ್ರಮ ಆಚರಿಸುವ ಕನ್ನಡ ಜ್ಯೋತಿ ರಥಯಾತ್ರೆ ಗುರುವಾರ ಪಟ್ಟಣಕ್ಕೆ ಆಗಮಿಸಿದಾಗ ನೂರಾರು ಕನ್ನಡ ಅಭಿಮಾನಿಗಳು ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿದರು.ಪಟ್ಟಣದ ಜೂನಿಯರ್ ಕಾಲೇಜು ಬಳಿ ರಥ ಆಗಮಿಸಿದಾಗ ತಾಲೂಕು ಆಡಳಿತ ಸೇರಿ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕನ್ನಡಾಂಬೆಗೆ ಜೈ ಎಂದು ಘೋಷಣೆಗಳನ್ನು ಕೂಗಿ ಪೂರ್ಣಕುಂಭ ಸ್ವಾಗತ ನೀಡಿ ಬರ ಮಾಡಿಕೊಂಡರು.
1973ರಲ್ಲಿ ಹೆಸರು ಬದಲಾವಣೆಕನ್ನಡ ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಿ ತಹಸೀಲ್ದಾರ್ ಯು.ರಶ್ಮಿ ಮಾತನಾಡಿ, ೧೯೭೩ರಲ್ಲಿ ಸಿಎಂ ದೇವರಾಜ ಅರಸು ಅವರಿಗೆ ರಾಜ್ಯಕ್ಕೆ ಮೈಸೂರು ರಾಜ್ಯವೆಂಬ ಹೆಸರನ್ನೇ ಮುಂದುವರೆಸುವ ಒತ್ತಡವಿದ್ದರೂ ಕರ್ನಾಟಕ ಎಂದು ನಾಮಕರಣ ಮಾಡಿದರು. ಹಂಪಿಯಿಂದಲೇ ಕರ್ನಾಟಕ ನಾಮಕರಣ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈಗ ಅದೇ ಮಾದರಿಯಲ್ಲಿ ೫೦ ವರ್ಷದ ಹಿಂದಿನ ಕಾರ್ಯಕ್ರಮ ಮರುಕಳಿಸುವಂತೆ ಹಂಪಿಯಲ್ಲಿ ನವೆಂಬರ್ ೨ರಂದು ಜ್ಯೋತಿ ರಥಯಾತ್ರೆ ನಡೆಯಲಿದೆ. ಹಂಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲ ಧರ್ಮದ ಸಂದೇಶ ಓದಲಾಗುವುದು ಎಂದರು.
ಮಾತನಾಡಲು ಕನ್ನಡ ಬಳಸಿತಾಪಂ ಇಒ ರವಿಕುಮಾರ್ ಮಾತನಾಡಿ, ಗಡಿ ಭಾಗದಲ್ಲಿರುವ ತಾಲೂಕಿನಲ್ಲಿ ಕನ್ನಡದ ಕಂಪನ್ನು ಪಸರಿಸಲು ಈ ಕನ್ನಡ ಜ್ಯೋತಿ ರಥಯಾತ್ರೆ ಸಹಕಾರಿಯಾಗಿದೆ. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು, ಕರ್ನಾಟಕ- ೫೦ರ ಸಂಭ್ರಮದಲ್ಲಿ ಪ್ರತಿಯೊಬ್ಬರೂ ಕನ್ನಡ ಹೆಚ್ಚಾಗಿ ಬಳಸಿ, ಅನ್ಯ ಭಾಷಿಕರಿಗೂ ಕನ್ನಡವನ್ನು ಕಲಿಸುವಂತ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಸಿಡಿಪಿಒ ಮುನಿರಾಜು,ಕನ್ನಡ ಸಂಘದ ಅಧ್ಯಕ್ಷೆ ಪಲ್ಲವಿಮಣಿ, ಕರವೇ ಅಧ್ಯಕ್ಷ ಕಣಿಂಬೆಲೆ ರಾಮಪ್ರಸಾದ್, ಬೇಕರಿ ಶ್ರೀನಿವಾಸ್, ಪುರಸಭೆ ಸದಸ್ಯರಾದ ಶಂಷುದ್ದಿನ್ ಬಾಬು, ಪ್ರಶಾಂತ್, ಶಫಿ, ಹುದುಕುಳ ವಿಎಸ್‌ಎಸ್‌ಎನ್ ಅಧ್ಯಕ್ಷ ಅ.ನಾ.ಹರೀಶ್, ಜೆಇ ರವಿ ಮತ್ತಿತರರು ಇದ್ದರು.