ಅಪ್ರತಿಮ ಯೋಧ, ಶ್ರೇಷ್ಠ ಆಡಳಿತಗಾರ: ಶ್ರೀಧರ ವಾಘ

KannadaprabhaNewsNetwork | Published : Feb 20, 2025 12:48 AM

ಸಾರಾಂಶ

ಶಹಾಜಿರಾಜೆ ಬೋಂಸ್ಲೆ ಮತ್ತು ರಾಷ್ಟ್ರಮಾತೆ ಜೀಜಾಬಾಯಿ ದಂಪತಿಗೆ ಜನಿಸಿದ ಶಿವಾಜಿ ಹಿಂದವೀ ಸ್ವರಾಜ್ಯದ ಕಲ್ಪನೆ ತುಂಬಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಭಾರತದ ಅತ್ಯಂತ ಗೌರವಾನ್ವಿತ ಅಪ್ರತಿಮ ಯೋಧ ಮತ್ತು ಶ್ರೇಷ್ಠ ಆಡಳಿತಗಾರರಲ್ಲಿ ಒಬ್ಬರಾದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ಪ್ರತಿ ವರ್ಷ ಫೆ.19ರಂದು ಶಿವಾಜಿ ಜಯಂತಿ ಆಚರಿಸಲಾಗುತ್ತದೆ ಎಂದು ಕಲಾದಗಿ ಮರಾಠ ಸಮಾಜದ ಅಧ್ಯಕ್ಷ ಶ್ರೀಧರ ವಾಘ ಹೇಳಿದರು.

ಗ್ರಾಮದ ಮರಾಠಾ ಸಮುದಾಯ ಭವನದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ದ್ವಜಾರೋಹಣ ಹಾಗೂ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶಿವಾಜಿಯವರನ್ನು ಶೌರ್ಯ, ನಾಯಕತ್ವ, ಧರ್ಮದ ಬಗೆಗಿನ ಗೌರವ ಹಾಗೂ ದೇಶಭಕ್ತಿ ಸಂಕೇತವಾಗಿ ಪೂಜಿಸಲಾಗುತ್ತಿದೆ. ಶಹಾಜಿರಾಜೆ ಬೋಂಸ್ಲೆ ಮತ್ತು ರಾಷ್ಟ್ರಮಾತೆ ಜೀಜಾಬಾಯಿ ದಂಪತಿಗೆ ಜನಿಸಿದ ಶಿವಾಜಿ ಹಿಂದವೀ ಸ್ವರಾಜ್ಯದ ಕಲ್ಪನೆ ತುಂಬಿದರು. ತಮ್ಮ ಆಡಳಿತದಲ್ಲಿ ಮರಾಠಿ ಹಾಗೂ ಸಂಸ್ಕೃತಕ್ಕೆ ಆದ್ಯತೆ ನೀಡುವುದಲ್ಲದೇ ತಮ್ಮ ರಾಜ ಮುದ್ರೆಯನ್ನು ಸಂಸ್ಕೃತದಲ್ಲೆ ಮುದ್ರಿಸಿದ್ದರು. ಇವರನ್ನು ಭಾರತೀಯ ನೌಕಾಪಡೆ ಪಿತಾಮಹರೆಂದು ಕರೆಯುತ್ತಾರೆ. ಅಷ್ಟೇ ಅಲ್ಲದೇ ಇವತ್ತಿಗೂ ಅವರ ಗೇರಿಲ್ಲಾ ಯುದ್ಧ ತಂತ್ರಗಳನ್ನು ಭಾರತೀಯ ಸೇನೆಯಲ್ಲಿ ಅಳವಡಿಸಿಕೊಳ್ಳು ತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ವಿನೋದ ದೇಶಮುಖ ಮಾತನಾಡಿ, ಶಿವಾಜಿ ಮಹರಾಜರ 50ವರ್ಷಗಳ ಆಡಳಿತದಲ್ಲಿ 700ಕ್ಕೂ ಹೆಚ್ಚು ಕೋಟೆಗಳನ್ನು ಗೆದ್ದಿದ್ದರು. ಸಾಕಷ್ಟು ಮಠ ಮಂದಿರಗಳ ಜಿರ್ಣೋದ್ಧಾರ ಮಾಡಿ ಹಿಂದೂ ಧರ್ಮದ ಉನ್ನತಿಗೆ ಕಾರಣರಾಗಿದ್ದರೆಂದರು. ಸಮಾಜದ ಹಿರಿಯರಾದ ಕೆ.ಕೆ.ಎಂ.ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ ಪಾಟೀಲ, ಆನಂದ ವಾಘ, ರಾಜೇಂದ್ರ ಜಾಧವ, ರಮೇಶ ದೇಶಮುಖ, ದಯಾನಂದ ದೇಶಮುಖ, ಗಣಪತಿ ದೇಶಮುಖ, ವಿಠ್ಠಲ ಪರೀಟ, ಪಾಂಡುರಂಗ ಪವಾರ, ಶ್ರೀಪಾದ ವಾಘ, ರಾಜು ಘೋರ್ಪಡೆ ಸೇರಿ ಇತರರಿದ್ದರು. ಸಂಜೆ ಮರಾಠಾ ಸಮುದಾಯ ಭವನದಲ್ಲಿ ಸಮಾಜದ ಸುಮಂಗಲೆಯರಿಂದ ತೊಟ್ಟಿಲೋತ್ಸವ ಹಾಗೂ ಬಾಲ ಶಿವಾಜಿಗೆ ನಾಮಕರಣ ಮಾಡಿ ಭಕ್ತಿ ಗೀತೆಗಳನ್ನು ಹೇಳಿ ಸಿಹಿಹಂಚಿ ಸಂಭ್ರಮಿಸಿದರು.

Share this article